ಕರ್ನಾಟಕ

ಸರಳ ವಿವಾಹ ಕಡ್ಡಾಯಕ್ಕೆ ಸಮಾಜದ ಸಹಮತವಿಲ್ಲ

Pinterest LinkedIn Tumblr

Simple-Marriage

ಬೆಂಗಳೂರು,ಜೂ.೧೦- ಅದ್ದೂರಿ ವಿವಾಹಗಳಿಂದ ನಾನಾ ಸಮಸ್ಯೆ ಎದುರಾಗುತ್ತದೆ. ಸರಳ ವಿವಾಹಗಳೇ ಇದಕ್ಕೆ ಪರಿಹಾರ. ಆದರೆ ಕಾನೂನಿನಲ್ಲಿ ಸರಳ ವಿವಾಹವನ್ನು ಕಡ್ಡಾಯಗೊಳಿಸಲು ಸಮಾಜದ ಸಹಮತ ಇಲ್ಲ. ಈ ಬಗ್ಗೆ  ಜಾಗೃತಿ ಮೂಡಿಸಬೇಕೆಂದು ಸಚಿವ ಕೃಷ್ಣಭೈರೇಗೌಡ ಅಭಿಪ್ರಾಯಪಟ್ಟರು.

ನಗರದ ಗಾಯತ್ರಿ ವಿಹಾರದಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ಹುಟ್ಟುಹಬ್ಬದ ಅಂಗವಾಗಿ ಮಂತ್ರಮಾಂಗಲ್ಯ ಪದ್ದತಿಯಡಿ  ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದ ವೇಳೆ ಮಾತನಾಡಿದ ಅವರು, ಒಬ್ಬರಿಗೊಬ್ಬರು ನೋಡಿ ಅದ್ಧೂರಿ ವಿವಾಹ ಮಾಡುವ ಪರಿಪಾಠ ಹೆಚ್ಚುತ್ತಿದೆ.  ವಿವಾಹದ ನಂತರ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ಬಗ್ಗೆ ರಾಜ್ಯ ಸರ್ಕಾರ ಚಿಂತಿಸಿ ಸರಳ ವಿವಾಹದ ಕಾನೂನು ಜಾರಿಗೆ ತರಲು ಮುಂದಾಗಿತ್ತು. ಆದರೆ ಸಮಾಜದ ವಿರೋಧದಿಂದಾಗಿ ಕೈಬಿಡಬೇಕಾಯಿತು ಎಂದು ವಿಷಾದಿಸಿದರು.

ದಾಂಪತ್ಯವೆಂದರೆ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುವುದೇ ಆಗಿದೆ. ಕುವೆಂಪು ಅವರು ಆಚರಣೆಗೆ ತಂದ ಮಂತ್ರಮಾಂಗಲ್ಯ ಪದ್ಧತಿ ಆದರ್ಶ ದಾಂಪತ್ಯಕ್ಕೆ ಹಾಗೂ ಸರಳ ವಿವಾಹಕ್ಕೆ ಪ್ರೇರಣೆಯಾಗಿದೆ. ವೈಜ್ಞಾನಿಕವಾಗಿ ಬದಲಾಗಿದ್ದೇವೆ ಎಂದು ಹೇಳಿಕೊಳ್ಳುತ್ತೇವೆ. ಆದರೆ ಈ ಹಿಂದೆ ಮರದ ಕೆಳಗೆ ದೇವಾಲಯಗಳಲ್ಲಿ ನಡೆಯುತ್ತಿದ್ದ ಮದುವೆಗಳು ಇಂದು ಹವಾನಿಯಂತ್ರಿತ ಕಲ್ಯಾಣ ಮಂಟಪಗಳಲ್ಲಿ ಅದ್ಧೂರಿಯಾಗಿ ನಡೆಸಲಾಗುತ್ತಿದೆ.  ಇದು ವೈಜ್ಞಾನಿಕತೆಯ ಬೆಳವಣಿಗೆಯಲ್ಲ. ವೈಭವೋಪೇತದ ಪರಮಾವಧಿ ಎಂದು ಹೇಳಿದರು.  ಅಂಧಶ್ರದ್ಧೆ ಬಿಟ್ಟು ಮನಸ್ಸುಗಳ ಮಿಲನವಾದ ಮದುವೆಯನ್ನು ಸರಳವಾಗಿ ಪರಸ್ಪರ ಒಪ್ಪಿ ಪವಿತ್ರ ಬಾಂಧವ್ಯವನ್ನಾಗಿ ರೂಪಿಸುವ ಹೊಣೆಗಾರಿಕೆ ಹೊರಬೇಕು ಎಂದು ಸಲಹೆ ಮಾಡಿದರು.  ಟಿ.ಎ.ನಾರಾಯಣಗೌಡರ ಹುಟ್ಟುಹಬ್ಬದಂದು ಈ ರೀತಿ ವಿಶಿಷ್ಟ  ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಇತರರಿಗೆ ದಾರಿ ದೀಪ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

* ಸರಳ ವಿವಾಹ ಸರ್ಕಾರದ ನೀತಿ
ಬೆಂಗಳೂರು,ಜೂ.10- ಸರಳ ವಿವಾಹವೇ ಸರ್ಕಾರದ ನೀತಿ. ಇಂತಹ ವಿವಾಹ ಪದ್ದತಿಗಳು ಎಲ್ಲೆಡೆ ಹರಡಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.  ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ  ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡರ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುವೆಂಪು ಅವರು ಸರಳ ವಿವಾಹ ಪದ್ಧತಿಯಾದ ಮಂತ್ರಮಾಂಗಲ್ಯವನ್ನು ಆಚರಣೆಗೆ ತಂದರು. ಸಾಮೂಹಿಕ ಹಾಗೂ ಸರಳ ವಿವಾಹಗಳು ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು. ಎಲ್ಲಿಂದಲೋ ಬಂದ ಅರಿಶಿನ ಹಾಗೂ ದಾರ ಸೇರಿ ಮಂತ್ರಮಾಂಗಲ್ಯವಾಗುತ್ತದೆ. ಅದರಂತೆ ಎಲ್ಲಿಂದಲೋ ಬಂದ ಹೆಣ್ಣು, ಗಂಡು ಸೇರಿದರೆ ಸಂಸಾರವಾಗುತ್ತದೆ. ಹುಟ್ಟುಸಾವಿನ ನಡುವೆ ಮನುಷ್ಯ ಸಾಧನೆ ಮಾಡಬೇಕು ಎಂದರು.  ನಾರಾಯಣಗೌಡರು ಕನ್ನಡ ಸಂಘಟನೆ ಕಟ್ಟುವ ಮೂಲಕ ಸಾಧನೆ ಮಾಡಿದ್ದಾರೆ ಅಧಿಕಾರ, ದರ್ಪ ಯಾವುದಕ್ಕೂ ಜಗ್ಗದೆ ನೆಲ, ಜಲ, ಭಾಷೆಯನ್ನು ಪ್ರೀತಿಯಿಂದ ಕಾಪಾಡಿದ್ದಾರೆ. ಅವರ ನ್ಯಾಯಯುತ ಹೋರಾಟಕ್ಕೆ ಸರ್ಕಾರದ ಬೆಂಬಲವಿದೆ ಎಂದು ಹೇಳಿದರು.

Write A Comment