ಕರ್ನಾಟಕ

ಅಸ್ಸೋಂನಲ್ಲಿ ವಿಧ್ವಂಸಕ ಕೃತ್ಯದಲ್ಲಿ ಭಾಗಿ; ಬೆಂಗಳೂರಿನಲ್ಲಿ ನಾಲ್ವರು ಶಂಕಿತ ಬೋಡೋ ಉಗ್ರರ ಬಂಧನ

Pinterest LinkedIn Tumblr

4-ARRESTED

ಬೆಂಗಳೂರು, ಜೂ.13: ಅಸ್ಸೋಂನಲ್ಲಿ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿ ತದನಂತರ ಬೆಂಗಳೂರಿಗೆ ಬಂದು ನಿಸ್ಸೀಮರಂತೆ ಕಾರ್ಖಾನೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ನಾಲ್ವರು ಶಂಕಿತ ಬೋಡೊ ಉಗ್ರರನ್ನು ಅಸ್ಸೋಂ ಪೊಲೀಸರು ಆಂತರಿಕ ಭದ್ರತಾ ದಳದ ನೆರವಿನೊಂದಿಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಮೂಲತಃ ಅಸ್ಸೋಂನ ತೋನಾರ್ ಬಸುಮತ್ರಿ, ನಸೀನ್ ಬಸುಮತ್ರಿ, ಸಂಧನ್ ಬಸುಮತ್ರಿ ಮತ್ತು ನಿಷಾದ್ ಎಂಬುವರನ್ನು ಬಂಧಿಸಲಾಗಿದೆ. ಕಳೆದ ಜನವರಿಯಲ್ಲಿ ಅಸ್ಸೋಂನಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಬೆಂಕಿ ಹಚ್ಚಿ ದಾಂಧಲೆ ನಡೆಸಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿ ತದನಂತರ ಬೆಂಗಳೂರಿಗೆ ಬಂದು ಈ ಗುಂಪು ನೆಲೆಸಿರುವ ಬಗ್ಗೆ ಅಸ್ಸೋಂ ಪೊಲೀಸರಿಗೆ ಮಾಹಿತಿ ಲಭಿಸಿದೆ.

ತಕ್ಷಣ ಅಸ್ಸೋಂ ಪೊಲೀಸರು ಬೆಂಗಳೂರಿಗೆ ಬಂದು ಆಂತರಿಕ ಭದ್ರತಾ ದಳದ ಅಧಿಕಾರಿಗಳೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿ ತನಿಖೆ ಕೈಗೊಂಡಾಗ ರಾಮನಗರ ಜಿಲ್ಲೆ ಬಿಡದಿಯಲ್ಲಿರುವ ಪ್ಲಾಸ್ಟಿಕ್ ಕಂಪನಿಯೊಂದರಲ್ಲಿ ಅಸ್ಸೋಂ ಮೂಲದ ವ್ಯಕ್ತಿಗಳು ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ. ಅಲ್ಲದೆ ಅಸ್ಸೋಂನಿಂದ ಬಂದ ಗುಂಪು ಶ್ರೀಗಂಧ ಕಾವಲಿನಲ್ಲಿ ಬಾಡಿಗೆಗೆ ಮನೆ ಪಡೆದು ವಾಸಿಸುತ್ತಿರುವ ಬಗ್ಗೆಯೂ ಮಾಹಿತಿ ಕಲೆ ಹಾಕಿ ಅಲ್ಲಿಗೆ ತೆರಳಿ ನಾಲ್ವರು ಶಂಕಿತರನ್ನು ಬಂಧಿಸಿದ್ದಾರೆ. ಇನ್ನೂ ಕೆಲವರು ತಲೆಮರೆಸಿಕೊಂಡಿರುವ ಶಂಕಿತ ಉಗ್ರರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Write A Comment