ಕರ್ನಾಟಕ

ಜುಲೈ 28ಕ್ಕೆ ಬಿಬಿಎಂಪಿ ಚುನಾವಣೆಗೆ ಮುಹೂರ್ತ ನಿಗದಿ; 31ಕ್ಕೆ ಫಲಿತಾಂಶ

Pinterest LinkedIn Tumblr

bbmp

ಬೆಂಗಳೂರು: ಮುಂದಿನ ತಿಂಗಳು 28ಕ್ಕೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ.

ಒಂದೇ ಹಂತದಲ್ಲಿ ಎಲ್ಲ 198 ವಾರ್ಡ್‌ಗಳಲ್ಲಿ ಮತದಾನ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಪಿಎನ್‌. ಶ್ರೀನಿವಾಸಾಚಾರಿ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದ್ದಾರೆ.

ಜು.8 ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಕೆಗೆ ಜುಲೈ 15 ಕಡೆಯ ದಿನ. ನಾಮಪತ್ರ ವಾಪಸ್‌ ಪಡೆಯಲು ಜುಲೈ 20 ಕೊನೆಯ ದಿನ. ಜುಲೈ 16ಕ್ಕೆ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಯಲಿದೆ. ಜುಲೈ 28ರಂದು ಮತದಾನ ನಡೆಯಲಿದ್ದು, ಅಗತ್ಯ ಬಿದ್ದರೆ ಜುಲೈ 30 ರಂದು ಮರುಮತದಾನ ನಡೆಯಲಿದೆ. ಜುಲೈ 31ರಂದು ಮತ ಎಣಿಕೆ ಆಗಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.

6730 ಮತಗಟ್ಟೆ ಕೇಂದ್ರಗಳು ಸ್ಥಾಪನೆ ಆಗಲಿದ್ದು, ಇವಿಎಂ ಬಳಕೆಗೆ ಚುನಾವಣಾ ಆಯೋಗ ನಿರ್ಧರಿಸಿದೆ. 71,22,165 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮುಂದೂಡುವ ಸರಕಾರದ ಹುನ್ನಾರಕ್ಕೆ ಹೈಕೋರ್ಟ್ ಕಪಾಳ ಮೋಕ್ಷ ಮಾಡಿತ್ತು.ಸುಪ್ರೀಂಕೋರ್ಟ್ ಈಗಾಗಲೇ ನಿಗದಿಪಡಿಸಿರುವ ಗಡುವಿನಂತೆ ಆ.5ರೊಳಗೆ ಪಾಲಿಕೆಗೆ ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯಪೀಠ ಜೂನ್‌ 22ರಂದು ಆದೇಶಿಸಿತ್ತು. ಅನಗತ್ಯ ಮಧ್ಯಾಂತರ ಅರ್ಜಿ ಸಲ್ಲಿಸಿದ ಸರಕಾರ, ಎಲ್ಲ 8 ಪ್ರತಿವಾದಿಗಳಿಗೆ ತಲಾ 10 ಸಾವಿರದಂತೆ ದಂಡ ಕಟ್ಟಿಕೊಡುವಂತೆಯೂ ನ್ಯಾಯಾಲಯ ಆದೇಶಿಸಿತ್ತು.

ಮಾ.30ರಂದು ಏಕಸದಸ್ಯಪೀಠ ಮೇ 30ರೊಳಗೆ ಪಾಲಿಕೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿತ್ತು.ಅದನ್ನು ಪ್ರಶ್ನಿಸಿ ಸರಕಾರ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿತ್ತು. ಆನಂತರ ಆ ವಿಷಯ ಸುಪ್ರೀಂಕೋರ್ಟ್‌ಗೆ ಹೋದಾಗ ಆ ನ್ಯಾಯಾಲಯ ಮೂರು ತಿಂಗಳೊಳಗೆ ಅಂದರೆ ಆ.5ರೊಳಗೆ ಚುನಾವಣೆ ನಡೆಸುವಂತೆ ಆದೇಶಿಸಿತ್ತು.

Write A Comment