ಅಂತರಾಷ್ಟ್ರೀಯ

ಪಾಕ್‌ನಿಂದ ನಿಲ್ಲದ ರಗಳೆ: ಪ್ರಧಾನಿ ಮೋದಿ

Pinterest LinkedIn Tumblr

2-2-07062-PTI6_7_2015_000135A

ಢಾಕಾ: ಪಾಕ್ ವಿರುದ್ಧ ವಾಗ್ದಾಳಿ ನಡೆಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ, ”ನೆರೆಯ ಪಾಕಿಸ್ತಾನವು ಭಯೋತ್ಪಾದನೆಯನ್ನು ಉತ್ತೇಜಿಸುವ ಮೂಲಕ ರಗಳೆ ಸೃಷ್ಟಿಸುತ್ತಿದೆ,” ಎಂದು ಕಟು ಪದಗಳಿಂದ ಭಾನುವಾರ ಟೀಕಿಸಿದರು.

ಬಾಂಗ್ಲಾ ಪ್ರವಾಸದ ಎರಡನೇ ಮತ್ತು ಅಂತಿಮ ದಿನವಾದ ಭಾನುವಾರ ಢಾಕಾ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭ ಉದ್ದೇಶಿಸಿ ಮಾತನಾಡಿದ ಮೋದಿ, ”ಪದೇಪದೆ ಭಾರತದ ಶಾಂತಿ ಕದಡುವ ಪ್ರಯತ್ನವನ್ನು ಪಾಕ್ ಮಾಡುತ್ತಲೇ ಇದೆ. ಭಯೋತ್ಪಾದನೆಗೆ ಗಡಿಗಳಿಲ್ಲ. ಅಮಾಯಕರು ಉಗ್ರರ ದಾಳಿಗೆ ಬಲಿಯಾಗುತ್ತಿದ್ದಾರೆ,” ಎಂದರು.

ಇದೇ ವೇಳೆ ಉಗ್ರರ ವಿರುದ್ಧದ ಸಮರ ನಡೆಸಿರುವ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾರನ್ನು ಪ್ರಶಂಸಿಸಿದ ಮೋದಿ, ”ಮಹಿಳೆಯಾಗಿಯೂ ಧೈರ್ಯದಿಂದ ಉಗ್ರ ನಿಗ್ರಹ ಸಮರಕ್ಕೆ ಹಸೀನಾ ಮುಂದಾಗಿದ್ದಾರೆ. ದಿಟ್ಟ ಹೆಜ್ಜೆಗಳನ್ನು ಈ ನಿಟ್ಟಿನಲ್ಲಿ ಇಡುತ್ತಿದ್ದಾರೆ. ಭಯೋತ್ಪಾದನೆ ಎನ್ನುವುದು ಮಾನವೀಯತೆಯ ಶತ್ರು,” ಎಂದರು.

ಇದಕ್ಕೂ ಮೊದಲು ಮೋದಿ ಮತ್ತು ಹಸೀನಾ ಅವರು ಜಂಟಿ ಹೇಳಿಕೆ ಹೊರಡಿಸಿ, ಭೂ ಗಡಿ ಒಪ್ಪಂದ ಸೇರಿದಂತೆ ಉಭಯ ದೇಶಗಳ ನಡುವಿನ ಸದ್ಯದ ಮಹತ್ವದ ಬೆಳವಣಿಗೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದರು.

ಚಾನ್ಸರಿ ಸಂಕೀರ್ಣ ಉದ್ಘಾಟನೆ: ಬರಿಧಾರದಲ್ಲಿನ ಭಾರತದ ಹೈಕಮಿಷನ್‌ನ ಚಾನ್ಸರಿ ಸಂಕೀರ್ಣವನ್ನು ಮೋದಿ ಅವರು ಭಾನುವಾರ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಭಾರತದ ನೆರವಿನಿಂದ ಕೈಗೊಳ್ಳುವ ಆರು ಯೋಜನೆಗಳಿಗೆ ಚಾಲನೆ ನೀಡಿದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರೆ ವಿಕಾಸ್ ಸ್ವರೂಪ್ ಟ್ವೀಟಿಸಿದ್ದಾರೆ.

ಯೋಜನೆಗಳಿಗೆ ಚಾಲನೆ: ನರೈಲ್‌ನಲ್ಲಿನ ವಿಕ್ಟೋರಿಯಾ ಕಾಲೇಜ್, ಅಂಧರ ಶಿಕ್ಷಣ ಮತ್ತು ಪುನರ್ವಸತಿ ಅಭಿವೃದ್ಧಿ ಸಂಘಟನೆಯ ಮೂರನೇ ಮಹಡಿ ಕಾಮಗಾರಿಗೆ ಚಾಲನೆ, ಕೊಳಚೆನೀರು ಮತ್ತು ತ್ಯಾಜ್ಯ ನೀರು ಶುದ್ಧೀಕರಣ ಯೋಜನೆ, ಢಾಕಾ ವಿವಿಯಲ್ಲಿ ಹಿಂದಿ ವಿಭಾಗ ಸೇರಿದಂತೆ ಹಲವು ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು.

ಢಾಕೇಶ್ವರಿಗೆ ವಿಶೇಷ ಆರತಿ: ಬಾಂಗ್ಲಾದ ‘ರಾಷ್ಟ್ರೀಯ ದೇಗುಲ’ ಎಂದೇ ಕರೆಯಲಾಗುವ 12ನೇ ಶತಮಾನದ ಢಾಕೇಶ್ವರಿ ದೇಗುಲಕ್ಕೆ ಭೇಟಿ ನೀಡಿದ ಮೋದಿ ಅವರೇ ಖುದ್ದಾಗಿ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು. ಪುರಾತನ ಕಾಳಿ ದೇವಸ್ಥಾನದಲ್ಲಿ ಅರ್ಧತಾಸಿಗೂ ಹೆಚ್ಚುಕಾಲ ಕಳೆದ ಅವರು, ಹಿಂದೂ, ಬೌದ್ಧ, ಕ್ರೈಸ್ತ ಏಕತಾ ಮಂಡಳಿಯ ಪ್ರತಿನಿಧಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ರಾಮಕೃಷ್ಣ ಮಿಷನ್‌ಗೆ ಭೇಟಿ ನೀಡಿ, ಅಲ್ಲಿನ ಸಂತರೊಂದಿಗೆ ಸಂವಾದ ನಡೆಸಿದರು.

Write A Comment