ರಾಷ್ಟ್ರೀಯ

ನರ್ಸ್ ಅರುಣಾ ಶಾನ್‌ಭಾಗ್ ಅತ್ಯಾಚಾರಿ ಸೋಹನ್‌ಲಾಲ್ ಕೊನೆಗೂ ಸಾರ್ವಜನಿಕವಾಗಿ ಪ್ರತ್ಯಕ್ಷ

Pinterest LinkedIn Tumblr

aruna-rape1111

ಮುಂಬೈ, ಮೇ 30: ಇಲ್ಲಿನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಅರುಣಾ ಶಾನ್‌ಭಾಗ್ ಮೇಲಿನ ಅತ್ಯಾಚಾರ, ಹಲ್ಲೆ ಆರೋಪಿಯಾಗಿದ್ದ ಪಾತಕಿ ಸೋಹನ್‌ಲಾಲ್ ವಾಲ್ಮೀಕಿ ಕೊನೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾನೆ. ಉತ್ತರ ಪ್ರದೇಶದ ಘಾಜಿಯಾಬಾದ್‌ನ ಪಾರ್ಪಾ ಎಂಬ ಹಳ್ಳಿಯಲ್ಲಿ ಈ ವಾಲ್ಮೀಕಿ ಕಾರ್ಮಿಕನಾಗಿ ಕೂಲಿ ಕೆಲಸ ಮಾಡಿಕೊಂಡಿದ್ದಾನೆ ಎಂದು ಮರಾಠಿ ಪತ್ರಿಕೆಯೊಂದು, ಅವನನ್ನು ಸಂದರ್ಶಿಸಿ ಫೋಟೋ ಸಹಿತ ವರದಿ ಮಾಡಿದೆ.

ಆ ವರದಿಯ ಪ್ರಕಾರ ವಾಲ್ಮೀಕಿ ನರ್ಸ್ ಅರುಣಾ ಶಾನಭಾಗ್ ಮೇಲೆ ಅತ್ಯಾಚಾರ ನಡೆಸಿಲ್ಲವಂತೆ. ಅವನು 7 ವರ್ಷಗಳ ಸೆರೆವಾಸ ಅನುಭವಿಸಿ ಬಂದಿದ್ದಾನೆ. ಅವನ ಮೇಲೆ ಕಳವು ಆರೋಪವೂ ಇತ್ತಂತೆ. ಜೈಲಿನಿಂದ ಬಿಡುಗಡೆಯಾಗಿ ಬಂದವನೇ ಕಣ್ಮರೆಯಾಗಿದ್ದ ಸೋಹನ್‌ಲಾಲ್ ವಾಲ್ಮೀಕಿ ಈಗ ಘಾಜಿಯಾಬಾದ್‌ನ ಕುಗ್ರಾಮದಲ್ಲಿ ಪತ್ತೆಯಾಗಿದ್ದಾನೆ.

ತಾನು ಮಾಡಿದ ಕೃತ್ಯಕ್ಕೆ ಅವನಿಗೆ ಪಶ್ಚಾತ್ತಾಪವಾಗಿದೆಯಂತೆ. ಆ ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆಯಂತೆ. ಒಟ್ಟಾರೆ ಸೋಹನ್‌ಲಾಲ್ ಈಗ ಮುದುಕನಾಗಿದ್ದಾನೆ. 1973ರ ನವೆಂಬರ್ 27 ರಂದು ರಾತ್ರಿ ವಾಲ್ಮೀಕಿ ನರ್ಸ್ ಅರುಣಾ ಶಾನ್‌ಭಾಗ್ ಮೇಲೆ ಅತ್ಯಾಚಾರ ನಡೆಸಿ, ಹಲ್ಲೆಯನ್ನು ಮಾಡಿದ್ದ. ಅಂದು ಘಟನೆಯ ನಂತರ ಕೋಮಾಕ್ಕೆ ಜಾರಿದ್ದ 26 ವರ್ಷದ ನರ್ಸ್ ಮತ್ತೆ ಎಚ್ಚರಗೊಳ್ಳಲೇ ಇಲ್ಲ. ಅದೇ ಆಸ್ಪತ್ರೆಯಲ್ಲಿ ವಾರ್ಡ್‌ಬಾಯ್ ಆಗಿದ್ದ ವಾಲ್ಮೀಕಿ ಈ ದುಷ್ಕೃತ್ಯವೆಸಗಿದ್ದ. ಅರುಣಾ ಬರೋಬ್ಬರಿ 42 ವರ್ಷಗಳ ಕಾಲ ತಾನು ಕೆಲಸ ಮಾಡುತ್ತಿದ್ದ ಕೆಇಎಂ ಆಸ್ಪತ್ರೆಯ ಬೆಡ್‌ನಲ್ಲೇ ಜೀವಚ್ಛವದಂತೆ ಬದುಕಿ 2015ರ ಮೇ 18 ರಂದು ಕೊನೆಯುಸಿರೆಳೆದು ನರಕದಿಂದ ಬಿಡುಗಡೆ ಹೊಂದಿದ್ದಳು.

Write A Comment