ಕರ್ನಾಟಕ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಎಚ್.ಡಿ.ದೇವೇಗೌಡ

Pinterest LinkedIn Tumblr

devegougouda

ಬೆಂಗಳೂರು, ಜೂ.13: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಕಟಿಸಿದರು. ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೆ ಈಗ 83 ವರ್ಷ. ಮುಂದಿನ ಲೋಕಸಭೆ ಚುನಾವಣೆ ಬರುವಷ್ಟರಲ್ಲಿ 87 ವರ್ಷ ಆಗಿರುತ್ತದೆ. ವಯಸ್ಸಾಗುವುದರಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಎಂದಿಗೂ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡಿಲ್ಲ. ಸಕ್ರಿಯವಾಗಿ ಕೆಲಸ ಮಾಡುತ್ತಲೇ ಇರುತ್ತೇನೆ. 50 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ. ಶಾಸಕನಾಗಿ, ಸಂಸದನಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿಯೂ ಆಗಿದ್ದೇನೆ ಎಂದು ತಾವು ರಾಜಕೀಯವಾಗಿ ಬೆಳೆದು ಬಂದ ಹಾದಿಯನ್ನು ಬಿಡಿಸಿಟ್ಟರು. 2004ರಿಂದ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಸಂಸದರಿಗೆ ಲೋಕಸಭಾ ಅಧಿವೇಶನದಲ್ಲಿ ಸಂಖ್ಯಾಬಲದ ಮೇಲೆ ಮೊದಲು ಚರ್ಚೆಗೆ ಅವಕಾಶ ಸಿಗುತ್ತಿದೆ. ನಾನು ಹದಿನಾಲ್ಕು ಜನ ಮಾತನಾಡಿದ ನಂತರ ಹದಿನೈದನೆಯವನಾಗಿ ಮಾತನಾಡಲು ಅವಕಾಶ ಸಿಗುತ್ತದೆ. ಅದೂ ಕೇವಲ ಮೂರು ನಿಮಿಷ ಮಾತ್ರ. ಹಾಗಾಗಿ ಯಾವುದೇ ವಿಷಯವನ್ನು ಸರಿಯಾಗಿ ಹೇಳುವುದಕ್ಕಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಚರ್ಚೆ ಮಾಡಲು ಅವಕಾಶ ಸಿಗದ ಮೇಲೆ ಏಕಿರಬೇಕು ಎನ್ನಿಸಿ ರಾಜೀನಾಮೆ ಕೊಡಬೇಕು ಎನ್ನಿಸಿತ್ತು. ಆದರೆ ಸಂಸದರ ನಿಧಿ 5 ಕೋಟಿ ಸಿಗುತ್ತದೆ. ಅಭಿವೃದ್ಧಿಗೆ ಬೇಕೇಬೇಕಲ್ಲ ಹಾಗೂ ಕೆಲವು ಸಮಿತಿಗಳಲ್ಲಿ ಚರ್ಚೆ ಮಾಡಬಹುದಲ್ಲ ಎಂಬ ಕಾರಣಕ್ಕಾಗಿ ರಾಜೀನಾಮೆ ನೀಡಲಿಲ್ಲ ಎಂದು ತಿಳಿಸಿದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿದರೆ ರಾಜೀನಾಮೆ ನೀಡುವುದಾಗಿ ಚುನಾವಣೆ ಪೂರ್ವದಲ್ಲಿ ನಾನು ಹೇಳಿದ್ದೆ. ಅದರಂತೆ ನಾನು ರಾಜೀನಾಮೆ ಕೊಡಲು ಮುಂದಾಗಿದ್ದೆ. ಆದರೆ ಮೋದಿಯವರೆ ಬೇಡ ಎಂದು ತಡೆದರು ಎಂದು ಹೇಳಿದರು.
ಜನತಾದಳದಿಂದ ನನ್ನನ್ನು ಹೊರಗೆ ಹಾಕಿದಾಗ ಬಿ.ಎಲ್.ಶಂಕರ್, ವಿ.ಎಸ್.ಉಗ್ರಪ್ಪ ನನ್ನ ಜೊತೆಗಿದ್ದರು. ಪಕ್ಷ ಬಿಟ್ಟು ಹೋದಂತಹ ಸಿ.ಎಂ.ಇಬ್ರಾಹಿಂ, ಪಿ.ಜಿ.ಆರ್.ಸಿಂಧ್ಯಾ, ಎಚ್.ಸಿ.ಮಹದೇವಪ್ಪ, ಆರ್.ವಿ.ದೇಶಪಾಂಡೆ, ಶ್ರೀನಿವಾಸ್‌ಪ್ರಸಾದ್ ಇವರ್ಯಾದರೂ ಕೂಡ ನನ್ನ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಮಾತಾಡುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬರೇ ಎಂದು ಖಾರವಾಗಿ ನುಡಿದರು.

ನಾನೂ ತೆಗಳಿಕೆಗೂ ಹೆದರಲ್ಲ, ಹೊಗಳಿಕೆಗೂ ಉಬ್ಬುವುದಿಲ್ಲ. ನಾನು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಮಾಡಲಿಲ್ಲ ಎಂಬ ಕಾರಣಕ್ಕೆ ಸಿದ್ದರಾಮಯ್ಯನಿಗೆ ಕೋಪವಿದೆ. ಆದರೆ ಆ ಸಂದರ್ಭದಲ್ಲಿ ನಾಲ್ಕು ಜನ ಕುರುಬರು, 36 ಜನ ಲಿಂಗಾಯತ ಶಾಸಕರಿದ್ದರು. ಉಪಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್‌ರನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದಿದ್ದರೆ, ಏನಾಗುತ್ತಿತ್ತು ಎಂದು ನೀವೇ ಹೇಳಿ? ಎಂದು ಮಾಧ್ಯಮದವರನ್ನೇ ದೇವೇಗೌಡರು ಪ್ರಶ್ನಿಸಿದರು. ಕೆಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟಿದರು, ಕರ್ನಾಟಕ ಏಕೀಕರಣ ಮಾಡಿದರು, ಆದರೆ ಅವರಿಗೆ ಏನು ಸಿಕ್ಕಿತು? ಅವರಿಗೆ ಏನೇನಾಯಿತು? ಎಂದು ಕೇಳಿದರು. ಜೆಡಿಎಸ್ ಬೆಳೆಯಲು ಸಿದ್ದರಾಮಯ್ಯ ಆದಿಯಾಗಿ ಯಾರೂ ಸಹ ಹತ್ತು ರೂಪಾಯಿ ಸಹ ಕೊಟ್ಟಿಲ್ಲ. ನಾನೇ ಪಕ್ಷದ ಜವಾಬ್ದಾರಿ ಹೊತ್ತು ಬಂದಿದ್ದೇನೆ ಎಂದರು.

ಈ ವೇಳೆ ಮಾಧ್ಯಮದವರು ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ಗೌಡ 60 ಕೋಟಿ ವೆಚ್ಚದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ನೀವು ನೋಡಿದರೆ ಕಟ್ಟಡ ಕಟ್ಟಲಾಗದೆ ಶೆಡ್‌ನಲ್ಲಿದ್ದೀರಲ್ಲ ಎಂದು ಪ್ರಶ್ನಿಸಿದಾಗ, ಅದಕ್ಕೆಲ್ಲಾ ನಿರ್ಮಾಪಕರು ಹಣ ಹಾಕುತ್ತಿದ್ದಾರೆ. ಕುಮಾರಸ್ವಾಮಿ ಬಳಿ ಹಣ ಇದ್ದಿದ್ದರೆ ಸಿಬಿಐ, ಆದಾಯ ತೆರಿಗೆ, ಲೋಕಾಯುಕ್ತರು ಸುಮ್ಮನೆ ಬಿಡುತ್ತಿದ್ದರಾ? ಎಂದು ಪ್ರಶ್ನಿಸಿದರು. ಈ ದೇವೇಗೌಡರಿಗೆ ದ್ರೋಹ ಮಾಡಿದವರು ಅದರ ಪ್ರತಿಫಲವನ್ನು ಅವರೇ ಉಂಡಿದ್ದಾರೆ, ಹಾಗೆಯೇ ಜಾತಿರಾಜಕಾರಣ ಮಾಡುವವರಿಗೂ ಅವರ ಹಣೆಬರಹ ಏನಾಗುತ್ತದೆ ಎಂಬುದು ಗೊತ್ತಿದೆ ಎಂದು ದೇವೇಗೌಡರು ಮಾರ್ಮಿಕವಾಗಿ ನುಡಿದರು.

Write A Comment