ಕರ್ನಾಟಕ

ಜೆಡಿಎಸ್ ಪಾದಯಾತ್ರೆ ಗಿಮಿಕ್ ಅಲ್ಲ: ಕುಮಾರಸ್ವಾಮಿ

Pinterest LinkedIn Tumblr

hdk20

ಚಿತ್ರದುರ್ಗ,ಜೂ.22: ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ, ಧಾರವಾಡದಿಂದ ಬೆಳಗಾವಿವರೆಗೆ ಪಾದಯಾತ್ರೆ ಕೈಗೊಂಡಿದ್ದು, ಇದರಲ್ಲಿ ಯಾವುದೇ ಗಿಮಿಕ್ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಇಂದಿಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆ ಕುರಿತು ರಾಜ್ಯ ಸರ್ಕಾರದ ಕಣ್ಣು ತೆರೆಸಲು ಈ ಪಾದಯಾತ್ರೆ ನಡೆಸುತ್ತಿದ್ದೇವೆ. ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಗೆ ನನ್ನ ವಿರೋಧವಿಲ್ಲ ಎಂದು ಹೇಳಿದರು. ಪ್ರತಿಪಕ್ಷಗಳ ದನಿ ಅಡಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿವಿಧ ತಂತ್ರ ಹೆಣೆಯುತ್ತಿದ್ದು, ಯಾರದೇ, ಯಾವುದೇ ಬೆದರಿಕೆಗೆ ನಾವು ಜಗ್ಗುವುದಿಲ್ಲ ಎಂದು ಸವಾಲು ಹಾಕಿದರು.

ಡಿನೋಟಿಫಿಕೇಷನ್ ಹಗರಣದಲ್ಲಿ ಎಫ್‌ಐಆರ್ ದಾಖಲಿಸುವ ಮೂಲಕ ಬಿ.ಎಸ್.ಯಡಿಯೂರಪ್ಪನವರನ್ನು ಸಿದ್ದರಾಮಯ್ಯ ಕಾಡುತ್ತಿದ್ದು, ಅವರ ಮೇಲೆ ಕೆಟ್ಟ ದೃಷ್ಟಿ ಬಿದ್ದಂತಿದೆ ಎಂದು ಹೇಳಿದರು. ಡಿನೋಟಿಫಿಕೇಷನ್ ಹಗರಣದಲ್ಲಿ ಮತ್ತೆ ಎಫ್‌ಐಆರ್ ದಾಖಲಿಸುವ ಮೂಲಕ ಪ್ರತಿಪಕ್ಷಗಳ ದನಿ ಅಡಗಿಸಲು ಸಿದ್ದರಾಮಯ್ಯನವರಿಂದ ಸಾಧ್ಯವಿಲ್ಲ. ರಾಜ್ಯದ 6 ಕೋಟಿ ಜನರನ್ನು ಬಿಟ್ಟರೆ ನಾವು ಯಾರಿಗೂ ಹೆದರುವುದಿಲ್ಲ. ಜನರಿಗೆ ಮಾತ್ರ ಗೌರವ ಕೊಡುತ್ತೇವೆ ಎಂದು ನುಡಿದರು.

ಸಿದ್ದರಾಮಯ್ಯನವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ 3 ಸಾವಿರ ಕೋಟಿ ಲೂಟಿ ಬಗ್ಗೆ ಮೊದಲು ಕ್ರಮ ಕೈಗೊಳ್ಳಲಿ. ಆಮೇಲೆ ಲೋಕಾಯುಕ್ತ ಮೂಲಕ ಎಫ್‌ಐಆರ್ ದಾಖಲಿಸಿ ಬೆದರಿಸುವ ತಂತ್ರ ಅನುಸರಿಸಲಿ ಎಂದರು. ಸಿಐಡಿ ಮುಖಾಂತರ ನಮ್ಮನ್ನು ಬೆದರಿಸಿ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಈ ಹಿಂದೆ ಯಡಿಯೂರಪ್ಪ ಮಾಡಿರುವ ಸಹಾಯವನ್ನು ಸಿಎಂ ನೆನೆಪು ಮಾಡಿಕೊಳ್ಳಲಿ ಎಂದು ಹೇಳಿದರು. ರಾಜ್ಯದಲ್ಲಿ ಉತ್ತಮ ಮಳೆಯಾದರೂ ಲೋಡ್‌ಶೆಡ್ಡಿಂಗ್ ಇನ್ನೂ ನಿಂತಿಲ್ಲ. ಗಣಿ ಅಕ್ರಮ ನಡೆಸಿರುವ ಕಂಪನಿಗಳ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿಲ್ಲ. ಬಾಕಿ ಉಳಿಸಿಕೊಂಡಿರುವ ಗಣಿ ಕಂಪೆನಿಗಳ ವಿಚಾರದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.

Write A Comment