ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ 4300 ಪಾಕಿಸ್ತಾನ್ ಮತ್ತು ಅಫ್ಘಾನಿಸ್ಥಾನ ನಾಗರಿಕರಿಗೆ ದೇಶದ ನಾಗರಿಕತ್ವ ನೀಡಿ ಆದೇಶ ಹೊರಡಿಸಿದೆ.
ನೆರೆರಾಷ್ಟ್ರಗಳಲ್ಲಿರುವ ಎರಡು ಲಕ್ಷ ನಿರಾಶ್ರಿತರಿಗೆ ದೇಶದ ಪೌರತ್ವ ನೀಡಬೇಕು ಎನ್ನುವ ಉದ್ದೇಶದ ಮೊದಲ ಹಂತದ ಅಂಗವಾಗಿ 4300 ವಿದೇಶಿ ನಾಗರಿಕರಿಗೆ ಪೌರತ್ವ ನೀಡಲಾಗಿದೆ. ಯುಪಿಎ ಸರಕಾರದ ಅವಧಿಯಲ್ಲಿ 1023 ವಿದೇಶಿಗರಿಗೆ ದೇಶದ ಪೌರತ್ವ ನೀಡಲಾಗಿತ್ತು.
ವಿದೇಶಗಳಲ್ಲಿರುವ ಹಿಂದುಗಳಿಗೆ ತಮರುಮನೆಯಾದ ಭಾರತದಲ್ಲಿ ಆಶ್ರಯ ನೀಡಬೇಕು ಎನ್ನುವು ಬಿಜೆಪಿ ನೀತಿಯನ್ನು ಪಾಲಿಸಿದ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಆದೇಶಧ ಮೇರೆಗೆ ವಿದೇಶಗಳಲ್ಲಿರುವ ಹಿಂದು ನಿರಾಶ್ರಿತರಿಗೆ ದೇಶದ ಪೌರತ್ವ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿರುವ ಹಿಂದುಗಳಿಗೆ ಭಾರತದ ನಾಗರಿಕರಂತೆ ಸ್ಥಾನಮಾನ ನೀಡಲಾಗುವುದು ಎಂದು ಘೋಷಿಸಿದ್ದರು.
ಈಗಾಗಲೇ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನ ಮೂಲದ ಎರಡು ಲಕ್ಷ ಹಿಂದು ಸಮುದಾಯದ ವ್ಯಕ್ತಿಗಳು ಭಾರತದಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.
ಮೋದಿ ಸರಕಾರ ಮೇ 2014ರಲ್ಲಿ ಕೇಂದ್ರದಲ್ಲಿ ಅಸ್ಥಿತ್ವಕ್ಕೆ ಬಂದ ನಂತರ ಸುಮಾರು 19 ಸಾವಿರ ನಿರಾಶ್ರಿತರಿಗೆ ಮಧ್ಯಪ್ರದೇಶದಲ್ಲಿ ವಾಸಿಸಲು ದೀರ್ಘಾವಧಿಯ ವೀಸಾ ನೀಡಲಾಗಿದೆ. ರಾಜಸ್ಥಾನದಲ್ಲಿ 11 ಸಾವಿರ ಮತ್ತು ಗುಜರಾತ್‌ನಲ್ಲಿ 4 ಸಾವಿರ ನಿರಾಶ್ರಿತರಿಗೆ ವೀಸಾ ನೀಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
