ಕರ್ನಾಟಕ

ಬೆಂಗಳೂರಿನಲ್ಲಿ ಅನ್ಯಭಾಷಿಗರ ಹಾವಳಿ ತಡೆಯದಿದ್ದರೆ ಕನ್ನಡಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ: ವಾಟಾಳ್ ನಾಗರಾಜ್

Pinterest LinkedIn Tumblr

vatal

ಬೆಂಗಳೂರು,ಜೂ.8: ರಾಜಧಾನಿ ಬೆಂಗಳೂರಿನಲ್ಲಿ ಅನ್ಯಭಾಷಿಗರ ಹಾವಳಿ ತಡೆಯದಿದ್ದರೆ ಕನ್ನಡಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಮೈಸೂರುಬ್ಯಾಂಕ್ ವೃತ್ತದಲ್ಲಿ ಒಂಟೆತ್ತಿನ ಗಾಡಿ ಮೆರವಣಿಗೆಯ ಮೂಲಕ ವಿನೂತನವಾಗಿ ಪ್ರತಿಭಟಿಸಿದ ಅವರು, ಬೆಂಗಳೂರು ವಲಸಿಗರಿಂದ ತುಂಬಿ ತುಳುಕುತ್ತಿದೆ. ಇಲ್ಲಿ ಕನ್ನಡ ಸಂಪೂರ್ಣ ನೆಲಕಚ್ಚುತ್ತಿದೆ. ನಾಡ ಭಾಷೆಗೆ ಅಪಾಯ ಬಂದೊದಗಿದೆ. ಎಚ್ಚೆತ್ತುಕೊಳ್ಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು. ಕನ್ನಡಪರ ಸಂಘಟನೆಗಳು ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಮೂಲಕ ರಾಜಧಾನಿಯಲ್ಲಿ ಕನ್ನಡ ಉಳಿವಿಗೆ ಶಕ್ತಿ ನೀಡಬೇಕು ಎಂದು ಅವರು ಹೇಳಿದರು.

ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಸಾರಿಗೆ ಮುಂತಾದ ಇಲಾಖೆಗಳು ನಾಗರಿಕರಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ. ಜನರಿಗೆ ಕಲ್ಪಿಸಬೇಕಾದ ಕನಿಷ್ಟ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಎಲ್ಲ ಸಂಸ್ಥೆಗಳು ವಿಫಲವಾಗಿದೆ ಎಂದು ಆರೋಪಿಸಿದರು. ಬಿಬಿಎಂಪಿ ವ್ಯಾಪ್ತಿಗೆ ಬಂದು 110 ಹಳ್ಳಿಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಅಖಂಡ ಬೆಂಗಳೂರನ್ನು ವಿಭಜಿಸಲು ಮುಂದಾದರೆ ದೊಡ್ಡ ಕ್ರಾಂತಿಯಾಗುತ್ತದೆ ಎಂದು ವಾಟಾಳ್ ಎಚ್ಚರಿಕೆ ನೀಡಿದರು.

ಬೆಂಗಳೂರಿನ ಸಂಚಾರಿ ವ್ಯವಸ್ಥೆ ಹದಗೆಟ್ಟಿದೆ. ಇಲ್ಲಿನ ಜನರಿಗೆ ಉತ್ತಮ ಆರೋಗ್ಯ, ಪರಿಸರ, ಶುದ್ದ ಕುಡಿಯುವ ನೀರು ದೊರಕುವಂತೆ ಎಚ್ಚರ ವಹಿಸಬೇಕು. ನಗರದ ಆಸ್ಪತೆಗಳು ನರಕಸದೃಶ್ಯವಾಗಿದ್ದು, ಖಾಸಗಿ ನರ್ಸಿಂಗ್ ಹೋಮ್‌ಗಳು ಜನರ ಪಾಲಿಗೆ ಯಮದರ್ಶನವಾಗಿದೆ. ಮತ್ತೊಂದು ಕಡೆ ಇಂಗ್ಲಿಷ್ ಶಾಲೆಗಳ ಅವಾಂತರ, ಲೆಕ್ಕವಿಲ್ಲದಷ್ಟು ವಂತಿಕೆ, ಸುಲಿಗೆ ನಡೆಯುತ್ತಿದೆ. ಎಲ್ಲದರ ಬಗ್ಗೆ ಧ್ವನಿ ಎತ್ತಬೇಕು. ರಾಜಧಾನಿ ಕನ್ನಡಿಗರ ಕೈಯಲ್ಲೇ ಉಳಿಯಬೇಕು ಎಂದರು. ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ 5 ಕೋಟಿ ರೂ. ವಿಶ್ವ ಪ್ರಶಸ್ತಿಯನ್ನು ನೀಡಬೇಕು. ಪ್ರತಿ ವಾರ್ಡ್‌ನಲ್ಲಿ ಕೆಂಪೇಗೌಡ ಜಯಂತಿಗೆ 5 ಲಕ್ಷ ರೂ. ಅನುದಾನ ನೀಡಬೇಕು ಎಂದು ಹೇಳಿದರು.

Write A Comment