ಕರ್ನಾಟಕ

ಅಕ್ರಮ ಲಾಟರಿ ಹಗರಣ; ಕುಮಾರಸ್ವಾಮಿ ಆರೋಪಿಸಿರುವ ಡೀಲ್ ಕುದುರಿಸಲು ಮಧ್ಯಸ್ಥಿಕೆ ವಹಿಸಿದ್ದ ಎಂಎಲ್‌ಸಿ ಯಾರು ? ಎಲ್ಲರ ಚಿತ್ತ ಕುಮಾರಣ್ಣನತ್ತ…!

Pinterest LinkedIn Tumblr

LOTTERY30

ಬೆಂಗಳೂರು, ಮೇ 30: ಅಕ್ರಮ ಒಂದಂಕಿ ಲಾಟರಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರೂ ಸಹ ಜನರಲ್ಲಿ ಕುತೂಹಲ ಮಾತ್ರ ಹೆಚ್ಚಾಗುತ್ತಲೇ ಇದೆ. ಲಾಟರಿ ಡೀಲ್ ಕುದುರಿಸಲು ಮಧ್ಯಸ್ಥಿಕೆ ವಹಿಸಿದ್ದ ವಿಧಾನಪರಿಷತ್ ಸದಸ್ಯರ್ಯಾಹರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ತೀವ್ರಗೊಂಡಿದೆ.

ಜತೆಗೆ ಜನರು ಕೂಡ ಎಂಎಲ್‌ಸಿ ಯಾರು ಎಂಬ ಬಗ್ಗೆ ಒಬ್ಬರನ್ನೊಬ್ಬರು ಪ್ರಶ್ನಿಸುವಂತಾಗಿದೆ. ಕೇವಲ ರಾಜಕೀಯ ವಲಯ ಮಾತ್ರವಲ್ಲ, ಸಾರ್ವಜನಿಕವಾಗಿಯೂ ಕುತೂಹಲ ದುಪ್ಪಟ್ಟು ಹೆಚ್ಚಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಒಂದಂಕಿ ಲಾಟರಿ ಡೀಲ್ ಕುದುರಿಸಲು ನೂರು ಕೋಟಿ ರೂ. ಬೇಡಿಕೆಯನ್ನು ಇಡಲಾಗಿತ್ತು. ಇತ್ತೀಚೆಗೆ ವಿಧಾನಪರಿಷತ್ತಿಗೆ ಆಯ್ಕೆಯಾದ ಸದಸ್ಯರೊಬ್ಬರು ಒಂದಂಕಿ ಲಾಟರಿಯ ಏಜೆಂಟ್ ಪಾರಿರಾಜನ್ ಜತೆ ರಾಜ್ಯದ ಉನ್ನತಾಧಿಕಾರದಲ್ಲಿರುವ ವ್ಯಕ್ತಿಯೊಬ್ಬರ ಪುತ್ರನ ಬಳಿಗೆ ತೆರಳಿದ್ದರು ಎಂದು ಆರೋಪಿಸಿದ್ದರು.

ನೂರು ಕೋಟಿ ರೂ. ಬೇಡಿಕೆಯನ್ನು ಈಡೇರಿಸದೆ 10ಕೋಟಿ ರೂ.ಮಾತ್ರ ಕೊಡುವುದಾಗಿ ಒಂದಂಕಿ ಲಾಟರಿಯ ಕಿಂಗ್‌ಪಿನ್ ಮಾರ್ಟಿನ್ ಹೇಳಿದ್ದರಿಂದ ಈ ಡೀಲ್ ಕುದುರಲಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು. ಆಡಳಿತ ಪಕ್ಷವಾದ ಕಾಂಗ್ರೆಸ್, ಪ್ರತಿಪಕ್ಷವಾದ ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳಲ್ಲೂ ಒಂದಂಕಿ ಡೀಲ್ ಕುದುರಿಸಲು ತೆರಳಿದ್ದ ವಿಧಾನಪರಿಷತ್ ಸದಸ್ಯರು ಯಾರು ಎಂಬ ಕುತೂಹಲ ಮೂಡಿದೆ. ಕುಮಾರಸ್ವಾಮಿ ಅವರು ಎಸ್‌ಪಿಜಿ ಗ್ರೂಪ್‌ನಲ್ಲಿರುವ ಎಂಎಲ್‌ಸಿ ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕುಮಾರಸ್ವಾಮಿ ಅವರು ಆರೋಪಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಲಾಟರಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿದ್ದಾರೆ.

ಆದರೂ ಕೂಡ ವಿಧಾನಪರಿಷತ್ ಸದಸ್ಯರು ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿಲ್ಲ. ಆರೋಪ ಮಾಡಿದ ಕುಮಾರಸ್ವಾಮಿ ಅವರು ಹೆಸರನ್ನು ಬಹಿರಂಗ ಪಡಿಸಬೇಕೆಂಬ ಒತ್ತಾಯ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರಿಂದಲೂ ಕೇಳಿ ಬರುತ್ತಿದೆ. ಮುಖ್ಯಮಂತ್ರಿ ಆಪ್ತವಲಯದಲ್ಲಿರುವ ವಿಧಾನಪರಿಷತ್ ಸದಸ್ಯರು ಕೂಡ ಹೆಸರು ಬಹಿರಂಗಪಡಿಸಲು ಒತ್ತಾಯ ಮಾಡುತ್ತಿದ್ದಾರೆ. ಇಲ್ಲದಿದ್ದರೆ ಎಲ್ಲರನ್ನೂ ಸಂಶಯದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ವಿಧಾನಪರಿಸತ್ ಸದಸ್ಯ ವಿ.ಎಸ್.ಉಗ್ರಪ್ಪ ಸೇರಿದಂತೆ ಹಲವು ಮುಖಂಡರು ಲಾಟರಿ ಡೀಲ್‌ನಲ್ಲಿ ಮಧ್ಯಸ್ಥಿಕೆ ವಹಿಸಿದ್ದ ವಿಧಾನಪರಿಷತ್ ಸದಸ್ಯರ ಹೆಸರನ್ನು ಬಹಿರಂಗ ಪಡಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ಸಿಬಿಐ ತನಿಖೆಗೆ ವಹಿಸಿರುವುದರಿಂದ ಆತುರ ಪಡುವುದು ಬೇಡ. ಲಾಟರಿ ಡೀಲ್‌ನಲ್ಲಿ ಕೈ ಹಾಕಿದ ವಿಧಾನಪರಿಷತ್ ಸದಸ್ಯರ ಹೆಸರು ಕೂಡ ತನಿಖೆಯಿಂದ ಬಹಿರಂಗಗೊಳ್ಳಲಿದೆ ಎಂದು ಹೇಳಿದ್ದಾರೆ.

ಜನರು ಮಾತ್ರ ಆ ವಿಧಾನಪರಿಷತ್ ಸದಸ್ಯರ ಹೆಸರು ಬಹಿರಂಗಗೊಳ್ಳುವುದನ್ನೇ ಎದುರು ನೋಡುತ್ತಿದ್ದಾರೆ. ಜತೆಗೆ ಉನ್ನತ ಅಧಿಕಾರ ಸ್ಥಾನದಲ್ಲಿರುವ ವ್ಯಕ್ತಿ ಯಾರು? ಮತ್ತು ಅವರ ಪುತ್ರ ಯಾರು ಎಂಬುದನ್ನು ಬಹಿರಂಗ ಪಡಿಸಿದರೆ ಜನರಿಗೂ ಗೊತ್ತಾಗಲಿದೆ. ಪರೋಕ್ಷವಾಗಿ ಆರೋಪ ಮಾಡುವ ಬದಲು ನೇರವಾಗಿ ಕುಮಾರಸ್ವಾಮಿ ಅವರು ಆರೋಪ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

Write A Comment