ಕರ್ನಾಟಕ

ಸರ್ಕಾರಿ ಸಾರಿಗೆ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲು ಕೇಂದ್ರದ ಯತ್ನ : ರೆಡ್ಡಿ ಆರೋಪ

Pinterest LinkedIn Tumblr

Ramalinga-Reddy-with

ಬೆಂಗಳೂರು, ಮೇ 27-ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೇಂದ್ರ ಸರ್ಕಾರ ಸಾರಿಗೆ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಪ್ರಯತ್ನ ನಡೆಸಿದೆ ಎಂದು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಖಾಸಗಿಯವರಿಗೆ ಒಪ್ಪಿಸುವ ಪ್ರಯತ್ನ ನಡೆದಿದೆ. ಇದು ಮುಂದಿನ ದಿನಗಳಲ್ಲಿ ತುಂಬಾ ಅಪಾಯಕಾರಿ.  ಸಾರಿಗೆ ಸಂಸ್ಥೆಗಳು ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು, ಖಾಸಗಿಯವರಿಗೆ ಒಪ್ಪಿಸಿದರೆ ಲಾಭ ಬಂದರೆ ಮಾತ್ರ ಸಾರಿಗೆ ಸಂಸ್ಥೆಗಳು ನಡೆಯುತ್ತವೆ. ಇಲ್ಲದೆ ಹೋದರೆ ನಷ್ಟವಾದರೆ ಮುಚ್ಚಿ ಬಿಡುತ್ತಾರೆ. ಜನಸಾಮಾನ್ಯರು  ತಂದರೆಗೊಳಗಾಗಬೇಕಾಗುತ್ತದೆ ಎಂದು ಹೇಳಿದರು.

ತಿದ್ದುಪಡಿ ಕಾಯ್ದೆಯಲ್ಲಿ ಕೆಲವು ಒಳ್ಳೆಯ ಅಂಶಗಳೂ ಇವೆ. ಆದರೆ ದಂಡದ ಪ್ರಮಾಣ ಹೆಚ್ಚಳ ಸೇರಿದಂತೆ ಇನ್ನೂ ಕೆಲವು ನಕಾರಾತ್ಮಕ ಅಂಶಗಳೂ ಇವೆ ಎಂದು ಹೇಳಿದರು. ಕೇಂದ್ರ ಸರ್ಕಾರ ಕಾಯ್ದೆಯ ಲೋಪದೋಷಗಳನ್ನು ಸರಿಪಡಿಸಿ ಆನಂತರ ಜಾರಿಗೆ ತರಲು ಮುಂದಾಗಬೇಕೆಂದು ಅಭಿಪ್ರಾಯಪಟ್ಟರು. ಬಿಬಿಎಂಪಿಗೆ ಜುಲೈ ತಿಂಗಳ ಕೊನೆಯ ವಾರದಲ್ಲಿ ಚುನಾವಣೆ ನಡೆಯಲಿದ್ದು, ಜೂನ್ ಅಂತ್ಯದೊಳಗೆ ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ಆಯೋಗಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಟ್ಯಾಕ್ಸಿ ಆಲ್‌ವೇಲ್ಸ್ ಸೇವೆಗೆ ಚಾಲನೆ ನೀಡಿದ ಅವರು, ಬೆಂಗಳೂರಿನಲ್ಲಿ ಟ್ಯಾಕ್ಸಿ ಆಲ್‌ವೇಲ್ಸ್ ಸಂಸ್ಥೆಗೆ ಸೇರಿದ 8 ಕಂಪೆನಿಗಳು ಸಾರಿಗೆ ಸೇವೆ ಒದಗಿಸುತ್ತಿವೆ. ಈ ಸಂಸ್ಥೆ  ಗರ್ಭಿಣಿಯರಿಗೆ, ಹಿರಿಯ ನಾಗರಿಕರಿಗೆ ಶೇ.25ರಷ್ಟು ರಿಯಾಯ್ತಿ ನೀಡುತ್ತಿರುವುದು ಸ್ವಾಗತಾರ್ಹ ಎಂದು ಶ್ಲಾಘಿಸಿದರು.

ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ, ಉತ್ತಮ ಸೇವೆ ನೀಡುವ ಮೂಲಕ ನಗರದ ಸಾರಿಗೆ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಲಿ ಎಂದು ಹಾರೈಸಿದರು. ಟ್ಯಾಕ್ಸಿ ಆಲ್‌ವೇಲ್ಸ್ ಸಂಸ್ಥೆಯ ಮುಖ್ಯಸ್ಥರಾದ ಹಮೀದ್ ಅಕ್ಬರ್ ಆಲಿ ಮಾತನಾಡಿ, ಸರ್ಕಾರದ ಸುರಕ್ಷತಾ ನಿಯಮಗಳ ಅನುಸಾರವೇ ನಮ್ಮ ಸಂಸ್ಥೆ ಸೇವೆ ಒದಗಿಸುತ್ತದೆ. ಪ್ರಯಾಣಿಕರ ಸುರಕ್ಷತೆಗಾಗಿ ಹಾರ್ಡ್‌ವೇರ್ ಆಧಾರಿತ ಜಿಪಿಎಸ್ ಸಾಧನಾ, ಫೇರ್ ಮೀಟರ್ ಮತ್ತಿತರರ ಸೌಲಭ್ಯಗಳನ್ನು ಹೊಂದಿದೆ. ದಿನದ 24 ಗಂಟೆಯೂ ಕಾಲ್‌ಸೆಂಟರ್‌ನಲ್ಲಿ ಸಹಾಯ ಪಡೆಯಬಹುದಾಗಿದೆ ಎಂದು ಹೇಳಿದರು. ಆನ್‌ಲೈನ್‌ನಲ್ಲಿ ಗ್ರಾಹಕರು 60706070, ಗರ್ಭಿಣಿಯರು ಹಾಗೂ ಹಿರಿಯ ನಾಗರಿಕರಿಗಾಗಿ 60606060 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. ನಟಿ ನೀತು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

1 Comment

  1. let the private vehicles run in Karnataka state especially in bangalore, At-least public will get some relief from the Congress robbers , junk fellow unable to reduce the fare simply blaming the central govt…………

Write A Comment