ಕರ್ನಾಟಕ

ಸಿಲಿಕಾನ್ ಸಿಟಿಯಲ್ಲಿ ಭಾರಿ ಮಳೆಗೆ ಓರ್ವ ಬಲಿ; ಆಡುಗೋಡಿ ಬಸ್ ನಿಲ್ದಾಣದ ಮೇಲೆ ಮರ ಬಿದ್ದು ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

Pinterest LinkedIn Tumblr

Rain_in_Bangalore

ಬೆಂಗಳೂರು: ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಬೆಂಗಳೂರಿನಲ್ಲಿ ಇಂದು ಸಂಜೆ ಸುಮಾರು 5.30ರ ಹೊತ್ತಿಗೆ ಭಾರಿ ಗಾಳಿಯೊಂದಿಗೆ ಆಗಮಿಸಿದ ಮಳೆಯಿಂದಾಗಿ ಆಡುಗೋಡಿ ಬಳಿ ಬೃಹತ್ ಮರವೊಂದು ಧರೆಗುರುಳಿದೆ. ಪರಿಣಾಮ ಮರದ ಕೆಳಗಿದ್ದ ಬಸ್ ಶೆಲ್ಟರ್ ನಲ್ಲಿದ್ದ ನಾಲ್ವರ ಮೇಲೆ ಮರ ಉರುಳಿ ಬಿದ್ದಿದ್ದು, ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬಿಬಿಎಂಪಿ ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಮರದಲ್ಲಿ ಸಿಲುಕಿದ್ದವರ ರಕ್ಷಣೆಗೆ ಮುಂದಾಗಿದ್ದಾರೆ.

ಮರದಡಿಯಲ್ಲಿ ಸಿಲುಕಿದ್ದ ಓರ್ವ ಮಹಿಳೆಯನ್ನು ಸಿಬ್ಬಂದಿಗಳು ರಕ್ಷಿಸಿದ್ದು, ಸ್ಥಳದಲ್ಲಿಯೇ ಇದ್ದ 108 ಆ್ಯಂಬುಲೆನ್ಸ್ ನಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗಿದೆ. ಇನ್ನುಳಿದ ಇಬ್ಬರನ್ನು ರಕ್ಷಿಸಲಾಗಿದ್ದು, ಸಮೀಪದ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ಆಡುಗೋಡಿ ಸೇರಿದಂತೆ ನಗರದ ವಿವಿಧೆಡೆ ಧಾರಾಕಾರ ಮಳೆ ಸುರಿದಿದ್ದು, ಆಡುಗೋಡಿ ಬಳಿ ಮರ ಬಿದ್ದು ಎರಡು ಕಾರು ಮತ್ತು ದ್ವಿಚಕ್ರ ವಾಹನ ಜಖಂ ಗೊಂಡಿದೆ. ಬಸವನಗುಡಿ, ಜಯನಗರ, ಚಾಮರಾಜಪೇಟೆ, ಮೆಜೆಸ್ಟಿಕ್, ಗಾಂಧಿನಗರ, ಎಂ.ಜಿರಸ್ತೆ, ಕೆಆರ್ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಶಿವಾಜಿನಗರ, ಮಾರತ್ ಹಳ್ಳಿ, ವಿಜಯನಗರ ಸೇರಿದಂತೆ ಹಲವೆಡೆ ಮರಗಳು ಧರೆಗುರುಳಿವೆ. ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಬೆಂಗಳೂರು ಪ್ರೆಸ್ ಕ್ಲಬ್ ಬಳಿ ಮರಗಳೆರಡು ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕಾರು ಜಖಂಗೊಂಡಿದೆ. ಹವಾಮಾನ ಇಲಾಖೆ ಮೂರು ದಿನಗಳ ಕಾಲ ಮಳೆ ಬೀಳಲಿದೆ ಎಂದು ಈ ಹಿಂದೆ ತಿಳಿಸಿತ್ತು.

ಸರ್ಕಾರದಿಂದ ಪರಿಹಾರ ಘೋಷಣೆ

ಇನ್ನು ಇದೇ ವೇಳೆ ಮಳೆಗೆ ಮರ ಬಿದ್ದು ಪ್ರಾಣ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರದ ವತಿಯಿಂದ 1 ಲಕ್ಷ ರು. ಪರಿಹಾರ ನೀಡುವುದಾಗಿ ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

Write A Comment