ಕರ್ನಾಟಕ

ಚಿಕಿತ್ಸೆಗಾಗಿ ಹಾಂಗ್‌ಕಾಂಗ್‌ನಿಂದ ಬೆಂಗಳೂರಿಗೆ ಬಂದಿದ್ದ ಯುವತಿ ವಾಪಾಸಾಗುವಾಗ ಅಪಘಾತಕ್ಕೆ ಬಲಿ

Pinterest LinkedIn Tumblr

32

ಬೆಂಗಳೂರು, ಜೂ.14: ಚಿಕಿತ್ಸೆಗಾಗಿ ಹಾಂಗ್‌ಕಾಂಗ್‌ನಿಂದ ಬಂದಿದ್ದ ಯುವತಿ ವಾಪಸ್ ತೆರಳುವಾಗ ಕಾರು ಅಪಘಾತದಲ್ಲಿ ದುರ್ಮರಣ ಹೊಂದಿರುವ ಘಟನೆ ಕಳೆದ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯ ವಿದ್ಯಾನಗರ ಫ್ಲೈಓವರ್ ಬಳಿ ಸಂಭವಿಸಿದೆ.

ಕಳೆದ ಒಂದು ತಿಂಗಳ ಹಿಂದೆ ತಾಯಿಯೊಂದಿಗೆ ಬೆಂಗಳೂರಿಗೆ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಇಂದು ಮುಂಜಾನೆ 2.30ರ ವಿಮಾನದಲ್ಲಿ ಹಾಂಗ್‌ಕಾಂಗ್‌ಗೆ ಹೋಗಲು ಮೆರು ಟ್ಯಾಕ್ಸಿಯಲ್ಲಿ ಪ್ರಯಾಣಿಸುವಾಗ ಜಾಗೃತಿ ಸಾದ್ವಾನಿ ದುರಂತ ಸಾವನ್ನಪ್ಪಿದ್ದಾರೆ.

ಘಟನೆ ವಿವರ: ಭಾರತಕ್ಕೆ ಚರ್ಮರೋಗ ಚಿಕಿತ್ಸೆಗಾಗಿ ಬಂದು ಫ್ರೇಸರ್‌ಟೌನ್‌ನಲ್ಲಿ ನೆಲೆಸಿರುವ ಸಂಬಂಧಿಕರ ಮನೆಗೆ ತಾಯಿ ಪ್ರಿಯಾ ಸಾದ್ವಾನಿಯವರೊಂದಿಗೆ ಬಂದಿದ್ದ ಜಾಗೃತಿ ಕಳೆದ 20 ದಿನಗಳಿಂದ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ನಿನ್ನೆ ರಾತ್ರಿ ಸಂಬಂಧಿಕರ ಮನೆಯಿಂದ ವಾಪಸ್ ತೆರಳಲು ಮೆರು ಟ್ಯಾಕ್ಸಿ ಬುಕ್ ಮಾಡಿ ತಡರಾತ್ರಿ ಹೊರಟಿದ್ದರು. ಸುಮಾರು 11.50ರ ಸುಮಾರಿಗೆ ಚಿಕ್ಕಜಾಲ ಬಳಿ ಸ್ಯಾಂಟ್ರೋ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್ ರಸ್ತೆ ಮಧ್ಯೆಯೇ ನಿಂತಿತ್ತು. ಎರಡೂ ವಾಹನದ ಚಾಲಕರು ಮುಂದೆ ಜಗಳವಾಡುತ್ತಿದ್ದರು. ಜಾಗೃತಿ ಪ್ರಯಾಣಿಸುತ್ತಿದ್ದ ಮೆರು ಟ್ಯಾಕ್ಸಿ ಅತಿ ವೇಗವಾಗಿ ಬಂದು ಬಸ್ ನಿಂತಿರುವುದನ್ನೂ ಅರಿಯದೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಏನಾಯಿತು ಎಂದು ಬಂದು ನೋಡಿದಾಗ ಚಾಲಕ ಹೊನ್ನೇಶ್ (25), ಪ್ರಿಯಾ ಸಾದ್ವಾನಿ ಮತ್ತು ಜಾಗೃತಿ ಸಾದ್ವಾನಿ ಇಬ್ಬರೂ ತೀವ್ರ ಗಾಯಗಳಿಂದ ನರಳುತ್ತಿದ್ದರು. ತಕ್ಷಣ ಆಂಬುಲೆನ್ಸ್ ಕರೆಸಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಹೆಬ್ಬಾಳ ಬಳಿಯ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆಯೇ ಜಾಗೃತಿ ಕೊನೆಯುಸಿರೆಳೆದಿದ್ದಾರೆ. ಇಲ್ಲೇ ಆಕೆಯ ತಾಯಿ ಪ್ರಿಯಾ ಸಾದ್ವಾನಿ ಕೂಡ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕಾರು ಚಾಲಕ ಹೊನ್ನೇಶ್‌ಗೂ ಗಂಭೀರ ಗಾಯಗಳಾಗಿದ್ದು, ಬ್ಯಾಟರಾಯನಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಜಾಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Write A Comment