ಕರ್ನಾಟಕ

ವಿದ್ಯಾರ್ಥಿ ಯಲ್ಲಾಲಿಂಗ ಹತ್ಯೆ ಪ್ರಕರಣ; ಹನುಮೇಶ ನಾಯಕನನ್ನು ವಶಕ್ಕೆ ತೆಗೆದುಕೊಂಡ ಸಿಐಡಿ

Pinterest LinkedIn Tumblr

yalla lingaa

ಯಲ್ಲಾಲಿಂಗ

ಕೊಪ್ಪಳ: ವಿದ್ಯಾರ್ಥಿ ಯಲ್ಲಾಲಿಂಗ ಹತ್ಯೆ ಪ್ರಕರಣದ ಮೂರನೇ ಆರೋಪಿ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಹನುಮೇಶ ನಾಯಕನನ್ನು ಸಿಐಡಿ ಪೊಲೀಸರು ಭಾನುವಾರ ಬೆಳಿಗ್ಗೆ ವಶಕ್ಕೆ ತೆಗೆದುಕೊಂಡಿದ್ದಾರೆ.

ಗಂಗಾವತಿ ಸಿಪಿಐಗಳಾದ ಪ್ರಭಾಕರ ಧರ್ಮಟ್ಟಿ ಮತ್ತು ಕಾಳಿಕೃಷ್ಣ ಜತೆಗೆ ಗಂಗಾವತಿ ತಾಲ್ಲೂಕು ಹುಲಿಹೈದರ ಗ್ರಾಮಕ್ಕೆ ಬಂದ ಸಿಐಡಿ ಪೊಲೀಸರು ಆರೋಪಿಯ ನಿವಾಸದಿಂದಲೇ ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಹೆಚ್ಚಿನ ವಿಚಾರಣೆಗಾಗಿ ಆತನನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬಾರದಂತೆ ಬಂದೋಬಸ್ತ್‌ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಪಿ.ರಾಜಾ ಹೇಳಿದರು.

ಪ್ರಕರಣದ ವಿವರ: ಹುಲಿಹೈದರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕನಕಾಪುರದ ರಸ್ತೆ, ಒಳಚರಂಡಿ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಗ್ರಾಮದ ವಿದ್ಯಾರ್ಥಿ ಯಲ್ಲಾಲಿಂಗ ಟಿವಿ ವಾಹಿನಿಗೆ ಹೇಳಿಕೆ ಕೊಟ್ಟಿದ್ದ. ಇದರಿಂದ ಕೋಪಗೊಂಡ ಗ್ರಾಮ ಪಂಚಾಯ್ತಿ ಸದಸ್ಯರಾದ ಬಾಳನಗೌಡ, ಪರಸಪ್ಪ ಮತ್ತಿತರರು ಯಲ್ಲಾಲಿಂಗ ವಿರುದ್ಧ ಹರಿಹಾಯ್ದಿದ್ದರು.

ಜ. 10ರಂದು ಕೊಪ್ಪಳದ ರೈಲು ಹಳಿಯಲ್ಲಿ ಯಲ್ಲಾಲಿಂಗನ ಶವ ಪತ್ತೆಯಾಗಿತ್ತು. ಗದಗ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಮೊದಲಿಗೆ ಆತ್ಮಹತ್ಯೆ ಎಂದು ಪ್ರಕರಣ ದಾಖಲಾಗಿತ್ತು. ಯಲ್ಲಾಲಿಂಗನ ಕುಟುಂಬದವರ ದೂರಿನ ಮೇರೆಗೆ ತನಿಖೆ ನಡೆದು ಕೊಲೆ ಎಂದು ದೃಢಪಟ್ಟ ಬಳಿಕ ಪ್ರಕರಣ ಕೊಪ್ಪಳ ನಗರ ಠಾಣೆಗೆ ಏ. 8ರಂದು ಹಸ್ತಾಂತರಗೊಂಡಿತು.

ಮೇ 15ರಂದು ಹನುಮೇಶ ನಾಯಕನ ಪುತ್ರ, ಪ್ರಕರಣದ ಮೊದಲ ಆರೋಪಿ ಮಹಾಂತೇಶ ನಾಯಕ, ಆತನ ಸ್ನೇಹಿತರಾದ ಮನೋಜ್‌, ದುರ್ಗಪ್ಪ ಅವರನ್ನು ಬಂಧಿಸಲಾಯಿತು. ನಂತರ ಗ್ರಾಮ ಪಂಚಾಯ್ತಿ ಸದಸ್ಯ ಬಾಳನಗೌಡ, ಪರಸಪ್ಪ, ಕಾಡು ಮಂಜ ಎಂಬ ಆರೋಪಿಗಳನ್ನೂ ಬಂಧಿಸಲಾಯಿತು. ಆದರೆ, ಪ್ರಕರಣದ ಮೂರನೇ ಆರೋಪಿ ಹನುಮೇಶ ನಾಯಕನನ್ನು ಬಂಧಿಸಬೇಕು ಎಂದು ಒತ್ತಾಯಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ಹನುಮೇಶ ನಾಯಕನಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ದೂರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂಬ ಒತ್ತಡವೂ ಜೋರಾಗಿತ್ತು. ಪ್ರಕರಣದ ತನಿಖೆಯನ್ನು ಜೂನ್‌ 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಐಡಿಗೆ ವಹಿಸಿದ್ದರು.

Write A Comment