ಕರ್ನಾಟಕ

ಸರ ದೋಚಲು ಯತ್ನಿಸಿದ ಮಹಿಳೆ ಬಂಧನ

Pinterest LinkedIn Tumblr

geetha

ಬೆಂಗಳೂರು: ಕಿಡಿಗೇಡಿಗಳು ಸುಲಭವಾಗಿ ಚಿನ್ನದ ಸರ ದೋಚಿ ಪರಾರಿಯಾಗುತ್ತಿರುವ ಪ್ರಕರಣಗಳಿಂದ ಪ್ರೇರೇಪಿತರಾದ ಮಹಿಳೆಯೊಬ್ಬರು, ವೃದ್ಧೆಯಿಂದ ಸರ ಕಿತ್ತುಕೊಳ್ಳಲು ಯತ್ನಿಸಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಬ್ಯಾಟರಾಯನಪುರ ನಿವಾಸಿ ಗೀತಾ (30) ಎಂಬುವರನ್ನು ಬಂಧಿಸಲಾಗಿದೆ. ಶನಿವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಶ್ರೀನಗರ ಸಮೀಪದ ಕಾಳಿದಾಸ ರಸ್ತೆಗೆ ಬಂದಿದ್ದ ಅವರು, ಮನೆ ಸಮೀಪ ಕುಳಿತಿದ್ದ ರಾಜಮ್ಮ (65) ಎಂಬುವರಿಂದ ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದರು. ಆಗ ಸ್ಥಳೀಯರು ಅವರನ್ನು ಥಳಿಸಿ ಠಾಣೆಗೆ ಕರೆದುಕೊಂಡು ಬಂದರು ಎಂದು ಹನುಮಂತನಗರ ಪೊಲೀಸರು ತಿಳಿಸಿದರು.

ರಾಜಮ್ಮ ಅವರ ಕಾಲುಗಳು ಸ್ವಾಸ್ಥ್ಯ ಕಳೆದುಕೊಂಡಿವೆ. ಕುಟುಂಬ ಸದಸ್ಯರು ಅವರ ಕುತ್ತಿಗೆಯಲ್ಲಿದ್ದ ಸರವನ್ನು ಜಾಕೆಟ್‌ಗೆ ಸೇರಿಸಿ ಪಿನ್‌ ಮಾಡಿದ್ದರು. ಹೀಗಾಗಿ ಗೀತಾ ಸರ ಎಳೆದಾಗ ಅದು ತುಂಡಾದರೂ ಜಾಕೆಟ್‌ನಲ್ಲೇ ಸಿಕ್ಕಿಕೊಂಡಿತು. ಈ ವೇಳೆ ರಾಜಮ್ಮ ಕಿರುಚಿಕೊಂಡಾಗ ಹತ್ತಿರದಲ್ಲೇ ಕ್ರಿಕೆಟ್ ಆಡುತ್ತಿದ್ದ ಹುಡುಗರು ಗೀತಾರನ್ನು ಹಿಡಿದುಕೊಂಡಿದ್ದಾರೆ.

‘ನಾನು ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತೇನೆ. ಮಾಸಿಕ ₹ 6 ಸಾವಿರ ವೇತನ ಸಿಗುತ್ತಿದೆ. ಪತಿ ಮದ್ಯವ್ಯಸನಿ. 13 ಹಾಗೂ 9 ವರ್ಷದ ಇಬ್ಬರು ಮಕ್ಕಳಿದ್ದಾರೆ. ಅವರ ವಿದ್ಯಾಭ್ಯಾಸ ಹಾಗೂ ಕುಟುಂಬ ನಿರ್ವಹಣೆಗೆ ಹಣದ ಅವಶ್ಯಕತೆ ಇತ್ತು. 2–3 ದಿನಗಳಿಂದ ಹಲವು ಕಡೆ ಸರಗಳವು ನಡೆದ ಬಗ್ಗೆ ಸುದ್ದಿ ವಾಹಿನಿಗಳಲ್ಲಿ ನೋಡಿದ್ದೆ. ಸುಲಭವಾಗಿ ಹಣ ಗಳಿಸುವ ಆಸೆಗೆ ಬಿದ್ದು ಈ ಕೃತ್ಯ ಎಸಗಿದೆ’ ಎಂದು ಮಹಿಳೆ ‌ಹೇಳಿಕೆ ನೀಡಿದ್ದಾಗಿ ‌ಮಾಹಿತಿ ನೀಡಿದರು.

Write A Comment