ಕರ್ನಾಟಕ

ಒಂಟಿ ಮಹಿಳೆ ಕೊಲೆ: ಇಬ್ಬರ ಬಂಧನ‌; ನಕಲಿ ಒಡವೆಗಳನ್ನು ಅಸಲಿ ಎಂದು ನಂಬಿ ಕೃತ್ಯ

Pinterest LinkedIn Tumblr

kaalallala

ಬೆಂಗಳೂರು: ನಗರದ ಚನ್ನಕೇಶವನಗರದಲ್ಲಿ ಇತ್ತೀಚೆಗೆ ನಡೆದಿದ್ದ ಒಂಟಿ ಮಹಿಳೆ ಕೊಲೆ ಪ್ರಕರಣವನ್ನು ಭೇದಿಸಿರುವ ಪರಪ್ಪನ ಅಗ್ರಹಾರ ಪೊಲೀಸರು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೇರಳ ಮೂಲದ ಅಜ್ಮಲ್‌(24) ಮತ್ತು ಬಸ್ರುದ್ದೀನ್(45) ಬಂಧಿತರು. ಆರೋಪಿಗಳಿಂದ ಮಹಿಳೆಯ ಮನೆಯಲ್ಲಿ ದೋಚಿದ್ದ ಒಡವೆಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳು ಮೇ 29ರಂದು ಪರಪ್ಪನ ಅಗ್ರಹಾರ ಸಮೀಪದ ಚನ್ನಕೇಶವನಗರದಲ್ಲಿ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ, ಅಖಿಲಾಂಡೇಶ್ವರಿ ಎಂಬ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದರು.

ಅನೈತಿಕ ಸಂಬಂಧ: ಫ್ಯಾಕ್ಟ್ಯರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಜ್ಮಲ್‌ಗೆ, ಮೂರು ತಿಂಗಳ ಹಿಂದೆ ಅಖಿಲಾಂಡೇಶ್ವರಿ ಅವರ ಪರಿಚಯವಾಗಿತ್ತು. ಈ ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿತ್ತಲ್ಲದೆ, ಆಗಾಗ್ಗೆ ಅವರ ಮನೆಗೆ ಬಂದು ಹೋಗುತ್ತಿದ್ದ ಎಂದು ಪೊಲೀಸರು ಹೇಳಿದರು.

ಅಖಿಲಾಂಡೇಶ್ವರಿ ಅವರು ಕತ್ತಿನ ತುಂಬ ಚಿನ್ನಲೇಪಿತ ಒಡವೆಗಳನ್ನು ಹಾಕಿಕೊಳ್ಳುತ್ತಿದ್ದರು. ಈ ಒಡವೆಗಳನ್ನು ಅಸಲಿ ಎಂದು ನಂಬಿದ್ದ ಅಜ್ಮಲ್‌ ಅವುಗಳ ಮೇಲೆ ಕಣ್ಣಿಟ್ಟಿದ್ದ. ಇತ್ತೀಚೆಗೆ ಹಣಕಾಸಿನ ತೊಂದರೆಗೆ ಒಳಗಾಗಿದ್ದ ಆರೋಪಿ, ಹೋಟೆಲ್ ಮತ್ತು ಬೇಕರಿ ಅಂಗಡಿ ಇಟ್ಟುಕೊಂಡಿದ್ದ ತನ್ನ ಸ್ನೇಹಿತ
ಬಸ್ರುದ್ದೀನ್‌ನಲ್ಲಿ ಹಣ ಕೇಳಿದ್ದ. ಆದರೆ ಆತ, ತನಗೂ ವ್ಯಾಪಾರದಲ್ಲಿ ನಷ್ಟವಾಗಿದ್ದು, ತೀವ್ರ ಹಣದ ಸಮಸ್ಯೆ ಹೊಂದಿರುವುದಾಗಿ ಹೇಳಿದ್ದ ಎಂದು ಪೊಲೀಸರು ವಿವರಿಸಿದರು.

ಹಣಕ್ಕಾಗಿ ಪರಿತಪಿಸುತ್ತಿದ್ದ ಅಜ್ಮಲ್‌, ಅಖಿಲಾಂಡೇಶ್ವರಿ ಅವರ ಬಳಿ ಇದ್ದ ಒಡವೆಗಳನ್ನು ದೋಚಲು ಬಸ್ರುದ್ದೀನ್‌ನೊಂದಿಗೆ ಸಂಚು ರೂಪಿಸಿದ. ಅಂತೆಯೇ ಇಬ್ಬರೂ ಮೇ 29ರಂದು ಮಹಿಳೆಯ ಮನೆಗೆ ಬಂದಿದ್ದರು.

ಉಸಿರುಗಟ್ಟಿಸಿ ಕೊಲೆ: ಈ ವೇಳೆ ಅಖಿಲಾಂಡೇಶ್ವರಿ ಅವರನ್ನು ರಮಿಸುವಂತೆ ನಟಿಸಿದ ಅಜ್ಮಲ್‌, ಅವರ ಮೂಗು ಮತ್ತು ಬಾಯಿಯನ್ನು ಮುಚ್ಚಿ ಹಿಡಿದ. ಈ ವೇಳೆ ಬಸ್ರುದ್ದೀನ್‌ ಮಹಿಳೆಯ ಕೈ ಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡ. ಹೀಗೆ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಆರೋಪಿಗಳು, ನಂತರ ಮನೆಯಲ್ಲಿದ್ದ ಒಡವೆಗಳೊಂದಿಗೆ, ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದರು.

ಮೂರ್ನಾಲ್ಕು ದಿನದ ನಂತರ ಮನೆಯೊಳಗಿಂದ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ ಪಕ್ಕದ ಮನೆಯವರು ಠಾಣೆಗೆ ವಿಷಯ ತಿಳಿಸಿದರು. ಸ್ಥಳಕ್ಕೆ ತೆರಳಿ ಮನೆಯ ಬಾಗಿಲು ತೆರೆದು ನೋಡಿದಾಗ, ಅಖಿಲಾಂಡೇಶ್ವರಿ ಅವರು ಕೊಲೆಯಾಗಿರುವ ವಿಷಯ ಗೊತ್ತಾಯಿತು. ಘಟನೆಗೆ ಸಂಬಂಧಿಸಿದಂತೆ ಮನೆ ಮಾಲೀಕ ಕೃಷ್ಣಪ್ಪ ಅವರು ದೂರು ಕೊಟ್ಟಿದ್ದರು ಎಂದು ಪೊಲೀಸರು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ, ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿದಾಗ, ಮೇ 29ರಂದು ಅಖಿಲಾಂಡೇಶ್ವರಿ ಅವರ ಮನೆಗೆ ಅಜ್ಮಲ್‌ ಮತ್ತು ಬಸ್ರುದ್ದೀನ್‌ ಬಂದಿದ್ದ ವಿಷಯ ಗೊತ್ತಾಯಿತು. ನಂತರ ಇಬ್ಬರು ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಒಡವೆ ಆಸೆಗಾಗಿ ತಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡರು ಎಂದು ಪೊಲೀಸರು ತಿಳಿಸಿದರು.

Write A Comment