ಕರ್ನಾಟಕ

`ಪ್ರತ್ಯೇಕ ರಾಜ್ಯ` ಹತಾಶೆಯ ಕೂಗಷ್ಟೆ ಒಡಕು ಧ್ವನಿಯಲ್ಲ: ಚಂಪಾ

Pinterest LinkedIn Tumblr

champa

ಬೆಂಗಳೂರು, ಜೂ.14: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗಿನ ಹಿಂದೆ ಇರುವುದು ನೋವು, ಹತಾಶೆಯೇ ಹೊರತು ರಾಜ್ಯ ಒಡೆಯುವ ಬಯಕೆಯಲ್ಲ ಎಂದು ಖ್ಯಾತ ಸಾಹಿತಿ ಚಂದ್ರಶೇಖರ ಪಾಟೀಲ ಹೇಳಿದರು.

ಕನ್ನಡ ರಣಧೀರರ ಪಡೆ ನಗರದಲ್ಲಿಂದು ಆಯೋಜಿಸಿದ್ದ ಉತ್ತರ ಕರ್ನಾಟಕ ಅಭಿವೃದ್ಧಿ ಒಂದು ಸಿಂಚನಾಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು ಎನ್ನುವುದು ಎಲ್ಲರ ಬಯಕೆ, ಪ್ರತ್ಯೇಕ ಉತ್ತರ ಕರ್ನಾಟಕದ ಕೂಗಿಗೆ ಕಾರಣ ಏನು ಎನ್ನುವುದನ್ನು ಅರಿಯಬೇಕಿದೆ. ಏಕೀಕರಣವಾಗಿ 60 ವರ್ಷವಾದರೂ ತಮ್ಮ ಕನಸುಗಳು ಈಡೇರಿಲ್ಲ ಎನ್ನುವ ನೋವು ಅಲ್ಲಿನ ಜನರಲ್ಲಿದೆ ಎಂದರು.

ಪ್ರಭುತ್ವದಲ್ಲಿರುವವರು ಜನರ ನೋವು, ಅಹವಾಲುಗಳನ್ನು ಕೇಳಿಸಿಕೊಂಡು ಸಮಸ್ಯೆ ಪರಿಹಾರಕ್ಕೆ ಮುಂದಾದರೆ ಎಲ್ಲವೂ ಸರಿಹೋಗುತ್ತದೆ ಎಂದವರು ಹೇಳಿದರು. ಉತ್ತರ ಕರ್ನಾಟಕಕ್ಕೆ ಹಲವು ಕ್ಷೇತ್ರಗಳಲ್ಲಿ ತಾರತಮ್ಯವಾಗಿದೆ ಎಂಬ ಭಾವನೆಯಿದೆ. ಈ ಭಾವನೆಯನ್ನು ಹೋಗಲಾಡಿಸಿ ಸರ್ವರಿಗೂ ಸಮಪಾಲು ಸಮಬಾಳು ತತ್ವವನ್ನು ಪ್ರಭುತ್ವದಲ್ಲಿರುವವರು ಜಾರಿ ಮಾಡಿದರೆ ಯಾವುದೇ ಕೂಗಿಗೂ ಅರ್ಥ ಬರುವುದಿಲ್ಲ. ಕೇಳುವುದು ತಪ್ಪಲ್ಲ, ಕೇಳುವುದನ್ನು ಬೇರೆ ರೀತಿಯಲ್ಲಿ ಅರ್ಥೈಸುವುದು ಸರಿಯಲ್ಲ ಎಂದರು.

ಉತ್ತರ ಕರ್ನಾಟಕ ಅಭಿವೃದ್ಧಿಯ ಬಗ್ಗೆ ಎಲ್ಲ ಕನ್ನಡ ಪರ ಸಂಘಟನೆಗಳು ಒಟ್ಟಾಗಿ ಪರಸ್ಪರ ಪ್ರೀತಿ -ವಿಶ್ವಾಸದಿಂದ ಹೋರಾಟಕ್ಕೆ ಮುಂದಾಗಬೇಕು. ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು ಎಂದು ಚಂಪಾ ಹೇಳಿದರು.

ಬಿಜೆಪಿ ಪಿತೂರಿ: ಲಕ್ಷ್ಮಣ ಹೂಗಾರ

ಇದೇ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ ಲಕ್ಷ್ಮಣ ಹೂಗಾರ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹಿಂದೆ ಬಿಜೆಪಿಯ ಪಿತೂರಿ ಇದೆ. ರಾಜ್ಯಗಳನ್ನು ವಿಭಜಿಸಿ ತನ್ನ ತನ್ನ ರಾಜ್ಯಗಳನ್ನಾಗಿಸುವುದು ಬಿಜೆಪಿಯ ಗುಪ್ತ ಕಾರ್ಯಸೂಚಿ. ಮುಂದಿನ ದಿನಗಳಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕದ ಪ್ರಯತ್ನವನ್ನು ಬಿಜೆಪಿ ನಡೆಸಲಿದೆ ಎಂದರು.

ಪ್ರತ್ಯೇಕ ಉತ್ತರ ಕರ್ನಾಟಕದ ಮಾತು ಹೇಳುತ್ತಿರುವವರು ಸ್ವಾರ್ಥ ರಾಜಕಾರಣಿಗಳು. ಜನರಿಗೆ ಮಾತ್ರ ಆ ಭಾವನೆಯಿಲ್ಲ. ಹಳೆ ಮೈಸೂರನ್ನು ಒಕ್ಕಲಿಗರು, ಉತ್ತರ ಕರ್ನಾಟಕದಲ್ಲಿ ಲಿಂಗಾಯಿತರು ಅಧಿಕಾರದಲ್ಲಿರಬೇಕು ಎಂಬ ಪಿತೂರಿ ಈ ಪ್ರತ್ಯೇಕತೆಯ ಕೂಗಿನ ಹಿಂದಿದೆ ಎಂದರು.

ಜನಕ್ಕೆ ಬೇಕಿಲ್ಲ

ಇದೇ ಸಂದರ್ಭದಲ್ಲಿ ಮಾತನಾಡಿದ ಗದಗಿನ ಕನ್ನಡ ಹೋರಾಟ ಸಮಿತಿಯ ಎಚ್.ಎಸ್ ಸೋಮ್‌ಪುರ ರಾಜಕೀಯ ಕಾರಣಗಳಿಗಾಗಿ ಪ್ರತ್ಯೇಕ ಉತ್ತರ ಕರ್ನಾಟಕದ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಜನರ ವಿರೋಧವಿದೆ. ಜನರಿಗೆ ಬೇಕಾಗಿರುವುದು ಸಮಸ್ಯೆಗಳ ಪರಿಹಾರ. ಈ ಸಮಸ್ಯೆಗಳನ್ನು ಪರಿಹರಿಸುವಂತೆ ಚಂಪಾ ಅವರ ನೇತೃತ್ವದಲ್ಲಿ ನಿಯೋಗ ತೆರಳಿ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಆಗಬೇಕಿದೆ ಎಂದರು.

ಈ ಸಭೆಯಲ್ಲಿ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್, ಸಿಪಿಎಂನ ರಾಜ್ಯ ಕಾರ್ಯದರ್ಶಿ ಪಿ.ಎನ್. ನಾಗರಾಜ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ, ನಗರಾಧ್ಯಕ್ಷ ಶಿವಾನಂದಶೆಟ್ಟಿ, ಜಯಕರ್ನಾಟಕ ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ್, ಆರ್‌.ಎಸ್‌.ಎನ್ ಗೌಡ, ಎಂ. ಮೋಹನ್ ಕುಮಾರ್ ಗೌಡ, ರಣಧೀರ ಪಡೆ ರಾಜ್ಯಾಧ್ಯಕ್ಷ ಹರೀಶ್ ಕುಮಾರ್ ಸೇರಿದಂತೆ ಹಲವು ಕನ್ನಡ ಚಳವಳಿ ಮುಖಂಡರುಗಳು ಉಪಸ್ಥಿತರಿದ್ದರು.

Write A Comment