ಕರ್ನಾಟಕ

ಗ್ರಾಪಂ ಅಭ್ಯರ್ಥಿ ಕೊಲೆ : ಐದು ಮನೆಗಳಿಗೆ ಬೆಂಕಿ : ಕಲ್ಲು ತೂರಾಟ

Pinterest LinkedIn Tumblr

Kolar-Murder

ಮುಳಬಾಗಿಲು,ಮೇ 29-ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಐದು ಮನೆಗಳಿಗೆ ಬೆಂಕಿ ಹಚ್ಚಿ , ವಾಹನಗಳಿಗೆ ಕಲ್ಲು ತೂರಿರುವ ಘಟನೆ ಮುಳಬಾಗಿಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮುಳಬಾಗಿಲು ಪಟ್ಟಣದ ಬಲ್ಲ ಗ್ರಾಮ ಪಂಚಾಯ್ತಿ ಅಭ್ಯರ್ಥಿ ಸುಬ್ರಹ್ಮಣಿ(32) ಕೊಲೆಯಾದ ದುರ್ದೈವಿ.  ಕಳೆದ ಬಾರಿ ಗ್ರಾಮ ಪಂಚಾಯ್ತಿ ಸದಸ್ಯನಾಗಿ ಉಪಾಧ್ಯಕ್ಷರಾಗಿದ್ದ ಸುಬ್ರಮಣಿ ಈ ಬಾರಿ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದರು. ರಾತ್ರಿ  8ರ ಸಮಯದಲ್ಲಿ ಮುಳಬಾಗಿಲು-ಕೆಜಿಎಫ್ ರಸ್ತೆಯ ಹೊರವಲಯದ ಪೆಟ್ರೋಲ್ ಬಂಕ್ ಬಳಿ ಸುಬ್ರಮಣಿ ಹೋಗುತ್ತಿದ್ದಾಗ ಟಾಟಾಸುಮೋದಲ್ಲಿ ಬಂದ ಐದಾರು ಮಂದಿಯ ಗುಂಪು ಏಕಾಏಕಿ ಲಾಂಗು, ಮಚ್ಚುಗಳಿಂದ ಮನಬಂದಂತೆ ಹಲ್ಲೆ ನಡೆಸಿ ಆತ ಕುಸಿದು ಬೀಳುತ್ತಿದ್ದಂತೆ ಸೈಜುಗಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಈ ಸುದ್ದಿ ಹರಡುತ್ತಿದ್ದಂತೆ ಬಲ್ಲಗ್ರಾಮದಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿ ಗ್ರಾಮದ ಸೀನಪ್ಪ , ಶ್ರೀನಿವಾಸ, ಕೃಷ್ಣಪ್ಪ, ನಂಜುಂಡಪ್ಪ , ಮೋಹನ್ ಎಂಬುವರ ಮನೆಗೆ ಬೆಂಕಿ ಹಚ್ಚಿರುವುದಲ್ಲದೆ ಎದುರಾಳಿ ಅಭ್ಯರ್ಥಿ ಮನೆಗೂ ಹಾನಿ ಮಾಡಿದ್ದಾರೆ.
ಅಲ್ಲದೆ ಮನೆಗಳ ಮುಂದೆ ನಿಲ್ಲಿಸಲಾಗಿದ್ದ ಟ್ರಾಕ್ಟರ್, ಆಟೋ, ಬೈಕ್‌ಗಳಿಗೂ ಹಾನಿ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸುದ್ದಿ ತಿಳಿಯುತ್ತಿದ್ದಂತೆ ರಾತ್ರಿ 9 ಗಂಟೆಗೆ ಕೇಂದ್ರ ವಲಯದ ಐಜಿ ಅರುಣ್ ಚಕ್ರವರ್ತಿ, ಡಿವೈಎಸ್ಪಿ ಅಬ್ದುಲ್ ರೆಹಮಾನ್, ಸಬ್‌ಇನ್‌ಸ್ಪೆಕ್ಟರ್ ಶಂಕರಪ್ಪ  ಸ್ಥಳಕ್ಕೆ  ತೆರಳಿ ಪರಿಶೀಲಿಸಿದ್ದಾರೆ.  ಇದೀಗ ಬಲ್ಲಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತಿದೆ. ಗ್ರಾಮಸ್ಥರು ಯಾವಾಗ ಏನಾಗುವುದೋ ಎಂಬ ಭಯದಲ್ಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್  ಮಾಡಲಾಗಿದೆ. ಬಲ್ಲಗ್ರಾಮಸ್ಥರು ಇಷ್ಟಕ್ಕೆ ಸುಮ್ಮನಾಗದೆ ಬೆಳಗ್ಗೆಯೂ ತಮ್ಮ ಆಕ್ರೋಶ ವ್ಯಕ್ತಪಡಿಸಿ ಸಾರಿಗೆ ಬಸ್ಸುಗಳಿಗೆ ಕಲ್ಲು ತೂರಿದ್ದಾರೆ.

ಮುಂಜಾನೆ ಎಸ್ಪಿ ಅಜಯ್ ಹಿಲೋರಿ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರಿಂದ ಮಾಹಿತಿ ಪಡೆದುಕೊಂಡಿದ್ದಾರೆ.  ಕಳೆದ 2011ರ ಜಿಲ್ಲಾಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ಕಾಶೀಪುರ ರಾಮಕೃಷ್ಣಪ್ಪ ಎಂಬಾತನ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಸುಬ್ರಮಣಿಯನ್ನು ಆರೋಪಿಯಾಗಿ, ಪ್ರಕರಣ ಸಾಬೀತಾಗದ ಕಾರಣ ಈತ ಖುಲಾಸೆಯಾಗಿದ್ದ.  ಈ ವೈಷಮ್ಯವೇ ಈತನ ಕೊಲೆಗೆ ಕಾರಣವಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಮುಳಬಾಗಿಲು ಪೊಲೀಸರು ಆರೋಪಿಗಳಿಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

-ಈ ಸಂಜೆ

Write A Comment