ಕರ್ನಾಟಕ

ಬಿಬಿಎಂಪಿ ಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆ

Pinterest LinkedIn Tumblr

siddarama_y

ಬೆಂಗಳೂರು, ಜೂ.10- ನಿರೀಕ್ಷೆಯಂತೆ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆಯಾಗಿದ್ದು, ಬಿಬಿಎಂಪಿ ಚುನಾವಣೆ ಮುಗಿಯುವವರೆಗೂ ಸಂಪುಟ ವಿಸ್ತರಣೆ ನಡೆಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದೇಶ ರವಾನಿಸಿದ್ದಾರೆ. ಎರಡು ದಿನಗಳ ದೆಹಲಿ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,

ಇಂದು ಹೈಕಮಾಂಡ್‌ನ ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಯ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ನಿನ್ನೆ ಕಾಂಗ್ರೆಸ್ ಮುಖ್ಯಮಂತ್ರಿಗಳ ಸಭೆಯ ನಂತರವೇ ಸಿದ್ದರಾಮಯ್ಯ ಪ್ರತ್ಯೇಕವಾಗಿ ಸೋನಿಯಗಾಂಧಿ ಅವರ ಜತೆ ಸಂಪುಟ ವಿಸ್ತರಣೆ ಕುರಿತ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.  ಈ ಹಂತದಲ್ಲಿ ಸಂಪುಟ ಪುನರ್ ರಚನೆಗೆ ಕೈ ಹಾಕಿದರೆ ಹಲವಾರು ಮಂದಿಯನ್ನು ಕೈ ಬಿಡಬೇಕಾಗುತ್ತದೆ. ಇದು ರಾಜ್ಯ ಸರ್ಕಾರದ ಮೇಲೆ ಅಡ್ಡಪರಿಣಾಮವಾಗುವ ಆತಂಕವಿದೆ ಎಂದು ವಿವರಿಸಿದ್ದಾರೆ.

ಸ್ಥಳೀಯ ರಾಜಕೀಯ ಪರಿಸ್ಥಿತಿ ಆಧರಿಸಿ ಸಂಪುಟ ವಿಸ್ತರಣೆ ಮಾಡಬೇಕೋ,  ಬೇಡವೋ ಎಂಬ ನಿರ್ಧಾರವನ್ನು ಸ್ವತಂತ್ರವಾಗಿ ತೆಗೆದುಕೊಳ್ಳಿ ಎಂದು ಸೋನಿಯಗಾಂಧಿ ಅವರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸಂಪುಟ ವಿಸ್ತರಣೆಯನ್ನು ಮುಂದೂಡಿದ್ದಾರೆ.
ಗ್ರಾಪಂ ಚುನಾವಣೆಯ ನಂತರ ಸಂಪುಟ ವಿಸ್ತರಣೆ ಮಾಡುವುದಾಗಿ ಸಿದ್ದರಾಮಯ್ಯ ಅವರೇ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ದಂಡು ದೆಹಲಿಯಲ್ಲಿ ಬೀಡುಬಿಟ್ಟು ಲಾಬಿ ಆರಂಭಿಸಿತ್ತು. ನಿನ್ನೆ ಸಂಜೆಯವರೆಗೂ ಸಂಪುಟ ವಿಸ್ತರಣೆಯ ಕುರಿತು ವದಂತಿಗಳು ಜೀವಂತವಾಗಿದ್ದವು. ಇಂದು ಸಿದ್ದರಾಮಯ್ಯ ಅವರು ದೆಹಲಿಯಲ್ಲಿದ್ದ ಎಲ್ಲಾ ಶಾಸಕರನ್ನು ರಾಜ್ಯಕ್ಕೆ ವಾಪಸ್ ತೆರಳುವಂತೆ ಸೂಚನೆ ನೀಡಿದ್ದು, ಸಂಪುಟ ಪುನರ್‌ರಚನೆ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಂದು ಮಧ್ಯಾಹ್ನ ನಡೆಯಬೇಕಿದ್ದ ಸೋನಿಯಗಾಂಧಿ ಹಾಗೂ ರಾಹುಲ್‌ಗಾಂಧಿ ಅವರ ಭೇಟಿಯೂ ರದ್ದಾಗಿದೆ. ಬೆಳಗ್ಗೆ ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಅವರು, ನಗರಾಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ನಂತರ ಹಣಕಾಸು ಸಚಿವ ಅರುಣ್‌ಜೇಟ್ಲಿ ಅವರನ್ನು ಭೇಟಿ ಮಾಡಿ ಆರ್ಥಿಕ  ಇಲಾಖೆಗೆ ಸಂಬಂಧಪಟ್ಟ ವಿಷಯಗಳ ಕುರಿತು ಹಾಗೂ ರಕ್ಷಣಾ ಸಚಿವ ಮನೋಹರ್ ಪಾರಿಕರ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ರಕ್ಷಣಾ ಇಲಾಖೆ ವ್ಯಾಪ್ತಿಯಲ್ಲಿರುವ ಭೂಮಿಯನ್ನು ಅಭಿವೃದ್ಧಿ ಯೋಜನೆಗಳಿಗೆ ಬಿಟ್ಟುಕೊಡುವಂತೆ ಮನವಿ ಮಾಡಿದ್ದಾರೆ.

* ಕಬ್ಬು ಬೆಳೆಗಾರರ ನೆರವಿಗೆ ಕೇಂದ್ರಕ್ಕೆ ಒತ್ತಾಯ
ಬೆಂಗಳೂರು, ಜೂ.10-ಸಕ್ಕರೆ ಬೆಲೆ ಕುಸಿತದಿಂದ ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿಸಲು ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೆರವಿಗಾಗಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕು. 2013-14ರಲ್ಲಿ ರಾಜ್ಯ ಸರ್ಕಾರ ಪ್ರತಿ ಮೆಟ್ರಿಕ್ ಟನ್‌ಗೆ 2500ರೂ. ಬೆಲೆ ಘೋಷಣೆ ಮಾಡಿತ್ತು. ಆದಾಗ್ಯೂ  2013 ನವೆಂಬರ್ 13ರಿಂದ ಬೆಲೆ ಕುಸಿಯುತ್ತಿದೆ.  ರಾಜ್ಯ ಸರ್ಕಾರ ವಿವಿಧ ತೆರಿಗೆ ರಿಯಾಯ್ತಿ ಹೆಸರಿನಲ್ಲಿ 1173 ರೂ. ಹಣ ನೀಡಿದೆ. ಸಕ್ಕರೆ ಕಾರ್ಖಾನೆಗಳಿಂದ 923 ಕೋಟಿ ರೂ. ಬಾಕಿ ಬರಬೇಕಿದೆ ಎಂದು ಕೇಂದ್ರ ಸಚಿವರಿಗೆ ವಿವರಿಸಿದ್ದಾರೆ.

2014-15ನೇ ಸಾಲಿನಲ್ಲಿ ರಾಜ್ಯದಲ್ಲಿ 448.77ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಅರೆದು 49.63ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಲಾಗಿದೆ. ಕೇಂದ್ರ ಸರ್ಕಾರ 2200ರೂ. ಬೆಂಬಲ ಬೆಲೆ ಘೋಷಿಸಿದೆ. ಈಮೊದಲು ಪ್ರತಿ ಕೆಜಿ ಸಕ್ಕರೆ 30ರಿಂದ 34ರೂ. ದರವಿತ್ತು. ಇತ್ತೀಚೆಗೆ 23-25ರೂ.ಗೆ ಕುಸಿದಿದೆ.ಇದರಿಂದಾಗಿ ಸಕ್ಕರೆ ಕಾರ್ಖಾನೆಗಳು ಈ ವರ್ಷದ 2642 ಕೋಟಿ ರೂ. ಬಾಕಿಯನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿವೆ.  ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಡಾ.ಸಿ.ರಂಗರಾಜನ್ ಸಮಿತಿ ವರದಿಯಂತೆ ಆದಾಯ ಹಂಚಿಕೆ ನಿಯಮಗಳನ್ನು ಅನುಸರಿಸಿ 70:30ರಷ್ಟು ಆರ್ಥಿಕ ನೆರವು ನೀಡಬೇಕು ಎಂದು ಮನವಿ ಮಾಡಿದರು. ಕೇಂದ್ರ ಸರ್ಕಾರ ಘೋಷಿಸಿರುವ 2200ರೂ. ಬೆಂಬಲ ಬೆಲೆ ನೀಡಲು ಸಕ್ಕರೆ ಬೆಲೆ ಕುಸಿತದಿಂದ ಸಾಧ್ಯವಾಗುತ್ತಿಲ್ಲ. ಸುಮಾರು 400ರಿಂದ 500ರೂ.ನಷ್ಟು ನಷ್ಟವಾಗುತ್ತಿದೆ. 1800ರೂ. ಬೆಂಬಲ ಬೆಲೆ ನೀಡಲು ಸಾಧ್ಯ ಎಂದು ಹೇಳಲಾಗುತ್ತಿದೆ. ಹೀಗಾಗಿ ಬಾಕಿ ಹಣವನ್ನು ಕೇಂದ್ರ ಸರ್ಕಾರವೇ ನೀಡಬೇಕೆಂದು ಮುಖ್ಯಮಂತ್ರಿ ಕೇಂದ್ರ ಸಚಿವರನ್ನು ಕೋರಿದ್ದಾರೆ.

Write A Comment