ಕರ್ನಾಟಕ

ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದನ್ನು ಮೋದಿಯೇ ತಡೆದರು: ದೇವೇಗೌಡ

Pinterest LinkedIn Tumblr

deve

ಬೆಂಗಳೂರು: ಒಂದು ವೇಳೆ ಬಿಜೆಪಿ 276 ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸಿ ನರೇಂದ್ರ ಮೋದಿ ಪ್ರಧಾನಿಯಾದಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದೆ. ಅದರಂತೆ ರಾಜೀನಾಮೆ ಕೂಡಾ ನೀಡಲು ತೆರಳಿದ್ದಾಗ ಮೋದಿಯವರೇ ರಾಜೀನಾಮೆ ನೀಡದಂತೆ ತಡೆದರು ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

ಮಾಧ್ಯಮಗಳ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು 24 ಗಂಟೆಗಳ ಕಾಲ ಕೆಲಸ ಮಾಡುವ ರಾಜಕಾರಣಿ. ಆದರೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ 54 ವರ್ಷಗಳಿಂದ ರಾಜಕಾರಣದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ನನಗೆ ಇದೀಗ 83 ವರ್ಷಗಳಾಗಿದ್ದರಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರೆ ರಾಜಕೀಯದಿಂದ ಆಸಕ್ತಿ ಕಳೆದುಕೊಂಡಿದ್ದೇನೆ ಎಂದರ್ಥವಲ್ಲ. ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ತಿಳಿಸಿದರು.

ಜೆಡಿಎಸ್ ತೊರೆದ ಇತರ ನಾಯಕರಾದ ಬಿ.ಎಲ್.ಶಂಕರ್,ವಿ.ಎಸ್.ಉಗ್ರಪ್ಪ, ಸಿಎಂ.ಇಬ್ರಾಹಿಂ, ಆರ್‌.ವಿ.ದೇಶಪಾಂಡೆ, ವಿ.ಶ್ರೀನಿವಾಸ್ ಪ್ರಸಾದ್ ಮತ್ತು ಎಚ್‌.ಸಿ ಮಹಾದೇವಪ್ಪ ಅನಗತ್ಯವಾಗಿ ನನ್ನನ್ನು ಟೀಕಿಸುವುದಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯನವರಿಗೆ ನನ್ನನ್ನು ಟೀಕಿಸುವುದೇ ಕೆಲಸವಾಗಿದೆ ಎಂದರು.

ಕಳೆದ 2006ರಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ದೇವೇಗೌಡರ ಸಂಚಿನಿಂದ ತಪ್ಪಿಹೋಗಿದೆ ಎನ್ನುವ ಅನುಮಾನ ಸಿದ್ದರಾಮಯ್ಯನವರನ್ನು ಕಾಡುತ್ತಿದೆ. ಆದರೆ, ಒಂದು ವೇಳೆ ಸಿದ್ದರಾಮಯ್ಯನವರನ್ನು ಸಿಎಂ ಮಾಡಿದ್ದಲ್ಲಿ ಪಕ್ಷ ಅಧಿಕಾರದಿಂದ ವಂಚಿತವಾಗುತ್ತಿತ್ತು. ಯಾಕೆಂದರೆ, ಅಂದು ಜನತಾದಳದಲ್ಲಿ 36 ಶಾಸಕರು ಲಿಂಗಾಯಿತರಾಗಿದ್ದರು. ಆದ್ದರಿಂದ ಜೆ.ಎಚ್‌.ಪಟೇಲರನ್ನು ಸಿಎಂ ಮಾಡಲಾಯಿತು ಎಂದು ಹಿಂದಿನ ರಹಸ್ಯವನ್ನು ದೇವೇಗೌಡರು ಬಿಚ್ಚಿಟ್ಟರು.

Write A Comment