ಕರ್ನಾಟಕ

ಮಾವಿನ ಹಣ್ಣಿನ ಫ್ಲ್ಯಾಶ್ ಬ್ಯಾಕ್ ಹೇಳಿದ ಸಿಎಂ ಸಿದ್ದರಾಮಯ್ಯ

Pinterest LinkedIn Tumblr

si

ಬೆಂಗಳೂರು, ಮೇ 29- ಹೊಟ್ಟೆ ಹಸಿದಾಗ ಹಲಸಿನ ಹಣ್ಣನ್ನು ತಿನ್ನಬೇಕು. ಊಟ ಮಾಡಿದ ನಂತರ ಮಾವಿನ ಹಣ್ಣನ್ನು ತಿನ್ನಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸಲಹೆ ನೀಡಿದ್ದಾರೆ. ನಾನು ಚಿಕ್ಕಂದಿನಲ್ಲಿ ರಸಪುರಿ, ನೀಲಂ ಮಾವಿನ ಹಣ್ಣನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದೆ. ಆದರೆ ಈಗ ಬಾದಾಮಿ ಮಾವಿನ ಹಣ್ಣಿಗೆ ಬೇಡಿಗೆ ಹೆಚ್ಚಾಗಿದೆ.

ನಾನು ಮಧುಮೇಹಿ ಆದರೂ ಹಲಸಿನ ಹಣ್ಣು ತಿನ್ನುವುದನ್ನು ಬಿಟ್ಟಿಲ್ಲ ಎಂದು ತಮ್ಮ ಅನುಭವವನ್ನು ಇಂದು ಮಾವು-ಹಲಸು ಮೇಳವನ್ನು ಹಣ್ಣಿನ ರುಚಿ ಸವಿಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಋತುವಿಗೆ ತಕ್ಕಂತೆ ಹಣ್ಣುಗಳನ್ನು ಸವಿಯುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಪ್ರಸ್ತುತ ಕೆಲವು ಭಾಗಗಳಲ್ಲಿ ಅಕಾಲಿಕ ಮಳೆ-ಗಾಳಿಯಿಂದ ಮಾವು ಬೆಳೆಗೆ ಹಾನಿಯಾಗಿದೆ. ಇದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ವರದಿ ಬಂದ ನಂತರ ಪರಿಹಾರ ಕುರಿತಂತೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ನೀತಿ ಸಂಹಿತೆ ಜಾರಿ ಇರುವುದರಿಂದ ಯಾವುದೇ ರೀತಿಯ ಪ್ರಕಟಣೆ ಘೋಷಣೆ ಸಾಧ್ಯವಿಲ್ಲ ಎಂದು ಹೇಳಿದರು. ಇದೇ ವೇಳೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಟೀಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು. ತೋಟಗಾರಿಕಾ ಸಚಿವ ಶ್ಯಾಮನೂರು ಶಿವಶಂಕರಪ್ಪ ಮಾತನಾಡಿ, ಪ್ರಸ್ತುತ 3 ರಿಂದ 4 ಟನ್ ಮಾವು ಉತ್ಪಾದನೆಯಾಗುವ ನಿರೀಕ್ಷೆ ಇದೆ. ವಿವಿಧ ರಾಸಾಯನಿಕ ಬಳಸಿ ಮಾವನ್ನು ಹಣ್ಣು ಮಾಡುವ ಪ್ರಕ್ರಿಯೆ ಸರಿಯಲ್ಲ . ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕಳೆದ 2011ರಲ್ಲಿ 976 ಟನ್, 2012ರಲ್ಲಿ 440 ಟನ್, 2013ರಲ್ಲಿ 990 ಟನ್, 2014ರಲ್ಲಿ 716 ಟನ್ ಮಾವನ್ನು ಮಾರಾಟ ಮಾಡಲಾಗಿದೆ. ಕಳೆದ ಸಾಲಿನಲ್ಲಿ 3 ಕೋಟಿ 60ಲಕ್ಷ ವಹಿವಾಟು ನಡೆದಿದೆ ಎಂದರು. ಇಲ್ಲಿ 100ಕ್ಕೂ ಹೆಚ್ಚು ಮಳಿಗೆಗಳಿವೆ. ಇದರಲ್ಲಿ 80 ಮಾವು ಹಾಗೂ 20 ಹಲಸು ಪ್ರದರ್ಶನ ಮಳಿಗೆಗಳಿವೆ. ಒಂದೇ ಸೂರಿನಡಿ ವಿವಿಧ ತಳಿಯ ಹಣ್ಣುಗಳು ಸಿಗುತ್ತಿದ್ದು, ಜನರು ಇದರ ಉಪಯೋಗ ಪಡೆಯಬೇಕು ಎಂದರು.

ಜೈಲಿಗೆ ಅಟ್ಟುತ್ತೇವೆ:  ಕಾರ್ಬೋ ಸಲ್ಫೇಡ್ ಬಳಸಿ ಮಾವಿನ ಹಣ್ಣನ್ನು ಮಾಗಿಸಿ ಮಾರಾಟ ಮಾಡುವಂತಹ ದೊಡ್ಡ ವ್ಯಾಪಾರಿಗಳನ್ನು ಜೈಲಿಗೆ ಹಾಕಲಾಗುವುದು ಎಂದು ತೋಟಗಾರಿಕಾ ಸಚಿವ ಶ್ಯಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ. ಪ್ರಸ್ತುತ ಇದರ ಬಗ್ಗೆ ಇಲಾಖೆಯ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ.  ಜನರ ಆರೋಗ್ಯದಲ್ಲಿ ಚೆಲ್ಲಾಟವಾಡುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

Write A Comment