ಕರ್ನಾಟಕ

ಗ್ರಾಮ ಪಂಚಾಯ್ತಿ ಫೈಟ್; ಪೂರ್ಣ ಫ‌ಲಿತಾಂಶ ಶನಿವಾರ ಪ್ರಕಟ

Pinterest LinkedIn Tumblr

ele

ಬೆಂಗಳೂರು: ರಾಜ್ಯದ 5835 ಗ್ರಾಮ ಪಂಚಾಯ್ತಿಗಳಿಗೆ ಎರಡು ಹಂತದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಸಂಜೆವರೆಗೆ ಶೇ.50ರಷ್ಟು ಫಲಿತಾಂಶ ಮಾತ್ರ ಪ್ರಕಟವಾಗಿದೆ. ಪೂರ್ಣ ಫಲಿತಾಂಶ ನಾಳೆ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ ಪ್ರಕಟಕ್ಕೂ ಮುನ್ನ ಸೋಲಿನ ಭೀತಿಯಿಂದ ಪೇರಮಾಚನಹಳ್ಳಿ ಗ್ರಾಮ ಪಂಚಾಯಿತಿ ಅಭ್ಯರ್ಥಿ ತಿಮ್ಮಣ್ಣ (50) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದ ಗುನ್ನಹಳ್ಳಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಈ ಚುನಾವಣೆ ರಾಜಕೀಯ ಪಕ್ಷಗಳ ಚಿಹ್ನೆಯಡಿ ನಡೆಯದಿದ್ದರೂ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಬಹುತೇಕರು ರಾಜಕೀಯ ಪಕ್ಷಗಳ ಕಾರ್ಯಕರ್ತರೇ ಆಗಿರುವುದರಿಂದ ಫ‌ಲಿತಾಂಶದ ಬಗ್ಗೆ ರಾಜಕೀಯ ಪಕ್ಷಗಳೂ ಕುತೂಹಲದಿಂದ ಕಾಯುತ್ತಿದ್ದು, ಕೆಲವಡೆ ಫಲಿತಾಂಶ ಪ್ರಕಟಗೊಂಡಿದ್ದರೆ, ಇನ್ನು ಕೆಲವೆಡೆ ಫಲಿತಾಂಶ ಪೂರ್ಣ ಪ್ರಮಾಣದಲ್ಲಿ ಘೋಷಣೆಯಾಗಿಲ್ಲ.

ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಮತ ಎಣಿಕೆ ಕೇಂದ್ರದ ಸುತ್ತ 500 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಗ್ರಾಮ ಪಂಚಾಯ್ತಿಗೆ ಸರಾಸರಿ 3ರಂತೆ ಮತ ಎಣಿಕೆ ಟೇಬಲ್‌ಗ‌ಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಎಣಿಕೆ ಕೇಂದ್ರಕ್ಕೆ ಒಬ್ಬ ಉಸ್ತುವಾರಿ ಅಧಿಕಾರಿ, ಪ್ರತಿ ಟೇಬಲ್‌ಗೆ ಒಬ್ಬ ಮೇಲ್ವಿಚಾರಕ ಹಾಗೂ ಇಬ್ಬರು ಸಹಾಯಕರನ್ನು ನೇಮಿಸಲಾಗಿದೆ.

ಪೂರ್ಣ ಫ‌ಲಿತಾಂಶ ಶನಿವಾರ:
ಆಯಾ ಗ್ರಾಮ ಪಂಚಾಯ್ತಿಗೆ ಸಂಬಂಧಿಸಿದ ಎಣಿಕೆ ಟೇಬಲ್‌ಗ‌ಳಲ್ಲಿ ಒಂದು ಕ್ಷೇತ್ರದ ಮತ ಎಣಿಕೆ ಮುಗಿದ ಬಳಿಕ ಇನ್ನೊಂದು ಕ್ಷೇತ್ರದ ಮತ ಎಣಿಕೆ ನಡೆಯುತ್ತದೆ. ಹೀಗಾಗಿ ಒಂದು ಕ್ಷೇತ್ರದ ಫ‌ಲಿತಾಂಶದ ನಂತರ ಇನ್ನೊಂದು ಕ್ಷೇತ್ರದ ಫ‌ಲಿತಾಂಶ ಪ್ರಕಟವಾಗಲಿದೆ. ಬಹುಸಂಖ್ಯೆಯ ಸದಸ್ಯರಿರುವ ಕ್ಷೇತ್ರದಲ್ಲಿ ಸದಸ್ಯರು ಪಡೆದ ಮತಗಳ ಆಧಾರದ ಮೇಲೆ ಮತ್ತು ಮೀಸಲಾತಿ ಪರಿಗಣಿಸಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಮತ ಎಣಿಕೆ ಕಾರ್ಯ ಪೂರ್ಣಗೊಳ್ಳುವಾಗ ತಡರಾತ್ರಿಯಾಗಲಿದೆ. ಇದೆಲ್ಲವನ್ನೂ ಕ್ರೋಢೀಕರಿಸಿ ವಿಜೇತ ಅಭ್ಯರ್ಥಿಗಳನ್ನು ಶನಿವಾರದ ವೇಳೆಗೆ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಜೂ. 29ರಂದು 15 ಜಿಲ್ಲೆಗಳಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ. 80.33 ಮತ್ತು ಜೂ. 2ರಂದು ಮತ್ತೆ 15 ಜಿಲ್ಲೆಗಳಲ್ಲಿ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಶೇ. 82.54ರಷ್ಟು ಮತದಾನವಾಗಿತ್ತು. ಫ‌ಲಿತಾಂಶ ಪ್ರಕಟದೊಂದಿಗೆ ಗ್ರಾಮ ಪಂಚಾಯ್ತಿ ಚುನಾವಣಾ ಪ್ರಕ್ರಿಯೆಗೆ ತೆರೆ ಬೀಳಲಿದೆ.

ಸಾಮಾನ್ಯ ಕ್ಷೇತ್ರದಲ್ಲೂ ಮೀಸಲು ಅಭ್ಯರ್ಥಿ ಗೆಲ್ಲಲು ಅವಕಾಶ
ಮೀಸಲು ಅಭ್ಯರ್ಥಿ ಸಾಮಾನ್ಯ ಕ್ಷೇತ್ರಗಳಲ್ಲಿಯೂ ಗೆಲ್ಲಬಹುದು. ಇದು ಬಹುಸಂಖ್ಯೆಯ ಸದಸ್ಯರಿರುವ ಗ್ರಾಮ ಪಂಚಾಯ್ತಿ ಕ್ಷೇತ್ರಗಳ ವೈಶಿಷ್ಟé.

ಹೌದು. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳಿಗೆ ಮೀಸಲಾದ ಕ್ಷೇತ್ರಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಬಹುಸಂಖ್ಯೆಯ ಸದಸ್ಯರಿರುವ ಕ್ಷೇತ್ರಗಳಲ್ಲಿ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಗೆದ್ದು ಬರಲು ಅವಕಾಶವಿದೆ.

ಉದಾಹರಣೆಗೆ 5 ಸದಸ್ಯರನ್ನು ಹೊಂದಿರುವ ಕ್ಷೇತ್ರ. ಇಲ್ಲಿ ತಲಾ ಒಂದು ಸ್ಥಾನ ಪ.ಜಾತಿ, ಪಂಗಡ ಮತ್ತು ಹಿಂದುಳಿದವರಿಗೆ ಹಾಗೂ ಎರಡು ಸ್ಥಾನ ಸಾಮಾನ್ಯರಿಗೆ ಇರುತ್ತದೆ. ಮತ ಎಣಿಕೆ ಮುಗಿದ ಬಳಿಕ ಮೊದಲು ಪ.ಜಾತಿ ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ಪಡೆದ ಅಭ್ಯರ್ಥಿಯನ್ನು ವಿಜೇತ ಮೀಸಲು ಅಭ್ಯರ್ಥಿ ಎಂದು ಘೋಷಿಸಲಾಗುತ್ತದೆ. ಅದೇ ರೀತಿ ಪ.ಪಂಗಡ ಮತ್ತು ಹಿಂದುಳಿದ ವರ್ಗಗಳ ಮೀಸಲಿನಡಿ ವಿಜೇತ ಅಭ್ಯರ್ಥಿಗಳನ್ನು ಪ್ರಕಟಿಸಲಾಗುತ್ತದೆ. ಅಂತಿಮವಾಗಿ ಸಾಮಾನ್ಯ ಕ್ಷೇತ್ರದ ವಿಜೇತರನ್ನು ಘೋಷಿಸಲಾಗುತ್ತದೆ. ಈ ಸಂದರ್ಭದಲ್ಲಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ ಅಭ್ಯರ್ಥಿ ಸಾಮಾನ್ಯ ಅಭ್ಯರ್ಥಿಗಿಂತ ಹೆಚ್ಚು ಮತ ಗಳಿಸಿದ್ದರೆ ಆತನನ್ನು ಸಾಮಾನ್ಯ ಕ್ಷೇತ್ರದ ವಿಜೇತ ಅಭ್ಯರ್ಥಿ ಎಂದು ಪರಿಗಣಿಸಲಾಗುತ್ತದೆ.

ಅದೇ ರೀತಿ ದ್ವಿಸದಸ್ಯ ಕ್ಷೇತ್ರಗಳಲ್ಲಿ ಒಂದು ಸದಸ್ಯ ಸ್ಥಾನ ಮೀಸಲು ಆಗಿರುತ್ತದೆ. ಇನ್ನೊಂದು ಸಾಮಾನ್ಯ ಸ್ಥಾನವಾಗಿರುತ್ತದೆ. ಇಲ್ಲಿಯೂ ಮೀಸಲು ಕ್ಷೇತ್ರದಲ್ಲಿ ಮೀಸಲು ಅಭ್ಯರ್ಥಿ ಪಡೆದ ಮತಗಳ ಸಂಖ್ಯೆ ಸಾಮಾನ್ಯ ಅಭ್ಯರ್ಥಿ ಪಡೆದ ಮತಕ್ಕಿಂತ ಹೆಚ್ಚಿದ್ದರೆ ಆತ ಸಾಮಾನ್ಯ ಕ್ಷೇತ್ರದ ವಿಜೇತ ಅಭ್ಯರ್ಥಿಯಾಗುತ್ತಾನೆ.

– 2 ಹಂತದಲ್ಲಿ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯ ಮತ ಎಣಿಕೆ ಇಂದು
– ಬೆಳಗ್ಗೆ 8ರಿಂದ ಎಣಿಕೆ ಶುರು, ಅಂತಿಮ ಫ‌ಲಿತಾಂಶಕ್ಕೆ ನಾಳೆವರೆಗೂ ಕಾಯಬೇಕು
– ಸಾಮಾನ್ಯ ಕ್ಷೇತ್ರದಲ್ಲೂ ಮೀಸಲು ಅಭ್ಯರ್ಥಿ ಗೆಲ್ಲಲು ಅವಕಾಶ

5835 ಗ್ರಾಪಂ: ಚುನಾವಣೆ ನಡೆದ ಒಟ್ಟು ಗ್ರಾಮ ಪಂಚಾಯ್ತಿಗಳು
94348 ಸ್ಥಾನ: ಎಲ್ಲಾ ಗ್ರಾ.ಪಂ.ಗಳ ಒಟ್ಟಾರೆ ಸದಸ್ಯ ಸ್ಥಾನಗಳ ಸಂಖ್ಯೆ
901 ಸ್ಥಾನ: ನಾಮಪತ್ರವೇ ಸಲ್ಲಿಕೆಯಾಗದ ಗ್ರಾ.ಪಂ. ಸ್ಥಾನಗಳು
8687 ಸ್ಥಾನ: ಅವಿರೋಧವಾಗಿ ಆಯ್ಕೆಯಾದ ಗ್ರಾಪಂ ಸದಸ್ಯರು
84760 ಸ್ಥಾನ: ಚುನಾವಣೆ ನಡೆದ ಗ್ರಾಮ ಪಂಚಾಯ್ತಿ ಸ್ಥಾನಗಳು
2.33 ಲಕ್ಷ: ಒಟ್ಟಾರೆ ಕಣದಲ್ಲಿರುವ ಗ್ರಾಮ ಪಂಚಾಯ್ತಿ ಅಭ್ಯರ್ಥಿಗಳು
-ಉದಯವಾಣಿ

Write A Comment