ಕರ್ನಾಟಕ

ಬೆಂಗಳೂರು: ಹವಾಲಾ ದಂಧೆಯಲ್ಲಿ ತೊಡಗಿದ್ದ ನಾಲ್ಕು ಮಂದಿಯ ಬಂಧನ

Pinterest LinkedIn Tumblr

pvec08lk15 hawala arrest

ಬೆಂಗಳೂರು: ನಗರದ ಮಾಮೂಲ್‌ಪೇಟೆಯ ಎಂ.ಎಂ. ಗಾರ್ಮೆಂಟ್ಸ್‌ ಅಂಗಡಿ ಮೇಲೆ ಭಾನುವಾರ ದಾಳಿ ನಡೆಸಿರುವ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು, ಹವಾಲಾ ದಂಧೆಯಲ್ಲಿ ತೊಡಗಿದ್ದ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಚಿಕ್ಕಪೇಟೆಯ ಮಾಂಗಿಲಾಲ್ ಜೈನ್ (53) ಮತ್ತು ರಮೇಶ್ ಕುಮಾರ್‌(49), ಯಲಹಂಕದ ರಾಣಾ ರಾಮ್(36) ಹಾಗೂ ಮಾಮೂಲ್‌ಪೇಟೆಯ ಬಾಬು ಲಾಲ್‌ ಸುತಾರ್(38) ಬಂಧಿತರು. ಇವರಿಂದ ₹ 17.60 ಲಕ್ಷ ನಗದು ಜಪ್ತಿ ಮಾಡಲಾಗಿದೆ.

‘ವ್ಯಾಪಾರಿಗಳಿಂದ ಲಕ್ಷಗಟ್ಟಲೆ ಹಣ ಸಂಗ್ರಹಿಸುತ್ತಿದ್ದ ಆರೋಪಿಗಳು, ಸರ್ಕಾರಕ್ಕೆ ತೆರಿಗೆ ಪಾವತಿಸದೆ, ಹವಾಲಾ ಮೂಲಕ ಅಕ್ರಮವಾಗಿ ರಾಜಸ್ತಾನ, ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳ ವ್ಯಾಪಾರಿಗಳಿಗೆ ಹಣ ತಲುಪಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಕೆಲ ವ್ಯಾಪಾರಿಗಳು ಹೊರರಾಜ್ಯಗಳಿಗೆ ತಲುಪಿಸಲು ಆರೋಪಿಗಳಿಗೆ ಹಣ ತಂದು ಕೊಡುತ್ತಿದ್ದರು. ಹಣವನ್ನು ಹವಾಲಾ ಮೂಲಕ ಹೊರ ರಾಜ್ಯ ವ್ಯಾಪಾರಿಗಳಿಗೆ ತಲುಪಿಸುತ್ತಿದ್ದ ಆರೋಪಿಗಳು, ₹ 1 ಲಕ್ಷಕ್ಕೆ ₹ 200ರಿಂದ ₹ 300 ಕಮಿಷನ್ ಪಡೆಯುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ದಾಳಿ ವೇಳೆ ಸ್ಥಳದಲ್ಲಿ 28 ಬ್ಯಾಂಕ್‌ ಪಾಸ್‌ ಬುಕ್‌ಗಳು ಮತ್ತು ಹವಾಲಾ ಹಣದ ವಿವರಣೆ ಹೊಂದಿರುವ ಚಿಕ್ಕ ಪುಸ್ತಕ ಸಹ ದೊರೆತಿದೆ. ಅಲ್ಲದೆ, ಇದೇ ತಂಡದ ಮತ್ತೊಬ್ಬ ಆರೋಪಿ ರಮೇಶ್ ಕುಮಾರ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಬೆಳ್ಳಿ ಗಟ್ಟಿ ಅಕ್ರಮ ಸಾಗಣೆ
ಆರೋಪಿಗಳ ಮೂಲಕ ಕೆಲ ವ್ಯಾಪಾರಿಗಳು ಹೊರ ರಾಜ್ಯಗಳಿಂದ ಅಕ್ರಮವಾಗಿ ಬೆಳ್ಳಿ ಗಟ್ಟಿ ತರಿಸಿಕೊಳ್ಳುತ್ತಿದ್ದರು.  ದಾಳಿ ವೇಳೆ ಸ್ಥಳದಲ್ಲಿ 3 ಕೆ.ಜಿ 160 ಗ್ರಾಂ ಬೆಳ್ಳಿ ಗಟ್ಟಿ ದೊರೆತಿದ್ದು, ಕಮಿಷನ್ ಆಧಾರದ ಮೇಲೆ ಬೆಳ್ಳಿ ಗಟ್ಟಿ ಸಾಗಣೆ ಮಾಡುತ್ತಿದ್ದರು ಎಂದು ಕಮಿಷನ್ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

Write A Comment