ಕರ್ನಾಟಕ

ಬೆಂಗಳೂರು ವಿದ್ಯಾರಣ್ಯಪುರದಲ್ಲಿ ಚರ್ಚಿಗೆ ಬೆಂಕಿ ಹಚ್ಚಿ ಪರಾರಿಯಾದ ಕಿಡಿಗೇಡಿಗಳು

Pinterest LinkedIn Tumblr

attck

ಬೆಂಗಳೂರು, ಮೇ 30: ವಿದ್ಯಾರಣ್ಯಪುರದ ನರಸೀಪುರ ಬಡಾವಣೆಯಲ್ಲಿನ ಚರ್ಚ್‌ಗೆ ಕಿಡಿಗೇಡಿಗಳು ನಿನ್ನೆ ಮಧ್ಯರಾತ್ರಿ ಬೆಂಕಿ ಹಚ್ಚಿದ್ದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.

ನರಸೀಪುರ ಬಡಾವಣೆಯ ಕೃಷ್ಣಪ್ಪ ಅವರ ಎರಡನೇ ಮಹಡಿಯ ಬಾಡಿಗೆ ಕಟ್ಟಡದಲ್ಲಿದ್ದ ಚರ್ಚ್‌ಗೆ ರಾತ್ರಿ 2ರ ಸುಮಾರಿನಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಬೆಂಕಿಯು ಇಡೀ ಚರ್ಚ್ ಆವರಿಸಿ ಕಟ್ಟಡದ ಕಿಟಕಿ -ಬಾಗಿಲುಗಳು, ಪೀಠೋಪಕರಣಗಳು ಪವಿತ್ರ ಬೈಬಲ್ ಇನ್ನಿತರ ದಾಖಲೆ ಪತ್ರಗಳು ಸುಟ್ಟು ಹೋಗಿವೆ, ಕಟ್ಟಡದಿಂದ ದಟ್ಟ ಹೊಗೆ ಹೊರಬರುತ್ತಿರುವುದನ್ನು ನೋಡಿದ ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಬೆಂಕಿ ನಂದಿಸಿದ್ದಾರೆ,

ನರಸೀಪುರ ಬಡಾವಣೆಯ ಸುತ್ತಮುತ್ತಲಿನ ವಾಸಿಗಳು ಚರ್ಚ್‌ ನಿರ್ಮಿಸಲು ಜಾಗ ದೊರೆಯದಿದ್ದರಿಂದ ಕೃಷ್ಣಪ್ಪ ಅವರ ಮನೆಯನ್ನು ಬಾಡಿಗೆಗೆ ಪಡೆದು ಚರ್ಚ್ ಮಾಡಿಕೊಂಡು ಪ್ರತಿದಿನ ಪ್ರಾರ್ಥನೆ ನಡೆಸುತ್ತಿದ್ದರು.

ಕಿಡಿಗೇಡಿಗಳು ಬೆಂಕಿ ಹಚ್ಚಿದ ವೇಳೆ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚರ್ಚ್‌ಗೆ ಬೆಂಕಿ ಹಚ್ಚಿರುವ ಸುದ್ದಿ ತಿಳಿದು ನೂರಾರು ಮಂದಿ ಜಮಾಯಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ದುರ್ಘಟನೆ ನಡೆದ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್, ಡಿಸಿಪಿ ಸುರೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Write A Comment