ಕರ್ನಾಟಕ

ಬಿಬಿಎಂಪಿ ಕಸ ವಿಲೇವಾರಿ; ಸಚಿವರ ವಿರುದ್ಧ ಗ್ರಾಮಸ್ಥರು ಗರಂ

Pinterest LinkedIn Tumblr

gundlahalli-fi

ದೊಡ್ಡಬಳ್ಳಾಪುರ: ಬಿಬಿಎಂಪಿ ಕಸ ವಿಲೇವಾರಿ ಕೇಂದ್ರವಾಗಿರುವ ಟೆರ್ರಾಫಾರ್ಮ ಘಟಕವನ್ನು ಗುಂಡ್ಲಹಳ್ಳಿಯಿಂದ ಸ್ಥಳಾಂತರ ಮಾಡಬೇಕು ಎಂದು ಪಟ್ಟು ಹಿಡಿದಿದ್ದ ಸುತ್ತಮುತ್ತಲ ಗ್ರಾಮಸ್ಥರು ಸಚಿವರುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಮಂತ್ರಿ ರಾಮಲಿಂಗಾರೆಡ್ಡಿ ಮತ್ತು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಶಾಸಕ ಟಿ. ವೆಂಕಟರಮಣಯ್ಯ,ಬಿಬಿಎಂಪಿ ಅಧಿಕಾರಿಗಳಿಗೆ ಟೆರ್ರಾಫಾರ್ಮ ಘಟಕದ ಅವೈಜ್ಞಾನಿಕ ಕಸ ವಿಲೇವಾರಿ ಪರಿಣಾಮ ಗಬ್ಬೆದ್ದು ದುರ್ನಾತ ಬೀರುತ್ತಿರುವ ನೀರು ಮತ್ತು ಸತ್ತ ನೊಣಗಳನ್ನು ತೋರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನಂತರ ಸಚಿವರು, ಈ ಕುರಿತು ನಿರ್ಧಾರ ಕೈಗೊಳ್ಳಲು 2 ತಿಂಗಳ ಕಾಲಾವಕಾಶ ನೀಡಿ. ನಿಮ್ಮಬೇಡಿಕೆಯನ್ನು ಈಡೇರಿಸುತ್ತೇವೆ ಎಂದರು. ಎರಡು ತಿಂಗಳಲ್ಲ; ಎರಡು ದಿನವೂ ಕಾಲಾವಕಾಶ ಕೊಡೋದಿಲ್ಲ. ಈಗಾಗಲೇ ನಿಮ್ಮ ಭರವಸೆಗಳನ್ನು ಹತ್ತಾರು ಬಾರಿ ಕೇಳಿ ಕೇಳಿ ಸಾಕಾಗಿದೆ. ಇಂದಿನಿಂದಲೇ ಕಸ ವಿಲೇವಾರಿ ಸ್ಥಗಿತವಾಗಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಲಿಖಿತವಾಗಿ ನೀಡಿ

ಬಾಯಿ ಮಾತಿನ ಭರವಸೆಗಳು ನಮಗೆ ಬೇಕಿಲ್ಲ. 2 ತಿಂಗಳಲ್ಲಿ ಇಡೀ ಘಟಕವನ್ನು ಇಲ್ಲಿಂದ ಸ್ಥಳಾಂತರಿಸುತ್ತೇವೆ. ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯ ಯಾವ ಗ್ರಾಮದಲ್ಲೂ ಬಿಬಿಎಂಪಿ ಕಸ ವಿಲೇವಾರಿ ಮಾಡುವುದಿಲ್ಲ, ಈಗ ಇಲ್ಲಿ ಆಗಿರುವ ಮಾಲಿನ್ಯ ಮತ್ತು ಹದಗೆಟ್ಟಿರುವ ಜನಜೀವನಸರಿಪಡಿಸುತ್ತೇವೆ ಎಂದು ಲಿಖಿತವಾಗಿ ನೀಡಿ. ನಂತರ

ಪ್ರತಿಭಟನೆ ಹಿಂತೆಗೆದುಕೊಳ್ಳುವುದಾಗಿ ಗ್ರಾಮಸ್ಥರು ಹೇಳಿದರು. ಆದರೆ ಇದಕ್ಕೆ ತಾಂತ್ರಿಕ ಕಾರಣಗಳನ್ನು ನೀಡಿದ ಸಚಿವರ ವಿರುದ್ದ ಮತ್ತೆ ಆಕ್ರೋಶ ವ್ಯಕ್ತವಾಯಿತು

ಲಾರಿಗಳು ಹಿಂದಕ್ಕೆ

ಈ ಮಧ್ಯೆ ಸಂಧಾನದ ಹಗ್ಗಜಗ್ಗಾಟ ನಡೆಯುತ್ತಿರುವಾಗಲೇ ಸಾಲುಗಟ್ಟಲೆ ನಿಂತಿದ್ದ ಕಸದ ಲಾರಿಗಳಲ್ಲಿ ಹತ್ತಾರು ಲಾರಿಗಳು ಸ್ಥಳದಿಂದ ಹಿಂತಿರುಗಿವೆ. ಕಸದ ಲಾರಿ ಚಾಲಕರು ಒಬ್ಬೊಬ್ಬರಾಗಿ ಲಾರಿಗಳನ್ನು ವಾಪಸ್ ಕೊಂಡೊಯ್ಯುತ್ತಿದ್ದಾರೆ. ಸಂಜೆ 6 ಗಂಟೆಗೆ ಆರಂಭವಾದ ಮಾತುಕತೆ ರಾತ್ರಿ 9 ಗಂಟೆಯಾದರೂ ಇನ್ನೂ ಮುಂದುವರೆದಿದೆ. ಹುಲಿಕುಂಟೆ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮನವೊಲಿಕೆ ಸಭೆ ನಡೆಯುತ್ತಿದೆ.

Write A Comment