ಕರ್ನಾಟಕ

ಬೆಂಗಳೂರು-ಮೈಸೂರು ನಡುವೆ ಹೈ ಸ್ಪೀಡ್ ರೈಲು; ಮುಖ್ಯಮಂತ್ರಿ ಸಿದ್ದರಾಮಯ್ಯ ಚೀನಾದ ಎಸ್‌ಡಿಎಸ್‌ಎಚ್ ಕಂಪೆನಿಯ ಜತೆ ಮಹತ್ವದ ಚರ್ಚೆ

Pinterest LinkedIn Tumblr

cm ciscuss

ಬೆಂಗಳೂರು, ಜೂ.4: ಬೆಂಗಳೂರು ಮತ್ತು ಮೈಸೂರು ನಡುವಿನ ಸಂಪರ್ಕ ಸುಧಾರಣೆಗೆ ಎರಡು ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಒಲವು ತೋರಿಸಿದೆ. ಕೇಂದ್ರ ಸರ್ಕಾರ ಕಳೆದ ಬಜೆಟ್‌ನಲ್ಲಿ ಪ್ರಕಟಿಸಿರುವ ಚನ್ನೈ ಮತ್ತು ಮೈಸೂರು ನಡುವಿನ ಸ್ಪೀಡ್ ರೈಲು ಯೋಜನೆಯ ಅನುಷ್ಠಾನಕ್ಕೆ ಚಾಲನೆ ದೊರೆತಿದ್ದು, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚೀನಾದ ಎಸ್‌ಡಿಎಸ್‌ಎಚ್ ಕಂಪೆನಿಯ ಜತೆ ಮಹತ್ವದ ಚರ್ಚೆ ನಡೆಸಿದರು.

ಇದರ ಜತೆಗೆ ಬೆಂಗಳೂರು-ಮೈಸೂರು ನಡುವೆ 6 ಪಥದ ಎಕ್ಸ್‌ಪ್ರೆಸ್ ಕಾರಿಡಾರ್ ಯೋಜನೆಯ ನಿರ್ಮಾಣದ ಕುರಿತು ಸಮಾಲೋಚನೆ ನಡೆಸಲಾಗಿದೆ. ನರೇಂದ್ರಮೋದಿ ಸರ್ಕಾರದ ಮಹತ್ವದ ಕನಸಿನ ಯೋಜನೆಯಾದ ಸ್ಪೀಡ್ ರೈಲು ಚನ್ನೈನಿಂದ ಮೈಸೂರುವರೆಗೂ ಹಾದು ಬರುವುದರಿಂದ ಬೆಂಗಳೂರು ಮತ್ತು ಮೈಸೂರು ನಡುವಿನ ಹಳಿಗಳ ನಿರ್ಮಾಣ ಸಾಧಕ-ಬಾಧಕಗಳ ಕುರಿತು ಪರಿಶೀಲನೆ ನಡೆದಿವೆ.

ಬೆಂಗಳೂರಿನಿಂದ ಕೆಂಗೇರಿ ಮತ್ತು ಬಿಡದಿ ಬಳಿ ತೀವ್ರವಾದ ತಿರುವುಗಳು ಇರುವುದರಿಂದ ಹೈಸ್ಪೀಡ್ ರೈಲು ಮಾರ್ಗ ಸೂಕ್ತವಲ್ಲ ಎಂಬ ವರದಿಗಳಿವೆ. ಈ ಹಿನ್ನೆಲೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಿ ಹೈಸ್ಪೀಡ್ ರೈಲಿನ ಹಾದಿಯನ್ನು ಸುಗಮಗೊಳಿಸಲು ಚಿಂತನೆ ನಡೆದಿವೆ.

ಈ ನಡುವೆ ಚೀನಾ ಕಂಪೆನಿಯ ಸಹಯೋಗದಲ್ಲಿ ಬೆಂಗಳೂರು-ಮೈಸೂರು ನಡುವೆ 6 ಪಥದ ಆಕ್ಸಿಸ್ ಕಂಟ್ರೋಲ್ ಸರ್ವೀಸ್ ರಸ್ತೆಯನ್ನೊಳಗೊಂಡ ಎಕ್ಸ್‌ಪ್ರೆಸ್ ಕಾರಿಡಾರ್ ನಿರ್ಮಾಣಕ್ಕೂ ಯೋಜನಾ ವರದಿ ಸಿದ್ಧಗೊಳಿಸುವ ತಯಾರಿ ನಡೆದಿದೆ. ಸುಮಾರು 6ಸಾವಿರ ಕೋಟಿ ರೂ. ಯೋಜನಾ ವೆಚ್ಚದ ಈ ಯೋಜನೆಗೆ ಚೀನಾದ ಎಸ್‌ಡಿಎಸ್‌ಎಚ್ ಕಂಪೆನಿಯೇ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಲಿದೆ. ಈ ರಸ್ತೆ ನಿರ್ಮಾಣಗೊಂಡರೆ ಎರಡು ಮಹಾನಗರಗಳ ನಡುವೆ ಪ್ರಯಾಣದ ಅವಧಿ ಕಡಿಮೆಯಾಗಲಿದೆ. ಹಾಗೆಯೇ ಹೈಸ್ಪೀಡ್ ರೈಲು ಜಾರಿಯಾದರೆ ರಾಜ್ಯದ ಕನಸು ನನಸಾಗಲಿದೆ. ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜನಸಂಪರ್ಕ ಸಚಿವ ರೋಷನ್‌ಬೇಗ್, ಬಿಎಂಐಸಿ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್ ಕರೋಲಾ ಮತ್ತಿತರ ಹಿರಿಯ ಅಧಿಕಾರಿಗಳು ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು. ಎಸ್‌ಡಿಎಸ್‌ಎಚ್ ಕಂಪೆನಿ ಪ್ರತಿನಿಧಿಗಳು ಚೀನಾದಲ್ಲಿ ತಾವು ಕೈಗೊಂಡಿರುವ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.

ನಗರದಲ್ಲಿ ಮತ್ತೊಂದು ಮಿನಿ ರೈಲು ಸೇವೆ: ಮೆಟ್ರೋ ನಡುವೆ ಎಲ್‌ಆರ್‌ಟಿಎಸ್ ಸಂಪರ್ಕ

ಬೆಂಗಳೂರು: ನಗರದ ಮೆಟ್ರೋ ರೈಲು ನಿಲ್ದಾಣಗಳ ನಡುವೆ ಸಂಪರ್ಕ ಸೇತುವೆ ಕಲ್ಪಿಸಲು ಲೈಟ್‌ರ್ಯಾ ಪಿಡ್‌ಟ್ರಾನ್ಸ್‌ಫೋರ್ಟ್‌ಸಿಸ್ಟಮ್ (ಎಲ್‌ಆರ್‌ಟಿಎಸ್) ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಚೀನಾದ ಸ್ಯಾಂಡಾಂಗ್ ಹೈಸ್ಪೀಡ್ ಗ್ರೂಪ್ (ಎಸ್‌ಡಿಎಚ್‌ಎಸ್) ಕಂಪೆನಿಯ ಜೊತೆ ಇಂದು ಪ್ರಾಥಮಿಕ ಚರ್ಚೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಸಂಪರ್ಕ ಸುಧಾರಣಾ ವ್ಯವಸ್ಥೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿದರು. ಜನವಸತಿ ಪ್ರದೇಶದಿಂದ ಮೆಟ್ರೋ ರೈಲ್ವೆ ನಿಲ್ದಾಣಗಳಿಗೆ ಮತ್ತು ಬಸ್ ನಿಲ್ದಾಣಗಳಿಗೆ ಸೂಕ್ತ ಸಂಪರ್ಕ ವ್ಯವಸ್ಥೆಯ ಕೊರತೆ ಕಾಡುತ್ತಿದ್ದು, ಇದರಿಂದಾಗಿಯೇ ಸಾರ್ವಜನಿಕರು ಮೆಟ್ರೋ ರೈಲು ಸೇವೆಯನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಸುಮಾರು 1 ಲಕ್ಷ ಕೋಟಿ ರೂ. ಖರ್ಚು ಮಾಡಿ ಮೆಟ್ರೋ ರೈಲ್ವೆ ಸಂಪರ್ಕ ನಿರ್ಮಿಸಿದ್ದರೂ ಜನಸಂಚಾರವಿಲ್ಲದೆ ಯೋಜನೆ ಸೊರಗುತ್ತಿದೆ.

ಮೆಟ್ರೋ ರೈಲು ಯಶಸ್ವಿಯಾಗದೇ ಇರುವುದರಿಂದ ನಗರದ ಸಂಚಾರದ ಒತ್ತಡ ನಿರೀಕ್ಷೆಯಷ್ಟು ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪರಿಹಾರ ಮಾರ್ಗಕ್ಕೆ ಸಿದ್ದವಾಗಿರುವ ರಾಜ್ಯ ಸರ್ಕಾರ ಮೆಟ್ರೋ ಒಂದು, ಎರಡು, ಮೂರು ಹಂತಗಳ ನಿಲ್ದಾಣಗಳ ನಡುವೆ ಎಲ್‌ಆರ್‌ಟಿಎಸ್ ಸೇವೆಯನ್ನು ಆರಂಭಿಸಲು ಚಿಂತನೆ ನಡೆಸಿದೆ. ನಗರದ ಒಳ ವಲಯದಲ್ಲಿ 40 ಕಿ.ಮೀ.ಮಿನಿ ರೈಲು ಮಾರ್ಗವನ್ನು ನಿರ್ಮಿಸಿ, ಮೆಟ್ರೋಗೆ ಸಂಪರ್ಕಿಸುವ ಯೋಜನೆ ಸಿದ್ಧಗೊಂಡಿದೆ. ಇದಕ್ಕಾಗಿ ಈಗಾಗಲೇ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಸಮಗ್ರ ಯೋಜನಾ ವರದಿಯನ್ನು ಸಿದ್ಧಗೊಳಿಸಿದೆ. ಈ ಯೋಜನೆಯನ್ನು ಅನುಷ್ಠಾನಕ್ಕೆತರಲು ಉತ್ಸುಕತೆ ತೋರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚೀನಾದ ಕಂಪೆನಿಯ ಜೊತೆ ಯೋಜನೆಯ ಸಾಧಕ-ಬಾಧಕಗಳು, ಆರ್ಥಿಕ ವೆಚ್ಚ, ತಾಂತ್ರಿಕತೆ ಮತ್ತು ನಿರ್ವಹಣೆಯ ಕುರಿತು ಚರ್ಚೆ ನಡೆಸಿದರು.

ಮೂರು ಪ್ರತ್ಯೇಕ ಕಾರಿಡಾರ್‌ಗಳು 
ಹೆಬ್ಬಾಳದಿಂದ ಚಾಲುಕ್ಯ ವೃತ್ತದ ಮೂಲಕ ಮಡಿವಾಳದ ಸೆಂಟ್ರಲ್ ಸಿಲ್ಕ್‌ಬೋರ್ಡ್ ವರೆಗೆ 16 ಕಿ.ಮೀವರೆಗಿನ ಉತ್ತರ-ದಕ್ಷಿಣ ಕಾರಿಡಾರ್ ಹಾಗೂ ಗೊರಗುಂಟೆ ಪಾಳ್ಯದಿಂದ ಕೆಆರ್‌ಪುರಂ ವರೆಗೂ 21 ಕಿ.ಮೀ.ಉದ್ದದ, ಪೂರ್ವ-ಪಶ್ಚಿಮ ಕಾರಿಡಾರ್, ಜ್ಞಾನಭಾರತಿಯಿಂದ ವೈಟ್‌ಫೀಲ್ಡ್‌ವರೆಗೆ 27 ಕಿ.ಮೀ.ಉದ್ದದ ಪೂರ್ವ-ಪಶ್ಚಿಮ ಕಾರಿಡಾರ್ ನಿರ್ಮಾಣ ಕುರಿತು ಮುಖ್ಯಮಂತ್ರಿ ಇಂದಿನ ಸಭೆಯಲ್ಲಿ ಚರ್ಚೆ ನಡೆಸಿದರು. ಈ ಮೂರೂ ಯೋಜನೆಗಳಿಗೆ ಬಂಡವಾಳ ಹೂಡಿಕೆ ಮಾಡಲು ಚೀನಾ ಕಂಪೆನಿಯು ಆಸಕ್ತಿ ತೋರಿಸಿದೆ. ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ ಆಧಾರದ ಮೇಲೆ ಯೋಜನೆಯನ್ನು ಕೈಗೆತ್ತಿಕೊಳ್ಳಲು ಚೀನಾ ಕಂಪೆನಿ ಒಲವು ತೋರಿಸಲು ರಾಜ್ಯ ಸರ್ಕಾರವು ಯೋಜನೆಗಳನ್ನು ಗುತ್ತಿಗೆ ನೀಡುವ ಕುರಿತು ಪರಿಶೀಲನೆ ನಡೆಸುತ್ತಿದೆ.

ಈ ಮೇಲು ಸೇತುವೆ ರಸ್ತೆಗಳು ನಿರ್ಮಾಣವಾದರೆ ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್ ಜಂಕ್ಷನ್‌ಗೆ 20 ನಿಮಿಷದಲ್ಲಿ ಕೆಆರ್‌ಪುರಂನಿಂದ ಗೊರಗುಂಟೆ ಪಾಳ್ಯಕ್ಕೆ 21 ನಿಮಿಷದಲ್ಲಿ, ಜ್ಞಾನಭಾರತಿಯಿಂದ ವೈಟ್‌ಫೀಲ್ಡ್‌ಗೆ 40 ನಿಮಿಷಗಳಲ್ಲಿ ಪ್ರಯಾಣಿಸಬಹುದಾಗಿದೆ. ಇದರ ಜೊತೆಗೆ ಬಿಬಿಎಂಪಿ ವೃತ್ತದಿಂದ ಹೊಸಕೋಟೆಯವರೆಗೆ ಮತ್ತೊಂದು ಕಾರಿಡಾರ್ ನಿರ್ಮಾಣದ ಕುರಿತು ಚರ್ಚೆಗಳು ನಡೆದಿವೆ. ಈಗಾಗಲೇ ಚೀನಾದಲ್ಲಿ ಪ್ರಮುಖ ಹೆದ್ದಾರಿಗಳು, ಹೈಸ್ಪೀಡ್ ರೈಲುಗಳು, ಮೇಲುಸೇತುವೆಗಳನ್ನುನಿರ್ಮಿಸಿ ಖ್ಯಾತಿ ಗಳಿಸಿರುವ ಎಸ್‌ಡಿಎಚ್‌ಎಸ್ ಸಂಸ್ಥೆ ಕರ್ನಾಟಕದ ಮೂಲ ಸೌಕರ್ಯ ಯೋಜನೆಗಳಿಗೂ ಬಂಡವಾಳ ಹೂಡಿಕೆ ಮಾಡಲು ಮುಂದಾಗಿದೆ. ನವೆಂಬರ್‌ನಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಈಕಂಪೆನಿಯು ಭಾಗವಹಿಸಿ ಒಪ್ಪಂದಕ್ಕೆ ಸಹಿ ಹಾಕಲಿದೆ. ಅದಕ್ಕೆ ಪೂರ್ವಭಾವಿಯಾಗಿ ಇಂದು ಪ್ರಾಥಮಿಕ ಚರ್ಚೆ ನಡೆಸಿದರು ಎಂದು ಸಚಿವ ರೋಷನ್‌ಬೇಗ್ ಸುದ್ದಿಗಾರರಿಗೆ ತಿಳಿಸಿದರು.

Write A Comment