ಕರ್ನಾಟಕ

ಕಬ್ಬನ್ ಪಾರ್ಕ್ ನಿರ್ವಹಣಾ ಪ್ರಾಧಿಕಾರವನ್ನು ವಿರೋಧಿಸಿ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ

Pinterest LinkedIn Tumblr

vatal

ಬೆಂಗಳೂರು, ಜೂ.14: ಕಬ್ಬನ್ ಪಾರ್ಕ್ ನಿರ್ವಹಣಾ ಪ್ರಾಧಿಕಾರವನ್ನು ವಿರೋಧಿಸಿ ಕಬ್ಬನ್ ಪಾರ್ಕ್‌ನಲ್ಲಿ ಪ್ರತಿಭಟನೆ ನ‌ಡೆಸಲು ಯತ್ನಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹಾಗೂ ಇತರ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ.

ಕಬ್ಬನ್ ಪಾರ್ಕ್‌ನ ಬಳಿಯಿರುವ ವಿಕ್ಟೋರಿಯಾ ರಾಣಿ ಪ್ರತಿಮೆ ಮುಂಭಾಗ ಕಬ್ಬನ್ ಪಾರ್ಕ್‌ನ್ನು ಖಾಸಗಿಯವರಿಗೆ ವಹಿಸಿದರೆ ಉಗ್ರ ಹೋರಾಟ ಅನಿವಾರ್ಯ ಎಂದು ವಾಟಾಳ್ ಎಚ್ಚರಿಕೆ ನೀಡಿದರು.

ಕಬ್ಬನ್ ಪಾರ್ಕ್ ಉಸ್ತುವಾರಿಯನ್ನು ತೋಟಗಾರಿಕೆ ಇಲಾಖೆಯವರೇ ನೋಡಿಕೊಳ್ಳಬೇಕೆಂದು ಒತ್ತಾಯಿಸಿ ಉರುಳು ಸೇವೆ ಕೂಡ ನಡೆಸಿ ನಂತರ ಅಲ್ಲಿ ನೆರೆದಿದ್ದವರಿಗೆ ಕಡ್ಲೆಕಾಯಿ ಹಾಗೂ ಕಡ್ಲೆಪುರಿ ನೀಡುವ ಮೂಲಕ ವಾಟಾಳ್ ವಿನೂತನ ಪ್ರತಿಭಟನೆ ನಡೆಸಿದರು.

ಐತಿಹಾಸಿಕ ಕಬ್ಬನ್ ಪಾರ್ಕ್‌ನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡುವುದು ಬೇಡ. ಕಳೆದ 53 ವರ್ಷಗಳಿಂದ ಕಬ್ಬನ್ ಪಾರ್ಕ್‌ನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

ಕಬ್ಬನ್ ಪಾರ್ಕ್‌ನಲ್ಲಿ ಗಾಳಿ, ಮಳೆಗೆ ಬಿದ್ದು ಹೋಗಲಿರುವ ಮರಗಳನ್ನು ಕತ್ತರಿಸಿ ವಿವಿಧ ಜಾತಿಯ ಇನ್ನಷ್ಟು ಮರಗಳನ್ನು ನೆಡಬೇಕೆಂದು ಅವರು ಆಗ್ರಹಪಡಿಸಿದರು.

ಕಬ್ಬನ್ ಪಾರ್ಕ್‌ನಲ್ಲಿರುವ ವಿಕ್ಟೋರಿಯಾ ರಾಣಿ ಒಳಗೊಂಡಂತೆ ಹಲವು ಆಂಗ್ಲರ ಪ್ರತಿಮೆಗಳನ್ನು ತೆರವುಗೊಳಿಸಬೇಕು. 100 ಅಡಿ ಎತ್ತರದ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಪ್ರತಿಮೆ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

Write A Comment