ಕರ್ನಾಟಕ

ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸಲು ಹೊಸ ಕಾನೂನು

Pinterest LinkedIn Tumblr

DVS-Environment-day

ಬೆಂಗಳೂರು, ಜೂ.5- ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸಲು ಅನುಕೂಲವಾಗುವಂತೆ ಕಾನೂನು ರೂಪಿಸುವುದಾಗಿ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ. ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನರೇಂದ್ರಮೋದಿಯವರ

ಸ್ವಚ್ಛ ಭಾರತ ಅಭಿಯಾನ ಐದು ವರ್ಷಗಳಲ್ಲಿ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಅಭಿಯಾನ ಈಗಾಗಲೇ ಮನೆ ಮನೆ ತಲುಪಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರಿಗೆ ಅರಿವು ಮೂಡಿಸುವುದು ಒಂದು ಕಡೆಯಾದರೆ  ಭಾರತದಲ್ಲಿ ಬುದ್ಧಿಮಾತಿಗಿಂತ ದಂಡ ವಿಧಿಸಿ ಕಾರ್ಯಗತಗೊಳಿಸುವುದು ಅನಿವಾರ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನು ರೀತಿ ತಿದ್ದುಪಡಿ ಮಾಡಲಾಗುತ್ತಿದ್ದು, ಕೆಲವು ಉಪಬಂಧಗಳನ್ನು ಸೇರಿಸಲಾಗುತ್ತಿದೆ. ಮುಂದಿನ ಸಂಸತ್ ಅಧಿವೇಶನದಲ್ಲಿ ಈ ಕಾಯ್ದೆಯನ್ನು ಮಂಡಿಸಲಾಗುವುದು. ಸ್ವಚ್ಛತಾ ಅಭಿಯಾನ ಸಹಕಾರಿಯಾಗಲಿದೆ ಎಂದರು.

ಬಹಳ ವರ್ಷಗಳಿಂದ ನಾವು ಪರಿಸರದ ಮೇಲೆ ಮಾಡಿರುವ ತಪ್ಪಿನಿಂದ ಮಾಲಿನ್ಯ ಮಿತಿಮೀರಿದೆ. ಇದನ್ನು ಸರುಪಡಿಸಿಕೊಳ್ಳಲು ಬಹಳ ವರ್ಷಗಳೇ ಬೇಕು. ಯುವಜನತೆ ಹಾಗೂ ವಿದ್ಯಾರ್ಥಿಗಳು ದೂರದ ಊರುಗಳನ್ನು ಹೊರತುಪಡಿಸಿ ಶಾಲಾ-ಕಾಲೇಜು ಮತ್ತು ಹತ್ತಿರದ ಪ್ರದೇಶಗಳಿಗೆ ತೆರಳಲು ಸೈಕಲ್‌ಅನ್ನೇ ಬಳಸಬೇಕು. ಇದರಿಂದ ಪರಿಸರ ರಕ್ಷಣೆಗೆ ಮಹತ್ವದ ಕೊಡುಗೆ ನೀಡಿದಂತಾಗುತ್ತದೆ. ಸ್ವಚ್ಛತೆಗೂ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು. ಪುಟ್ಟ ರಾಷ್ಟ್ರವಾದ ಸಿಂಗಾಪುರ ಸ್ವಚ್ಛತೆಯಿಂದ ವಿಶ್ವದ ಗಮನ ಸೆಳೆದಿದೆ. ಮಹಾತ್ಮ ಗಾಂಧೀಜಿಯವರ ಸ್ವಚ್ಛತಾ ಅಭಿಯಾನವನ್ನು ಮೋದಿ ಸರ್ಕಾರ ಸಾಕಾರಗೊಳಿಸುತ್ತಿದೆ. ಪರಿಸರದ ಬಗ್ಗೆ ಕಾಳಜಿ ವಹಿಸಿ ಭೂಮಿಯನ್ನು ಉಳಿಸಬೇಕು ಎಂದು ಸಲಹೆ ಮಾಡಿದರು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ವಾಮನಾಚಾರ್ಯ ಮಾತನಾಡಿ, ಬೆಂಗಳೂರಿನಲ್ಲಿ ವಾಯುಮಾಲಿನ್ಯ ಮಿತಿಮೀರಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪರಿಸರ ಸಂರಕ್ಷಣೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಕೈಗೊಂಡಿರುವ ಕ್ರಮಗಳಿಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Write A Comment