ಕರ್ನಾಟಕ

ಕಬ್ಬನ್‌ ಉದ್ಯಾನದಲ್ಲಿ ಸಾಕು ಪ್ರಾಣಿಗಳ ನಿಷೇಧಕ್ಕೆ ಚಿಂತನೆ

Pinterest LinkedIn Tumblr

pvec05june15newscubbondog

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ ಸಾಕು ಪ್ರಾಣಿಗಳ ಪ್ರವೇಶ ನಿಷೇಧಿಸಲು ತೋಟಗಾರಿಕೆ ಇಲಾಖೆ ಚಿಂತನೆ ನಡೆಸಿದೆ.

ಉದ್ಯಾನದಲ್ಲಿರುವ ಬೀದಿ ನಾಯಿಗಳು ಮತ್ತು ಜನರು ಪ್ರತಿದಿನ ಎಷ್ಟು ಸಾಕು ನಾಯಿಗಳನ್ನು ಉದ್ಯಾನಕ್ಕೆ ತರುತ್ತಾರೆ ಎಂಬುವುದರ ಬಗ್ಗೆ ಪರಿಶೀಲಿಸಿ ಮೂರ್ನಾಲ್ಕು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಕಬ್ಬನ್‌ ಉದ್ಯಾನ ಬಿಬಿಎಂಪಿ ವ್ಯಾಪ್ತಿಯಲ್ಲಿದೆ. ಹೀಗಾಗಿ ಸಾಕು ಪ್ರಾಣಿಗಳನ್ನು ಉದ್ಯಾನಕ್ಕೆ ತರದಂತೆ ತಡೆಯಲು ಬಿಬಿಎಂಪಿ ನೆರವು ಪಡೆಯಲಾಗುವುದು. ಈ ಬಗ್ಗೆ ಪಾಲಿಕೆಯ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ಮನವಿ ಮಾಡಲಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌ ಅವರು ಹೇಳಿದರು.

‘ಸಾಕು ನಾಯಿಗಳನ್ನು ಉದ್ಯಾನಕ್ಕೆ ತರದಂತೆ ಪ್ರವೇಶದ್ವಾರ ಹಾಗೂ ಉದ್ಯಾನದ ಒಳಭಾಗದಲ್ಲಿ ಫಲಕಗಳನ್ನು ಅಳವಡಿಸಲಾಗಿದೆ. ಆದರೂ, ಜನರು ನಾಯಿಗಳನ್ನು ತರುತ್ತಾರೆ’ ಎಂದು ಅವರು ತಿಳಿಸಿದರು.

‘ಉದ್ಯಾನದಲ್ಲಿ 50ಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ‌‌ಅಲ್ಲದೇ, ಪ್ರತಿದಿನ ಜನರು 30–40 ನಾಯಿಗಳನ್ನು ತರುತ್ತಾರೆ. ಇದರಿಂದ ಉದ್ಯಾನದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಅಲ್ಲದೇ, ಇತರೆ ಜನರಿಗೂ ತೊಂದರೆಯಾಗುತ್ತಿದೆ’ ಎಂದು ಕಬ್ಬನ್ ಉದ್ಯಾನದ ನಡಿಗೆದಾರರ ಸಂಘದ ಅಧ್ಯಕ್ಷ ಎಸ್‌.ಉಮೇಶ್‌ ದೂರಿದರು.

‘1975ರ ಉದ್ಯಾನಗಳ ಸಂರಕ್ಷಣಾ ಕಾಯ್ದೆ ಅನ್ವಯ ಸಾಕು ಪ್ರಾಣಿಗಳನ್ನು ಉದ್ಯಾನದ ಒಳಗಡೆ ತರುವಂತಿಲ್ಲ. ಐದು ತಿಂಗಳ ಹಿಂದೆ ಉದ್ಯಾನದಲ್ಲಿ ಬೀದಿ ನಾಯಿಯೊಂದು ವಾಯುವಿಹಾರಕ್ಕೆ ಬಂದಿದ್ದವರ ಮೇಲೆ ದಾಳಿ ನಡೆಸಿತ್ತು. ಇಂತಹ ಪ್ರಕರಣಗಳು ಸಾಕಷ್ಟು ಇವೆ’ ಎಂದರು.

‘ನಾವು ಸಾಕು ಪ್ರಾಣಿಗಳ ವಿರೋಧಿಗಳಲ್ಲ. ಆದರೆ, ಉದ್ಯಾನಕ್ಕೆ  ಬರುವ ಜನರ ಸುರಕ್ಷತೆ ದೃಷ್ಟಿಯಿಂದ ನಾಯಿಗಳ ಪ್ರವೇಶವನ್ನು ನಿಷೇಧಿಸಬೇಕು. ಅಲ್ಲದೇ, ಉದ್ಯಾನದಲ್ಲಿರುವ ಹೆಣ್ಣುನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಬೇಕು’ ಎಂದು ಅವರು ಮನವಿ ಮಾಡಿದರು.

Write A Comment