ಕರ್ನಾಟಕ

ಕನ್ನಡದ ಕಟ್ಟಾಳು ಕಯ್ಯಾರರಿಗೆ ಶತ ಸಂಭ್ರಮ

Pinterest LinkedIn Tumblr

BNG-KSG-0606-6-6KSKAYYARA3

ಕಾಸರಗೋಡು: ಶತಾಯುಷಿ ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈ ಅವರು ಸೋಮವಾರಕ್ಕೆ ನೂರು ವಸಂತಗಳನ್ನು ಪೂರೈಸಿ ನೂರಾ ಒಂದನೇ ವರ್ಷಕ್ಕೆ ಕಾಲಿರಿಸಲಿದ್ದಾರೆ.

ಶತಾಯುಷಿ ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈ ಗಡಿನಾಡು ಕಾಸರಗೋಡಿನಲ್ಲಿದ್ದರೂ ಎಲ್ಲ ಕನ್ನಡಿಗರ ಹೆಮ್ಮೆ. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಕಯ್ಯಾರರು ಇಂದಿನ ಪೀಳಿಗೆಗೆ ಮಾದರಿ. ಕಿಂಞಣ್ಣ ಅಂದರೆ ಚಿಕ್ಕಣ್ಣ ಎಂದರ್ಥ. ಆದರೆ ಅಜಾನುಬಾಹು, ದೃಢಕಾಯ ಹೊಂದಿರುವ ಇವರು ಕವಿ, ವಾಗ್ಮಿ, ಪಂಡಿತ, ಸಾಹಿತಿ, ಕೃಷಿಕ, ಶಿಕ್ಷಕ ಇತ್ಯಾದಿ ಸಾಧನೆಯ ಮೇರು ಪರ್ವತ.

ನಾಡಿನ ಸಾಂಸ್ಕೃತಿಕ, ಸಾಹಿತ್ಯಿಕ ವಲಯದಲ್ಲಿ ತಮ್ಮದೇ ಹೆಜ್ಜೆಗುರುತು ಮೂಡಿಸಿದ್ದ ಇವರು, ತಮ್ಮ ಹದಿವಯಸ್ಸಿನಿಂದ ಹಿಡಿದು ಐದಾರು ವರ್ಷಗಳ ಹಿಂದಿನವರೆಗೂ ಅತ್ಯಂತ ಚುರುಕಿನ ವ್ಯಕ್ತಿತ್ವ ಹೊಂದಿದ್ದರು. ಆದರೆ ಇಂದು ಅವರಲ್ಲಿ ಮಗುವಿನ ಮುಗ್ಧತೆ ಮಾತ್ರ ಕಾಣಲು ಸಾಧ್ಯ. ಜೀವಮಾನದುದ್ದಕ್ಕೂ ಸಾಧನೆಯಲ್ಲೇ, ಸಮಾಜ ಸೇವೆಯಲ್ಲೇ ತಮ್ಮನ್ನು ತೊಡಗಿಸಿಕೊಂಡ ಕಯ್ಯಾರರು, ಮೌನವಾಗಿ ಎಲ್ಲವನ್ನೂ ನೋಡುತ್ತಿದ್ದಾರೆ.

ಅತಿಥಿ ಸತ್ಕಾರದ ಗುಣ: ಚಟುವಟಿಕೆಯಿಂದ ಹೊರಬಂದ ಕವಿ, ತಮ್ಮ ಅತಿಥಿ ಸತ್ಕಾರದ ಗುಣವನ್ನು ಮರೆಯದೇ ಪಾಲಿಸುತ್ತಿದ್ದಾರೆ. ನಾಡಿನಾದ್ಯಂತ, ಹೊರ ರಾಜ್ಯಗಳಿಂದಲೂ ಬರುವ ಕನ್ನಡ ಅಭಿಮಾನಿಗಳಿಗೆ ಸರಿಯಾದ ರೀತಿಯಲ್ಲಿ ಸಂದೇಶವನ್ನು ರವಾನಿಸಲು ಸಾಧ್ಯವಾಗದಿದ್ದರೂ, ಇಂದಿಗೂ ಕನ್ನಡದ ಮೇಲಿನ ಪ್ರೀತಿಯನ್ನು, ಅದರ ಹಿರಿಮೆಯನ್ನು ಎತ್ತಿಹಿಡಿಯುತ್ತಾರೆ. ಹಲವೊಮ್ಮೆ ಅಂದಿನ ನೆನಪುಗಳ ತುಣುಕುಗಳನ್ನು ನೆನಪು ಮಾಡುತ್ತಾರೆ. ಗೋವಿಂದ ಪೈಗಳ, ಹಿರಿಯ ಕವಿಗಳ ಒಡನಾಟವನ್ನು ಕಣ್ತುಂಬಿಕೊಂಡು ಅವರದೇ ಮಾತುಗಳಲ್ಲಿ ವ್ಯಾಖ್ಯಾನಿಸುತ್ತಾರೆ. ಬಂದವರಿಗೆ ಊಟೋಪಚಾರ ಮಾಡಲು ಸೂಚಿಸಿ ಗಮನ ಸೆಳೆಯುತ್ತಾರೆ. ಹಿಂದಿನ ಕಾಲದ ಅತಿಥಿ ಸತ್ಕಾರದ ಸಂಸ್ಕಾರವನ್ನು ನೆನಪಿಸುತ್ತಾರೆ.

ಶಿಸ್ತು ಪಾಲನೆ, ಆಹಾರ ಪದ್ಧತಿ: ಇಂದಿಗೂ ಬಿಳಿ ಪಂಚೆ, ಪೈಜಾಮವೇ ನಿತ್ಯದ ಧಿರಿಸು. ವದ್ಧಾಪ್ಯದಿಂದಾಗಿ ಈಗ ಸ್ವತಂತ್ರವಾಗಿ ನಡೆಯಲು ಸಾಧ್ಯವಾಗುವುದಿಲ್ಲ. ಹಿಂದಿನಿಂದಲೂ ಅತ್ಯಂತ ಶಿಸ್ತಿನ ಜೀವನವನ್ನು ನಡೆಸಿಕೊಂಡು ಬಂದಿರುವ ಕಿಂಞಣ್ಣ ಪ್ರತಿ ದಿನ ಸ್ನಾನದ ಬಳಿಕ ನೀಟಾಗಿ ತಲೆ ಬಾಚಿಸಿಕೊಳ್ಳುತ್ತಾರೆ. ಕೈಗಡಿಯಾರ ಕಟ್ಟಿಸಿಕೊಳ್ಳುವುದನ್ನು ಮರೆಯುವುದಿಲ್ಲ. ಹೆಚ್ಚಾಗಿ ದ್ರವಾಹಾರ ಸೇವನೆ ಮಾಡುತ್ತಿರುವ ಇವರಿಗೆ ಚಾಕಲೇಟು ಎಂದರೆ ಎಲ್ಲಿಲ್ಲದ ಪ್ರೀತಿ! ಪ್ರತಿ ದಿನ ಫ್ರಿಡ್ಜ್‌ನಲ್ಲಿರಿಸಿದ ಚಾಕಲೇಟು ಪೀಸ್‌ಗಳನ್ನು ಸೊಸೆಯಿಂದ ಕೇಳಿ ಬಾಯಿಗೆ ಹಾಕಿ ಚಪ್ಪರಿಸುತ್ತಾರೆ. ಮನೆಯೂಟವೇ ಇಷ್ಟ. ಮೊಸರು, ಇಡ್ಲಿ ಪಂಚಪ್ರಾಣ. ಜೀರ್ಣ ಶಕ್ತಿ ಕಡಿಮೆಯಾದ ಹಿನ್ನೆಲೆಯಲ್ಲಿ ಇದೀಗ ಸೀಯಾಳ, ತಾಜಾ ಹಣ್ಣಿನ ಜ್ಯೂಸ್ ಹೆಚ್ಚಾಗಿ ಸೇವಿಸುತ್ತಿದ್ದಾರೆ.

ಸಾರ್ವಭೌಮತೆ ಮೆರೆದ ಕವಿಯ ಹೆಜ್ಜೆ ಗುರುತು.. ಸ್ವಾತಂತ್ರ್ಯ ಹೋರಾಟಗಾರ, ಪತ್ರಿಕೋದ್ಯಮಿ, ಶಿಕ್ಷಕ, ಕೃಷಿಕ, ಅನುವಾದಕ, ಸಂಘಟಕ, ರಾಜಕಾರಣಿ, ಶಿಶು ಸಾಹಿತಿ: ಹೀಗೆ ಸರ್ವ ರಂಗಗಳಲ್ಲೂ ಸಾರ್ವಭೌಮತೆ ಮೆರೆದವರು ಕನ್ನಡದ ಕಟ್ಟಾಳು ಡಾ. ಕಯ್ಯಾರ ಕಿಞ್ಞಣ್ಣ ರೈ ಅವರು.

ಕಾಸರಗೋಡನ್ನು ಅನ್ಯಾಯವಾಗಿ ಕೇರಳಕ್ಕೆ ಸೇರಿಸಿದಾಗ ಗಡಿಯಲ್ಲಿ ಕನ್ನಡ ನೆಲದ ರಕ್ಷಣೆಗಾಗಿ ‘ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ’ ಎಂದು ಘರ್ಜಿಸಿದರು. ಅವರ ಅದೇ ದೃಢತೆ, ಶ್ರದ್ಧೆ 101ನೇ ವಯಸ್ಸಿನಲ್ಲೂ ಉಳಿದಿದೆ. ಕಾಸರಗೋಡಿನ ವಿಷಯ ಬಂದಾಗ ಇವತ್ತೂ ಅವರ ಧ್ವನಿ ಸಿಡಿದೇಳುತ್ತದೆ.

ಜನನ : ಕಾಸರಗೋಡು ಜಿಲ್ಲೆಯ ಕಯ್ಯಾರ ಎಂಬಲ್ಲಿ ಜೂ.8, 1915ರಲ್ಲಿ ದುಗ್ಗಪ್ಪ ರೈ-ದೆಯ್ಯಕ್ಕೆ ದಂಪತಿಯ ಪುತ್ರನಾಗಿ ಜನಿಸಿದ ಕಿಞಿಣ್ಣ ರೈ ಬೆಳದದ್ದು ಕಾಸರಗೋಡಿನ ಬದಿಯಡ್ಕ ಬಳಿಯ ಪೆರಡಾಲದಲ್ಲಿ. ಪ್ರಾಥಮಿಕ ಶಿಕ್ಷಣ ಅಲ್ಲೇ. ಮಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆದು, ಶಿಕ್ಷಕ ತರಬೇತಿ ಪಡೆದು ಸ್ನಾತಕೋತ್ತರ ಪದವೀಧರರೂ ಆದರು.

1935ರಿಂದ 9 ವರ್ಷ ಕಾಲ ಪತ್ರಿಕಾ ರಂಗದಲ್ಲಿ ದುಡಿದರು. ಯುವಕರನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿದ್ದರು. ಸ್ವತಃ ಗಾಂಧೀಜಿಯವರ ಜತೆ ಸೇರಿ ಸತ್ಯಾಗ್ರಹಿಯಾದರು. ಪೆರಡಾಲ ನವಜೀನ ಪ್ರೌಢಶಾಲೆಯಲ್ಲಿ 32 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. 1963ರಲ್ಲಿ ಬದಿಯಡ್ಕ ಗ್ರಾ.ಪಂ. ಅಧ್ಯಕ್ಷರಾಗಿ ಆವಿರೋಧವಾಗಿ ‘ಆದರ್ಶ’ ಪಂಚಾಯಿತಿ ಪ್ರಶಸ್ತಿ ಪಡೆಯುವಂತೆ ಮಾಡಿದ್ದರು. ಅತಿ ಹಿಂದುಳಿದ ವಿದ್ಯಾಗಿರಿ ಮತ್ತು ಉದಯಗಿರಿಯಲ್ಲಿ ಪ್ರಾಥಮಿಕ ಶಾಲೆ ತೆರೆದರು.

ಕುಟುಂಬ: ಕಯ್ಯಾರ ಶಕ್ತಿಯಾಗಿದ್ದ ಪತ್ನಿ ಉಂಞಕ್ಕೆ ಕೆಲವು ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಆರು ಗಂಡು ಮತ್ತು ಇಬ್ಬರು ಹೆಣ್ಮಕ್ಕಳು. ಮಕ್ಕಳು ವೈದ್ಯರು, ಉಪನ್ಯಾಸಕರು, ವಕೀಲರು, ಕೃಷಿಕರಾಗಿದ್ದಾರೆ.

ಪ್ರಶಸ್ತಿಗಳು: ಶಿಕ್ಷಕ ಪ್ರಶಸ್ತಿ, 1977ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿ, ಸಾಹಿತ್ಯ ಅಕಾಡೆಮಿ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ, 1963ರಲ್ಲಿ ‘ಪುನರ್ನವ’ ಕವನ ಸಂಕಲನಕ್ಕೆ ಮೈಸೂರು ಸರಕಾರದಿಂದ ಉತ್ತಮ ಕವಿತಾ ಪ್ರಶಸ್ತಿ, ‘ರತ್ನರಾಶಿ’ ಗ್ರಂಥಕ್ಕೆ ಉತ್ತಮ ಜೀವನಚರಿತ್ರೆ ಪ್ರಶಸ್ತಿ, 1989ರಲ್ಲಿ ಅಖಿಲ ಭಾರತ ಜಾನಪದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವ, ಮಂಗಳೂರು ವಿವಿ ಡಾಕ್ಟರೇಟ್ ಗೌರವ, ಹಂಪಿ ವಿವಿಯ ನಾಡೋಜ ಪ್ರಶಸ್ತಿ , ಕರ್ನಾಟಕ ಸರಕಾರದ ಪಂಪ ಪ್ರಶಸ್ತಿ.

ಪ್ರಮುಖ ಕೃತಿಗಳು: ಶ್ರೀಮುಖ, ಐಕ್ಯಗಾನ, ಪುನವರ್ವ, ಮಕ್ಕಳ ಪದ್ಯಮಂಜರಿ, ಚೇತನ, ಪಂಚಮಿ, ಕೊರಗ, ಶತಮಾನದ ಗಾನ, ಪ್ರತಿಭಾ ಪಯಸ್ವಿನಿ, ಎನ್ನಪ್ಪೆ ತುಳವಪ್ಪೆ ಮುಂತಾದ 13 ಕಾವ್ಯಗಳನ್ನು ರಚಿಸಿದ್ದಾರೆ. ರತ್ನರಾಶಿ, ಲಕ್ಷ್ಮೀಶನ ಕಥೆಗಳು, ಪರಶುರಾಮ, ಎ.ಬಿ.ಶೆಟ್ಟಿ, ಕನ್ನಡದ ಶಕ್ತಿ, ಕಾರ್ನಾಡ್ ಸದಾಶಿವ ರಾವ್, ನಾರಾಯಣ ಕಿಲ್ಲೆ ಮುಂತಾದ ಗದ್ಯ ಇಂದಿಗೂ ಗಮನಾರ್ಹ. ರಾಷ್ಟ್ರಕವಿ ಗೋವಿಂದ ಪೈ, ಗೋವಿಂದ ಪೈ ಸ್ಮೃತಿ ಕೃತಿ, ಮಲಯಾಳ ಸಾಹಿತ್ಯ ಚರಿತಂ, ಸಾಹಿತ್ಯ ದೃಷ್ಟಿ, ಮಹಾಕವಿ ಗೋವಿಂದ ಪೈ ಸೇರಿ ಇತರ ಸಾಹಿತ್ಯ ವಿಮರ್ಶೆ ಮಾಡಿದ್ದಾರೆ. ವ್ಯಾಕರಣ ಮತ್ತು ಪ್ರಬಂಧ ನಾಲ್ಕು ಪುಸ್ತಕಗಳು, ಮಕ್ಕಳ ಸಾಹಿತ್ಯದ ಬಗ್ಗೆ ನವೋದಯ ವಚನ ಮಾಲೆ ಎಂಬ ಎಂಟು ಪುಸ್ತಕಗಳನ್ನು ಬರೆದಿದ್ದಾರೆ. ಸ್ವಾತಂತ್ರ್ಯ ಹೋರಾಟದ ಬಗ್ಗೆ ವೀರಗಿಣಿ ಎಂಬ ನಾಟಕವನ್ನು, ದುಡಿತವೇ ನನ್ನ ದೇವರು ಎಂಬ ಆತ್ಮ ಚರಿತ್ರೆಯನ್ನು ಬರೆದಿದ್ದಾರೆ.

ಕವಿತಾ ಕುಟೀರದಲ್ಲಿ ಶತಪೂರ್ತಿ ಸಂಭ್ರಮ ಕನ್ನಡ ಮತ್ತು ಸಂಸ್ಕತಿ ಇಲಾಖೆ ಬೆಂಗಳೂರು, ಕವಿತಾ ಕುಟೀರ ಪೆರಡಾಲ ಇದರ ಆಶ್ರಯದಲ್ಲಿ ಇಂದು ಕಯ್ಯಾರರ ‘ಶತಪೂರ್ತಿ ಸಂಭ್ರಮ’ ಕಾರ್ಯಕ್ರಮ ಬದಿಯಡ್ಕದ ಕವಿತಾ ಕುಟೀರದಲ್ಲಿ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ: ನಿವತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ. ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್ ಸಹಿತ ಪ್ರಮುಖರ ಉಪಸ್ಥಿತಿ.

ಕೃತಿ ಬಿಡುಗಡೆ: ಡಾ. ಕಯ್ಯಾರರ ಕಿಞ್ಞಣ್ಣ ರೈ ಅವರ ಇಂಗ್ಲಿಷ್ ಭಾಷಾಂತರ ‘ಸ್ಪ್ರಿಂಗ್ಸ್ ‘(ಕೃತಿಕಾರರು: ಮಿಥಾಲಿ ರೈ), ಹಿಂದಿ ಭಾಷಾಂತರ ‘ಪಯಸ್ವಿನಿ’ (ಕೃತಿಕಾರರು: ಎ. ನರಹಿಂಹ ಭಟ್) ಬಿಡುಗಡೆ ಏರ್ಯ ಲಕ್ಷ್ಮೀನಾರಾಯಣ ಆಳ್ವರಿಂದ. ಕಲಾವಿದ ಪಿ.ಎಸ್. ಪುಂಚಿತ್ತಾಯ ಅವರ ಕಲಾ ಕುಂಚ, ಸಂಗೀತ, ಪತ್ರಿಕಾ ವರದಿಗಳ ಪ್ರದರ್ಶನ, ‘ಕಯ್ಯಾರರ ವ್ಯಕ್ತಿತ್ವದ ವಿವಿಧ ಮಜಲುಗಳು’ ಎಂಬ ವಿಷಯದಲ್ಲಿ ವಿಚಾರ ಗೋಷ್ಠಿ ನಡೆಯಲಿದೆ.

Write A Comment