ಕರ್ನಾಟಕ

ಹದಿನೈದು ಹೆಣ್ಣು ಹೆತ್ತ ಮಹಾತಾಯಿ…; ಆಸ್ಪತ್ರೆಯಲ್ಲೇ ಮಗು; ಮನೆಗೆ ಭೇಟಿ ನೀಡಿದ ಅಧಿಕಾರಿಗಳಿಂದ ಬುದ್ದಿವಾದ

Pinterest LinkedIn Tumblr

hev

* ಭೀಮರಾವ್ ಬುರಾನಪುರ ಬೀದರ್
ಗಂಡು ಮಗು ಬೇಕು ಎನ್ನುವ ಹಂಬಲದಿಂದ ಇಲ್ಲೊಬ್ಬ ಮಹಿಳೆ 15 ಹೆಣ್ಣು ಮಕ್ಕಳನ್ನು ಹೆತ್ತಿದ್ದಾಳೆ. ಇತ್ತೀಚೆಗೆ ಹದಿನೈದನೇ ಮಗುವೂ ಹೆಣ್ಣಾದ ಕಾರಣ ಅದನ್ನು ಆಕೆ ಆಸ್ಪತ್ರೆಯಲ್ಲೇ ಬಿಟ್ಟು ಹೋಗಿದ್ದರಿಂದ ಇಡೀ ಪ್ರಕರಣ ಬೆಳಕಿಗೆ ಬಂದಿದ್ದು, ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ.

ಇಲ್ಲಿನ ಸಿಂಧೋಲ್ ತಾಂಡಾದ ಸೇಠಾಣಿಬಾಯಿಯೇ ಈ ಮಹಾತಾಯಿ. ಕಳೆದ ಗುರುವಾರ ಬಗ್ದಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದ ಆಕೆ ಹೆರಿಗೆಯಾದ ಒಂದೇ ಗಂಟೆಯಲ್ಲಿ ತನ್ನ ಕರುಳ ಕುಡಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಳು. ಆಸ್ಪತ್ರೆ ಸಿಬ್ಬಂದಿ ಬಗ್ದಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಸೇಠಾಣಿಬಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದರೂ ಮಗುವನ್ನು ಸಾಕಲು ಅವಳು ಒಪ್ಪಲಿಲ್ಲ. ಸತತವಾಗಿ ಹೆಣ್ಣುಮಕ್ಕಳೇ ಹುಟ್ಟುತ್ತಿರುವುದು ಮತ್ತು ಬಡತನದ ಕಾರಣ ಈಕೆ ಹೀಗೆ ವರ್ತಿಸಿದ್ದಳು.

ಭಾನುವಾರ ಆಕೆಯ ಮನೆಗೆ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಭೇಟಿ ನೀಡಿದ್ದರು. ”ನನಗೆ ಮಗು ಸಾಕುವ ಶಕ್ತಿ ಇಲ್ಲ. ನನ್ನ ಮಗುವನ್ನು ದತ್ತು ಕೇಂದ್ರಕ್ಕೆ ನೀಡುವೆ,” ಎಂದು ಆಕೆ ಸ್ಪಷ್ಟವಾಗಿ ತಿಳಿಸಿದಳು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಎಸ್. ಇಟಗಂಪಳ್ಳಿ ಮತ್ತು ಇನ್ನೊಬ್ಬ ಅಧಿಕಾರಿ ಇಂದುಮತಿ ಅವರು ಕುಟುಂಬದ ಸ್ಥಿತಿಗತಿಯ ಸಮಗ್ರ ಮಾಹಿತಿ ಪಡೆದರಲ್ಲದೆ ಕುಟುಂಬ ಕಲ್ಯಾಣ ಯೋಜನೆಯಡಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಆಕೆಗೆ ತಿಳಿಹೇಳಿದರು.

”ಜೀವನೋಪಾಯಕ್ಕಾಗಿ ಹೈನುಗಾರಿಕೆ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಡಿ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಸಾಲ ಯೋಜನೆಯಡಿ 1 ಲಕ್ಷ ರೂ. ಸಾಲ (10 ಸಾವಿರ ರೂ. ಸಬ್ಸಿಡಿ) ನೀಡಲು ನಿರ್ಧರಿಸಲಾಗಿದೆ. ಸೇಠಾಣಿಬಾಯಿಯ 7 ವರ್ಷದ ಮಗಳು ಅಮೋನಿಕಾಗೆ ಬೀದರ್ ಜಿಲ್ಲೆ ಮೈಲೂರಿನಲ್ಲಿರುವ ಸರಕಾರಿ ಬಾಲಕಿಯರ ಬಾಲಮಂದಿರದಲ್ಲಿ ಉಚಿತ ಪ್ರವೇಶ, ಶಿಕ್ಷಣ ನೀಡಲು ನಿರ್ಧರಿಸಲಾಗಿದೆ. ಬಾಣಂತಿಯಾಗಿರುವುದರಿಂದ ಸೇಠಾಣಿಬಾಯಿಗೆ ಪೌಷ್ಟಿಕಾಂಶ, ಆಹಾರ ಪೂರೈಕೆ ಮಾಡಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ.” ಎಂದು ಇಟಗಂಪಳ್ಳಿ ತಿಳಿಸಿದರು.

”ಈಗಿರುವ ಮಕ್ಕಳಿಗೆ ಮದುವೆ ಮಾಡುವುದು ನನಗೆ ಚಿಂತೆಯಾಗಿದೆ. ನನಗೆ ಒಂಚೂರು ಜಮೀನಿಲ್ಲ. ಕೂಲಿ ಕೆಲಸ ಬಿಟ್ಟರೆ ಬೇರೆ ಏನೂ ಆಧಾರವಿಲ್ಲ. ಗಂಡ ಕೆಲಸಕ್ಕೆಂದು ಮುಂಬೈಗೆ ಹೋಗಿದ್ದಾರೆ,” ಎಂದು ಸೇಠಾಣಿಬಾಯಿ ಅಧಿಕಾರಿಗಳ ಮುಂದೆ ಗೋಳು ತೋಡಿಕೊಂಡಳು. —

ಕೂಲಿ ಜೀವನಾಧಾರ ಮೂಲತಃ ಮಹಾರಾಷ್ಟ್ರದವಳಾದ ಸೇಠಾಣಿಬಾಯಿ ಬೀದರ್‌ಗೆ ಮದುವೆಯಾಗಿ ಬಂದಿದ್ದಾಳೆ. ತುಂಡು ಜಮೀನೂ ಇಲ್ಲ. ಜೀವನೋಪಾಯಕ್ಕಾಗಿ ಗಾರೆ ಮತ್ತಿತರ ಕೂಲಿ ಕೆಲಸ ಮಾಡುತ್ತಾಳೆ. ಆಕೆಯ ಗಂಡ ಮುಂಬೈನಲ್ಲಿ ಸಿಮೆಂಟ್ ಮೂಟೆ ಎತ್ತುವ ಕೂಲಿ ಮಾಡುತ್ತಿದ್ದಾನೆ. ವರ್ಷಕ್ಕೆರಡು ಬಾರಿ ಊರಿಗೆ ಬಂದು 10-15 ದಿನ ಇದ್ದು ಹೋಗುತ್ತಾನೆ. ಆಕೆಯ ಸಣ್ಣ ಮಕ್ಕಳು ಮನೆ ಬಳಿ ಆಡಿಕೊಂಡಿರುತ್ತವೆ. ಇರುವವರಲ್ಲೇ ದೊಡ್ಡವಳಾದ 14 ವರ್ಷದ ಮಗಳನ್ನೂ ಸಣ್ಣಪುಟ್ಟ ಕೆಲಸಗಳಿಗೆ ಕಳಿಸುತ್ತಾಳೆ. ಆಕೆಗೀಗ 42 ವರ್ಷ ವಯಸ್ಸು. 15 ಹೆಣ್ಣು ಮಕ್ಕಳ ಪೈಕಿ ಆರು ಹೆಣ್ಣು ಮಕ್ಕಳು ಹುಟ್ಟುತ್ತಲೇ ಮೃತಪಟ್ಟಿದ್ದು ಒಂಬತ್ತು ಮಕ್ಕಳು ಜೀವಂತವಾಗಿವೆ. ಅದರಲ್ಲಿ ಮೂವರ ಮದುವೆಯಾಗಿದೆ. ಆ ಪೈಕಿ ಇಬ್ಬರನ್ನು ಆಕೆಯ ಸಂಬಂಧಿಕರೇ ಮದುವೆ ಆಗಿದ್ದಾರೆ. ಮೂರನೇ ಮಗಳಾದ ಬಬಿತಾಳ ಮದುವೆಯನ್ನು ಗ್ರಾಮಸ್ಥರು ಚಂದಾ ಹಣ ಸಂಗ್ರಹಿಸಿ ನೆರವೇರಿಸಿದ್ದಾರೆ. —

ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಅವರ ಖರ್ಚು ನಿಭಾಯಿಸುವುದು ಹೇಗೆ? ಹೊಟ್ಟೆ ತುಂಬುವುದು ಹೇಗೆ? ಮಕ್ಕಳನ್ನು ಸಾಕುವುದೇ ದುಸ್ತರವಾಗಿದೆ. ಈಗ ಮತ್ತೊಂದು ಹೆಣ್ಣು ಮಗು ಹುಟ್ಟಿದೆ. ಅದನ್ನು ಹೇಗೆ ಸಾಕಲಿ. ಹೆರಿಗೆ ಆದ ದಿನ ಗಂಡ ಮುಂಬೈನಿಂದ ಫೋನ್ ಮಾಡಿದ್ದ. ಮತ್ತೆ ಹೆಣ್ಣೇ ಹುಟ್ಟಿದೆ ಎಂಬ ಮಾತು ಕೇಳಿದವನೇ ಕರೆ ಕಟ್ ಮಾಡಿದ್ದಾನೆ. ಅಂದಿನಿಂದ ಇಂದಿನವರೆಗೂ ಸೇಠಾಣಿಬಾಯಿಗೆ ಆತನ ಫೋನ್ ಕರೆ ಬಂದಿಲ್ಲ. -ಸೇಠಾಣಿಬಾಯಿ ರಾಠೋಡ್, 15 ಹೆಣ್ಣು ಹೆತ್ತ ತಾಯಿ —

ಈಗ ಜನಿಸಿರುವ 15ನೇ ಹೆಣ್ಣು ಶಿಶು ತುಂಬಾ ಅಂದವಾಗಿದೆ. ಮೂರೂವರೆ ಕೆಜಿ ಇದೆ. ಆರೋಗ್ಯಕರವಾಗಿದೆ. ಸದ್ಯಕ್ಕೆ ಈ ಮಗು ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಯಲ್ಲಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ. ನಂತರ ಮಕ್ಕಳ ದತ್ತು ಕೇಂದ್ರಕ್ಕೆ ನೀಡಲಾಗುತ್ತದೆ. – ಶಶಿಧರ ಕೋಸಂಬೆ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ

Write A Comment