ಕರ್ನಾಟಕ

ಅಕ್ರಮ ಲಾಟರಿ ಪ್ರಕರಣ: ಸಿಮ್‌ಕಾರ್ಡ್ ಬದಲಾಯಿಸಿದ್ದ ಪೊಲೀಸ್ ಅಧಿಕಾರಿಗಳು

Pinterest LinkedIn Tumblr

Lottery-Scam

ಬೆಂಗಳೂರು, ಮೇ 28- ಅಕ್ರಮ ಲಾಟರಿ ಪ್ರಕರಣದಲ್ಲಿ ಭಾಗಿಯಾಗಿರುವ ಕೆಲವು ಪೊಲೀಸ್ ಅಧಿಕಾರಿಗಳು ತಮ್ಮ ಸಿಮ್‌ಕಾರ್ಡ್ ಬದಲಾಯಿಸಿರುವುದು  ತನಿಖಾಧಿಕಾರಿಗಳಿಗೆ ತಲೆ ಬಿಸಿ ಮಾಡಿದೆ. ಈ ಪ್ರಕರಣದ ಪ್ರಮುಖ ರೂವಾರಿ ಪಾರಿರಾಜನ್ ಜತೆ ಪೊಲೀಸ್ ಅಧಿಕಾರಿಗಳು ಖಾಸಗಿ ಮೊಬೈಲ್‌ನಲ್ಲಿ ಮಾತುಕತೆ ನಡೆಸಿ ಡೀಲ್ ಕುದುರಿಸಿದ್ದರು.

ಸಿಐಡಿ  ಅಧಿಕಾರಿಗಳು ತನಿಖೆ ನಡೆಸುವ ವೇಳೆ ಪೊಲೀಸ್ ಅಧಿಕಾರಿಗಳು ಇಲಾಖೆ ಕೊಟ್ಟಿದ್ದ ಸಿಮ್ ಬದಲಿಗೆ ಖಾಸಗಿ ಸಿಮ್ ಬಳಸಿಕೊಂಡು ಪಾರಿರಾಜನ್ ಜತೆ ಮಾತುಕತೆ ನಡೆಸಿದ್ದಾರೆ. ಇದೀಗ ಸಿಐಡಿ ತನಿಖಾ ತಂಡ ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಖಾಸಗಿ ಮೊಬೈಲ್‌ಗಳನ್ನು ತಮ್ಮ ವಶಕ್ಕೆ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.

ಸಾಮಾನ್ಯವಾಗಿ ಯಾವುದೇ ಒಬ್ಬ ಸಬ್‌ಇನ್ಸ್‌ಪೆಕ್ಟರ್ ಹಂತದ ಮೇಲಿನ ಪೊಲೀಸರಿಗೆ ಸರ್ಕಾರದ ವತಿಯಿಂದಲೇ ಸಿಮ್‌ಕಾರ್ಡ್ ನೀಡಲಾಗಿರುತ್ತದೆ. ಇಲಾಖೆಯ ಎಲ್ಲ ಮಾತುಕತೆ ವಿವರಗಳು ಇದರಲ್ಲೇ ದಾಖಲಾಗಿರುತ್ತವೆ.  ಸಿಐಡಿ ತಂಡ ಕೆಲ ಅಧಿಕಾರಿಗಳ ದೂರವಾಣಿ ದಾಖಲೆಗಳ ಕರೆ (ಸಿಡಿಆರ್) ಪರಿಶೀಲನೆ ನಡೆಸಿದಾಗ ಪೊಲೀಸರು ಸರ್ಕಾರಿ ಸಿಮ್‌ಕಾರ್ಡ್ ಬದಲಿಗೆ ಖಾಸಗಿ ಮೊಬೈಲ್‌ನಲ್ಲೇ ಪಾರಿರಾಜನ್ ಜತೆ ಮಾತುಕತೆ ನಡೆಸಿರುವುದು ಗೊತ್ತಾಗಿದೆ. ಈಗಾಗಲೇ ಈ ಪ್ರಕರಣದಲ್ಲಿ ಭಾಗಿಯಾಗಿ ಸೇವೆಯಿಂದ ಅಮಾನತುಗೊಂಡಿರುವ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್ ಮೊಬೈಲ್ ಪರಿಶೀಲಿಸಿದಾಗ ಇದು ಗೊತ್ತಾಯಿತು. ಅಲೋಕ್‌ಕುಮಾರ್‌ಗೆ ನೀಡಲಾಗಿದ್ದ ಸಿಮ್‌ಕಾರ್ಡ್‌ನಲ್ಲಿ ಪಾರಿರಾಜನ್ ಜತೆ ಯಾವುದೇ ರೀತಿಯ ಮಾತುಕತೆ ನಡೆಸಿರಲಿಲ್ಲ. ಬದಲಿಗೆ ಖಾಸಗಿ ಸಿಮ್‌ಕಾರ್ಡ್ ಬಳಸಿದ್ದರು. ಕಳೆದ ಶನಿವಾರ ಸಿಐಡಿ ತನಿಖಾ ತಂಡ ಸರ್ಕಾರಕ್ಕೆ ಸಲ್ಲಿಸಿದ್ದ ಮಧ್ಯಂತರ ವರದಿಯಲ್ಲಿ ಅಲೋಕ್‌ಕುಮಾರ್ ಹೆಸರನ್ನು ಪ್ರಸ್ತಾಪಿಸಿದ್ದರು. ಅಲ್ಲದೆ, ಈ ಪ್ರಕರಣದಲ್ಲಿ ಭಾಗಿಯಾಗಿರುವ ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸೇವೆಯಲ್ಲಿರುವ ಕೆಲ ಪೊಲೀಸರ ಮೊಬೈಲ್ ದೂರವಾಣಿ ಕರೆಗಳ ಪರಿಶೀಲನೆ ನಡೆಸಲು ಗೃಹ ಇಲಾಖೆಗೆ ಸೂಚನೆ ನೀಡುವಂತೆ ಕೋರಿದ್ದರು ಎಂದು ತಿಳಿದುಬಂದಿದೆ.

Write A Comment