ರಾಷ್ಟ್ರೀಯ

ಮಗನನ್ನು ಬದುಕಿಸಿ ಮರಣವನ್ನಪ್ಪಿಕೊಂಡ ಅಪ್ಪ..! ಅಪಘಾತದಲ್ಲಿ ಎಲ್ಲರನ್ನು ಕಳೆದುಕೊಂಡು ಅನಾಥನಾಗಿರುವ 13 ವರ್ಷದ ಕಿರಣ್

Pinterest LinkedIn Tumblr

Godavari-Accidenrt

ಹೈದರಾಬಾದ್ ,ಜೂ.14: ಸಾವು ಹೇಗೆಲ್ಲಾ ಮನುಷ್ಯನನ್ನು ಆವರಿಸಿಕೊಳ್ಳುತ್ತದೆ ಎಂಬುದನ್ನು ನೆನಪಿಸಿಕೊಂಡರೆ ಮೈ ಒಂದೇ ಸಮ ನಡುಗುವುದಕ್ಕೆ ಈ ಘಟನೆ ಒಂದು ನಿದರ್ಶನ. ನಿನ್ನೆ ರಾಜಮಂಡ್ರಿ ಸಮೀಪದ ಗೋದಾವರಿ ನದಿಗೆ ಉರುಳಿಬಿದ್ದ ಕ್ರೂಸ್ ವಾಹನದಲ್ಲಿದ್ದ ಎಲ್ಲ 23 ಮಂದಿ ತೀರ ಹತ್ತಿರದ ಸಂಬಂಧಿಗಳು. ಈ ಪೈಕಿ ಎಲ್ಲರೂ ಮೃತಪಟ್ಟಿದ್ದು, ಉಳಿದಿರುವ ಒಂದೇ ಒಂದು ಗಂಡು ದಿಕ್ಕು ಈ ಬಾಲಕ. ಅವನ ವಯಸ್ಸು ಇನ್ನು 13 ವರ್ಷ. ಹೆಸರು ಇಗಲ ಕಿರಣ್. ಬದುಕಿ ಉಳಿದಿರುವುದಕ್ಕೆ ಅದೃಷ್ಟ ಎನ್ನಬಹುದು. ಆದರೆ ಎಲ್ಲರನ್ನು ಕಳೆದುಕೊಂಡು ಅನಾಥನಾಗಿರುವುದಕ್ಕೆ ದುರದೃಷ್ಟವಂತ ಎನ್ನಲೇಬೇಕು.

ಈ ಅಪಘಾತದಲ್ಲಿ ಕಿರಣ್ ತನ್ನ ತಂದೆ ರಾಮ್‌ಬಾಬು ಮತ್ತು ತಾಯಿ ಕೊಂಡತಲ್ಲಿ ಅವರನ್ನು ಕಳೆದುಕೊಂಡು ಇದೀಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿರುವ ಕಿರಣ್‌ಗೆ ಆ ಆಘಾತದಿಂದ ಇನ್ನು ಹೊರ ಬರಲು ಸಾಧ್ಯವಾಗುತ್ತಿಲ್ಲ.

ಅವನ ತಂದೆ ಸಾವನ್ನೂ ಲೆಕ್ಕಿಸದೆ ಮಗನನ್ನು ಬಿಗಿದಪ್ಪಿಕೊಂಡಿದ್ದರಿಂದ ಸಣ್ಣ ಪುಟ್ಟ ಗಾಯಗಳೊಂದಿಗೆ ಬದುಕುಳಿದ. ಆದರೆ ಅವನ ತಂದೆ ರಾಮ್‌ಬಾಬು ತನ್ನ ಮಗನಿಗಾಗಿ ಪ್ರಾಣವನ್ನೇ ಮುಡುಪಾಗಿಟ್ಟಿದ್ದು ನಿಜಕ್ಕೂ ಎಲ್ಲರ ಮನ ಕರಗಿಸುವ ಸಂಗತಿ. ಕಿರಣ್ ನಡೆದ ಘಟನೆಯ ಬಗ್ಗೆ ವಿವರಿಸುತ್ತಿದ್ದರೆ ಅದನ್ನು ಕೇಳುತ್ತಿದ್ದ ಎಲ್ಲರ ಕಣ್ಣುಗಳಲ್ಲೂ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ಆ ರೀತಿಯ ಘೋರ ದುರಂತವದು. ಅವರಿದ್ದ ವಾಹನ ನಿಯಂತ್ರಣ ಕಳೆದುಕೊಂಡು ಪಾದಚಾರಿ ರಸ್ತೆಯನ್ನು ನುಗ್ಗಿಕೊಂಡು ಸೇತುವೆಗೆ ನಿರ್ಮಿಸಿದ್ದ ಸುರಕ್ಷತಾ ಗೋಡೆಯನ್ನು ಒಡೆದುರುಳಿಸಿ ನದಿಗೆ ಉರುಳಿಬಿದ್ದ ವಿಷಯವನ್ನು ಕಿರಣ್ ವಿವರಿಸುವಾಗ ಎಂಥವರ ಮನಸ್ಸು ಕರಗುತ್ತಿತ್ತು.

ಈ ಅಪಘಾತ ಸಂಭವಿಸಿದಾಗ ಎಲ್ಲರೂ ಗಾಢನಿದ್ರೆಯಲ್ಲಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಕ್ರೂಸ್ ವಾಹನ ಅಪಾಯಕ್ಕೆ ಸಿಲುಕಿದೆ ಎಂಬುದು ಗಾಢನಿದ್ರೆಯಲ್ಲಿದ್ದವರನ್ನು ಎಚ್ಚರಿಸಲು ಸಾಕಷ್ಟು ಸಮಯ ಬೇಕಾಗಲಿಲ್ಲ. ಏನೋ ನಡೆಯುತ್ತಿದೆ ಎಂಬುದು ವಾಹನದ ಚಲನವಲನದ ಮೂಲಕವೇ ಅದರಲ್ಲಿದ್ದವರಿಗೆ ಅರಿವಾಗಿತ್ತು. ಆ ಕೂಡಲೇ ಎಲ್ಲರೂ ಬೆಚ್ಚಿಬಿದ್ದು ಎದ್ದು ಕುಳಿತಿದ್ದರು. ಬಹುಶಃ ನಾವ್ಯಾರು ಇನ್ನು ಬದುಕುಲಾರೆವು ಎಂಬುದು ಅವರಿಗೆ ಅದಾಗಲೇ ಮನದಟ್ಟಾಗಿತ್ತು. ಹಾಗೆಂದುಕೊಳ್ಳುತ್ತಿದ್ದಾಗಲೇ ವಾಹನ ನದಿಗೆ ಬಿದ್ದಿತ್ತು. ಕಿರಣ್ ಹೇಳುವ ಪ್ರಕಾರ “ವಾಹನ ತುಂಬ ವೇಗವಾಗಿ ಚಲಿಸುತ್ತಿರಲಿಲ್ಲ. ಏನೋ ಆಗುತ್ತಿದೆ ಎಂದು ಅರಿವಾಗುತ್ತಿರುವಾಗಲೇ ನನ್ನ ಅಪ್ಪ ನನ್ನನ್ನು ಗಟ್ಟಿಯಾಗಿ ಬಿಗಿದಪ್ಪಿಕೊಂಡಿದ್ದರು.

ಅವರ ಉದ್ದೇಶ ನನ್ನನ್ನು ರಕ್ಷಿಸುವುದಾಗಿತ್ತು. ನನ್ನ ಮೇಲೆ ಮಣ್ಣು ಅಥವಾ ಕಲ್ಲು ಬೀಳದಂತೆ ತಡೆದಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸಾಕಷ್ಟು ಗಾಯಗಳಾಗುತ್ತಿದ್ದವು. ಆದರೂ ಅದ್ಯಾವುದನ್ನು ಅವರು ಲೆಕ್ಕಿಸಲಿಲ್ಲ. ನನ್ನ ಕಣ್ಣೆದುರಿಗೆ ಅವರ ಬೆನ್ನು ಮತ್ತು ಕಾಲುಗಳು ಮುರಿದು ಹೋದವು. ಅದು ತುಂಬ ಕತ್ತಲ ಸಮಯವಾಗಿದ್ದರಿಂದ ಎಲ್ಲವೂ ಅಸ್ಪಷ್ಟವಾಗಿತ್ತು. ನನ್ನ ಸಂಬಂಧಿ ಸಂಧ್ಯಾ ಮತ್ತು ನಾನು ಆ ಆಘಾತದಲ್ಲಿಯೇ ಇದ್ದೆವು. ಸುತ್ತಮುತ್ತ ಏನಾಗುತ್ತಿದೆ ಎಂಬುದನ್ನು ನೋಡುವುದಷ್ಟೇ ಆಗಿತ್ತು. ಆ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಯಾರಾದರೂ ಧಾವಿಸುತ್ತಾರೆ ಎಂದು ನಾವು ಚಿಂತಿಸಲಾಗಲಿಲ್ಲ.” ಇಷ್ಟು ಹೇಳುವ ಹೊತ್ತಿಗೆ, ಕಿರಣ್ ಕಣ್ಣುಗಳಲ್ಲಿ ನೀರು ಹರಿಯುತ್ತಿತ್ತು. ದುಃಖದ ಕಟ್ಟೆಯೊಡೆದು ಮತ್ತಷ್ಟು ಅವನು ಜರ್ಝರಿತಗೊಂಡನು.

Write A Comment