ಕರ್ನಾಟಕ

ಛಲ ಬಿಡದೆ ಮಹಿಳಾ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಹಳ್ಳಿ ಹುಡುಗಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ವೇದಾ

Pinterest LinkedIn Tumblr

veda

ಮೈಸೂರು, ಜೂ.14: ಹುಡುಗರ ಜೊತೆ ಕ್ರಿಕೆಟ್ ಆಡುತ್ತಾಳೆ ಎಂಬ ಮಾತಿಗೆ ತಲೆಬಾಗಿದ್ದರೆ ಇಂದು ಭಾರತೀಯ ಮಹಿಳಾ ಕ್ರಿಕೆಟ್ ಟೀಮ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿರಲಿಲ್ಲವೇನೋ ಈ ಛಲಗಾರ್ತಿ ಗ್ರಾಮೀಣ ಪ್ರತಿಭೆ.

ಹೌದು, ಹೆಣ್ಣು ಮಕ್ಕಳು ಆಟೋಟಗಳಲ್ಲಿ ಪಾಲ್ಗೊಂಡಾಗ ಸಮಾಜದಲ್ಲಿ ಮೂದಲಿಕೆಯ ಮಾತುಗಳು ಜಾಸ್ತಿ. ಇದನ್ನೆಲ್ಲ ಲೆಕ್ಕಿಸದೆ ಒಮ್ಮೆ ಯಶಸ್ವಿಯಾದರೆ ಆ ಮಹಿಳೆಯ ಗುಣಗಾನ ಅಷ್ಟಿಷ್ಟಲ್ಲ ಎಂಬುದಕ್ಕೆ ಭಾರತೀಯ ಮಹಿಳಾ ಕ್ರಿಕೆಕ್ ಟೀಮ್‌ನಲ್ಲಿ ಸ್ಥಾನ ಪಡೆದು ಆಡುತ್ತಿರುವ 22 ವರ್ಷದ ವೇದಾಕೃಷ್ಣಮೂರ್ತಿ ಸಾಕ್ಷಿಯಾಗಿದ್ದಾರೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಸ್.ಜೆ. ಕೃಷ್ಣಮೂರ್ತಿರವರ ಮಗಳಾದ ವೇದ, ಈಗಾಗಲೇ 10 ಏಕದಿನ ಪಂದ್ಯ ಹಾಗೂ 17 ಟ್ವೆಂಟಿ-20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಇವರು, ಮಾನಸಗಂಗೋತ್ರಿಯ ಗ್ಲೇಡ್ ಮೈದಾನದಲ್ಲಿ ಇಂದಿನಿಂದ ಆರಂಭವಾಗಿರುವ ಮಹಿಳಾ ಚಾಲೆಂಜರ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದಾರೆ.

vedaaa

ಕ್ರಿಕೆಟ್ ತಿರುವು

ಕಡೂರಿನಲ್ಲಿ ಹುಡುಗರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ಮನೆಯಲ್ಲಿ ಎಲ್ಲರೂ ಬೈಯುತ್ತಿದ್ದರು. ಈ ಹುಚ್ಚಾಟವನ್ನು ಬಿಟ್ಟು ಓದುವ ಕಡೆ ಮನಸುಮಾಡು ಎಂದು ಸಲಹೆ ನೀಡುತ್ತಿದ್ದರು. ಹೀಗೆ ಯಾವುದೇ ಒಂದು ಪತ್ರಿಕೆಯಲ್ಲಿ ಮಹಿಳೆಯರು ಕ್ರಿಕೆಟ್ ಆಡುವ ಫೋಟೋ ನೋಡಿದಾಗ ನಾನು ಕೂಡ ಕ್ರಿಕೆಟ್‌ನಲ್ಲಿಯೇ ಸಾಧನೆ ಮಾಡಬೇಕು ಎಂಬ ಪ್ರಬಲ ಆಸೆ ಮೂಡಿತು.

ಅದರಂತೆ ನನ್ನ ತಂದೆ ಕೃಷ್ಣಮೂರ್ತಿ ಅವರಿಗೆ ಮಹಿಳೆಯರು ಕ್ರಿಕೆಟ್ ಆಡುವ ಫೋಟೋ ತೋರಿಸಿ ನಾನು ಇವರಂತೆ ಸಾಧನೆ ಮಾಡಬೇಕೆಂದು ಹಠ ಹಿಡಿದೆ. ನಮ್ ತಂದೆ ಅಂದು ಓ.ಕೆ. ಅಂದ್ದಿದ್ದಕ್ಕೆ ನಾನು ಈ ಮಟ್ಟಕ್ಕೇರಲು ಸಾಧ್ಯವಾಯಿತು ಎಂದು ನೆನಪುಗಳನ್ನು ಮೆಲುಕು ಹಾಕಿದರು ವೇದ ಕೃಷ್ಣಮೂರ್ತಿ.

ಮೊದಲಿಗೆ ಬೆಂಗಳೂರಿಗೆ ಬಂದು ಕರ್ನಾಟಕ ಇನ್ಸ್‌ಟಿಟ್ಯೂಟ್ ಆಫ್ ಕ್ರಿಕೆಟ್ ಅಕಾಡೆಮಿ ಸೇರಿ ತುಂಬ ಚೆನ್ನಾಗಿ ಅಭ್ಯಾಸ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾದೆ. ನಂತರ ಹಂತ ಹಂತವಾಗಿ ಬೆಳೆದು ಈಗ ಭಾರತೀಯ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆದಿದ್ದು, ಮುಂದಿನ ದಿನಗಳಲ್ಲಿ ಭಾರತ ಟೆಸ್ಟ್ ತಂಡ ಸ್ಥಾನ ಪಡೆಯುವ ಗುರಿ ಹೊಂದಿದ್ದೇನೆ ಎಂದು ತಮ್ಮ ಮನದ ಅಭಿಲಾಷೆಯನ್ನು ಹೊರಹಾಕಿದ್ದಾರೆ. ಇವರ ಈ ಸಾಧನೆ ಹೀಗೆ ಮುಂದುವರೆಯಲಿ ಎಂದು ನಾವೆಲ್ಲ ಆಶಿಸೋಣ.

Write A Comment