ಕರಾವಳಿ

ಕರಾವಳಿಗೆ ಅಡಿ ಇಟ್ಟು ಮಾಯವಾದ ಮಳೆ, ಅನ್ನದಾತನಿಗೆ ಆತಂಕ: -ಮುಂಗಾರಿನ ಕಣ್ಣಾಮುಚ್ಚಾಲೆ

Pinterest LinkedIn Tumblr

rain

ಬೆಂಗಳೂರು ಈ ಬಾರಿಯ ಮುಂಗಾರು ಖುಷಿ ನೀಡುವ ಲಕ್ಷಣಗಳು ಕಾಣುತ್ತಿಲ್ಲ. ಬದಲಾಗಿ ರಾಜ್ಯಾದ್ಯಂತ ತಾಪಮಾನ ಹೆಚ್ಚುತ್ತಿದ್ದು, ಇನ್ನೂ ಎಂಟರಿಂದ ಹತ್ತು ದಿನಗಳ ವರುಣ ತಂಪೆರೆಯುವ ಸಾಧ್ಯತೆಯಿಲ್ಲವೆಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಇದರಿಂದ ರೈತರು ಆತಂಕಿತರಾಗಿದ್ದಾರೆ.

ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ವರ್ಷಧಾರೆಯಾಗುತ್ತದೆ. ಬಿಸಿಲಿನ ಝಳಕ್ಕೆ ಕಾಯ್ದ ನೆಲ ತಣ್ಣಗಾಗಲೆಂದು ರೈತಾಪಿ ಜನರೂ ಎದುರು ನೋಡುತ್ತಿರುತ್ತಾರೆ. ಆದರೆ,

ಮುಂಗಾರು ಕಣ್ಣಾಮುಚ್ಚಾಲೆಯಾಡುತ್ತಿದೆ. ಇದರಿಂದ ಇದರಿಂದ ಕೃಷಿ ಚಟುವಟಿಕೆಯ ಮೇಲೂ ಅಡ್ಡ ಪರಿಣಾಮ ಉಂಟಾಗುವ ಭೀತಿ ಉಂಟಾಗಿದೆ.

ಈ ಬಾರಿ ಮುಂಗಾರು ಪೂರ್ವದಲ್ಲಿ ಅಕಾಲಿಕ ಆರ್ಭಟ ತೋರಿದ ಮಳೆರಾಯ, ಮುಂಗಾರು ಆಗಮನದ ಹಂತದಲ್ಲೇ ಮಂಕಾಗಿದ್ದಾನೆ. ಹೀಗಾಗಿ ಜೂನ್ ಮೊದಲ ವಾರದಲ್ಲೂ ಮಳೆಯ ವಾತಾವರಣವಿಲ್ಲದೆ, ಇನ್ನೂ ಬೇಸಿಗೆ ಕಾಲ ಮುಂದುವರಿದಿದೆ ಎನ್ನುವಂತೆ ಚಿಂತಿಸುವಂತಾಗಿದೆ.

ವ್ಯತಿರಿಕ್ತ ಚಲನೆ ಅರಬ್ಬೀ ಸಮುದ್ರಕ್ಕೆ ಒಂದು ಬಾರಿ ಮುಂಗಾರು ಪ್ರವೇಶವಾದ ನಂತರ ಲಕ್ಷದ್ವೀಪ ಭಾಗದಲ್ಲಿ ಮಳೆ ಮೋಡಗಳು ರಚನೆಯಾಗಿ ಪಶ್ಚಿಮದತ್ತ ಚಲಿಸಬೇಕು. ಆಗ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿ ಇದೇ ಮಾರುತಗಳು ಮೇಲೆ ಮಹಾರಾಷ್ಟ್ರದತ್ತ ಚಲಿಸುತ್ತವೆ. ಆದರೆ, ಈ ಬಾರಿ ಮುಂಗಾರು ಆಗಮಿಸಿದ್ದೇ ಬಂತು. ತದನಂತರ ಮಳೆ ಮೋಡಗಳು ಇತ್ತ ಧಾವಿಸದಿರುವುದರಿಂದ ಕರ್ನಾಟಕವಷ್ಟೇ ಅಲ್ಲ, ಕೇರಳ, ತಮಿಳುನಾಡಿಗೂ ಮಳೆ ಕೊರತೆಯಾಗಿದೆ. ಸದ್ಯ ಅರಬ್ಬೀ ಸಮುದ್ರದಲ್ಲಿ ಭಾನುವಾರ ಬೆಳಗ್ಗೆ ವಾಯುಭಾರ ಕುಸಿತ ಉಂಟಾಗಿದೆಯಾದರೂ ಇದು ಭಾರತದ ಕರಾವಳಿಯಿಂದ 1,230 ಕಿ.ಮೀ. ದೂರದಲ್ಲಿದೆ. ಅಲ್ಲದೆ, ಮಳೆ ಮೋಡಗಳು ಭಾರತದ ಕರಾವಳಿ ಬದಲು ಆಗ್ನೇಯ ಭಾಗ ಓಮಾನ್‌ನತ್ತ ಚಲಿಸುತ್ತಿರುವುದರಿಂದ ಇಲ್ಲಿ ಮಳೆ ಸಾಧ್ಯವಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಮುಂಗಾರು ಮಾರುತಗಳು ಆಗಮಿಸುವ ಸಮಯದಲ್ಲಿ ರಾಜ್ಯದಲ್ಲಿ ಒಣಹವೆ ಇದ್ದಾಗ ಮಳೆ ಮೋಡಗಳು ತೀವ್ರವಾಗಿ ಆವರಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ, ಜೂ. 5 ರ ಸಂದರ್ಭದಲ್ಲಿ ದಕ್ಷಿಣ ಒಳನಾಡು, ಕರಾವಳಿ ಮತ್ತು ಉತ್ತರ ಒಳನಾಡಿನ ಅನೇಕ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿತ್ತು. ಇದರಿಂದ ಮುಂಗಾರು ಮಾರುತಗಳ ಆಗಮನಕ್ಕೆ ಕೊಂಚ ಅಡ್ಡಿಯಾಗುತ್ತದೆ. ಈಗ ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಮೋಡಗಳು ಆಗ್ನೇಯದತ್ತ ಚಲಿಸಿ ಮತ್ತೊಂದು ವಾಯುಭಾರ ಕುಸಿತ ಉಂಟಾಗಿ ಅದು ಭಾರತ ತಲುಪುವುದಕ್ಕೆ ಕನಿಷ್ಠ 8 ರಿಂದ 10 ದಿನಗಳ ಸಮಯ ಬೇಕಾಗಬಹುದು. ಬಂಗಾಳಕೊಲ್ಲಿಯಲ್ಲಿ ವಾಯುಭಾರ ವ್ಯತ್ಯಾಸ ಉಂಟಾದರೂ ಸ್ವಲ್ಪ ಮಟ್ಟಿನ ಮಳೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮರುಕಳಿಸಿದ ಎಲ್‌ನಿನೊ ವರ್ಷಗಳು ಮುಂಗಾರು ಆಗಮಿಸಿದರೂ ಮಳೆಯಾಗದಿರುವುದು ಇದು ಮೊದಲೇನಲ್ಲ. ಈ ಹಿಂದೆ 2009 ರಲ್ಲಿ ಎಲ್‌ನಿನೋ ಪರಿಣಾಮದಿಂದ ಮಳೆ ಕೊರತೆಯಾಗುತ್ತದೆ ಎಂದು ಹೇಳಲಾಗಿತ್ತು. ಆ ವರ್ಷ ಮುಂಗಾರು ಆರಂಭದ ತಿಂಗಳು ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಇದ್ದರೂ ನಂತರ ಭಾರಿ ಮಳೆ ಸುರಿದು ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಪ್ರವಾಹ ಉಂಟಾಗಿತ್ತು. 2012 ರಲ್ಲಿಯೂ ಸಹ ಎಲ್‌ನಿನೊ ವರ್ಷ ಎಂದು ಹೇಳಲಾಗಿತ್ತು. ಆಗಲೂ ಇದೇ ರೀತಿ ವಾಡಿಕೆಯಂತೆ ಮುಂಗಾರು ಪ್ರವೇಶವಾಯಿತಾದರೂ ಮಳೆ ಮಾತ್ರ ಬರಲಿಲ್ಲ. ಆ ವರ್ಷ ಒಟ್ಟಾರೆ ಶೇ.18 ರಷ್ಟು ಮಳೆ ಕೊರತೆ ಉಂಟಾಗಿತ್ತು. ಈಗ ಅಂಥದ್ದೇ ಭೀತಿ ಎದುರಾಗಿದೆ

ಏರಿದ ತಾಪ ಮುಂಗಾರು ಆರಂಭದ ನಂತರ ಮಳೆಗೆ ಕೊಡೆ ಹಿಡಿಯಬೇಕಾದ ಜನ ಈಗ ಬಿಸಿಲಿಗೆ ಕೊಡೆ ಹಿಡಿಯುವಂತಹ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿದೆ. ರಾಜ್ಯದ ಶೇ.76.5 ರಷ್ಟು ಭೌಗೋಳಿಕ ಪ್ರದೇಶದಲ್ಲಿ 32ರಿಂದ 36 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಇದೆ. ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ ಮತ್ತು ತುಮಕೂರು ಜಿಲ್ಲೆಗಳಲ್ಲಿ 39ರಿಂದ 40.8 ಡಿಗ್ರಿ ಸೆಲ್ಷಿಯಸ್‌ನಷ್ಟು ಉಷ್ಣಾಂಶ ದಾಖಲಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಸರಾಸರಿಗಿಂತಲೂ 2ರಿಂದ 4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗಿದೆ. ಒಣಹವೆ ಮತ್ತು ಮಳೆ ಮೋಡಗಳು ಇಲ್ಲದಿರುವುದರಿಂದ ಬಿಸಿಲು ಹೆಚ್ಚಾಗಿದೆ ಎಂಬುದು ಹವಾಮಾನ ತಜ್ಞರ ಅಭಿಪ್ರಾಯ. —

”ಭಾರತಕ್ಕೆ ಮುಂಗಾರಿನ ಆಗಮನವಾಗಿದ್ದು, ರಾಜ್ಯದ ಮೂರ‌್ನಾಲ್ಕು ಜಿಲ್ಲೆಗಳಿಗೆ ವ್ಯಾಪಿಸಿಕೊಂಡಿದೆ. ಆದರೆ, ಮಳೆ ಮೋಡಗಳು ದಟ್ಟವಾಗಿಲ್ಲದ ಸಂದರ್ಭದಲ್ಲಿ ಮುಂಗಾರು ಆಗಮನವಾದರೂ ಮಳೆಯಾಗುವುದಿಲ್ಲ. ಈ ಬಾರಿಯೂ ಅಂತಹ ಪರಿಸ್ಥಿತಿ ಇದೆ. ಈ ಮಧ್ಯೆ ಕರಾವಳಿ ಭಾಗದ ಕಾರವಾರದಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ವ್ಯತ್ಯಾಸವಾಗಿ ಮಳೆ ಮೋಡಗಳು ಧಾವಿಸಿದಲ್ಲಿ ಉತ್ತಮ ಮಳೆಯಾಗುತ್ತದೆ,”. -ಸುಂದರ್ ಎಂ.ಮೇತ್ರಿ, ಹವಾಮಾನ ಇಲಾಖೆ ನಿರ್ದೇಶಕ

Write A Comment