ರಾಷ್ಟ್ರೀಯ

ವಿಶೇಷ ಅಧಿಕಾರ ವಾಪಸ್ ಪಡೆದ ಕೇಂದ್ರ : ಲೆಫ್ಟಿನೆಂಟ್ ಜನರಲ್ ಗೆ ಹಿನ್ನಡೆ

Pinterest LinkedIn Tumblr

Delhi-delhi-lieutenant-gove

ನವದೆಹಲಿ, ಮೇ 27- ಲೆಫ್ಟಿನೆಂಟ್ ಜನರಲ್ ಅವರಿಗೆ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಲು ವಿಶೇಷ ಅಧಿಕಾರ ನೀಡಿದ ಕೇಂದ್ರ ಸರ್ಕಾರದ ಬಗ್ಗೆ ದೆಹಲಿ ಉಚ್ಚನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಕೇಂದ್ರ ಗೃಹ ಖಾತೆ ರಾಜ್ಯಪಾಲರಿಗೆ ನೀಡಿರುವ ಕೆಲವು ಅಧಿಕಾರ (ಪವರ್)ಗಳನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದೆ.

ಇದರಿಂದಾಗಿ ಕೇಂದ್ರ ಸರ್ಕಾರ ಬೆಂಬಲಿತ  ಲೆಫ್ಟಿನೆಂಟ್ ಜನರಲ್ ಅವರಿಗೆ ಹಿನ್ನಡೆಯಾದಂತಾಗಿದೆ. ನಾವು ದೆಹಲಿಯ ಚುನಾಯಿತ ಸರ್ಕಾರದ ವಿಷಯಗಳಲ್ಲಿ ಮೂಗು ತೂರಿಸುವುದಿಲ್ಲ. ಪ್ರತಿಯೊಬ್ಬರೂ ಸಾಂವಿಧಾನಿಕ ಚೌಕಟ್ಟಿನಲ್ಲೇ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಕೇಂದ್ರ ಗೃಹ ಖಾತೆ ಸಚಿವ ರಾಜ್‌ನಾಥ್ ಸಿಂಗ್ ಕೊಲ್ಕತಾದಲ್ಲಿ ಹೇಳಿದ್ದಾರೆ.

ನಿನ್ನೆಯಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಿಧಾನಸಭೆ ಅಧಿವೇಶನ ಕರೆದು ಲೆಫ್ಟಿನೆಂಟ್ ಜನರಲ್ ಅವರಿಗೆ ವಿಶೇಷ ಅಧಿಕಾರ ನೀಡಿದ್ದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸುವ ನಿರ್ಣಯ ತೆಗೆದುಕೊಂಡಿದ್ದರು. ಸರ್ಕಾರದ ಅರ್ಜಿಯನ್ನು ಪರಿಶೀಲಿಸಿದ  ನ್ಯಾಯಾಲಯವು, ದೆಹಲಿ ಸರ್ಕಾರ ಜನತೆಯಿಂದ ಚುನಾಯಿತಗೊಂಡಿದ್ದು, ಜನರ ಪ್ರಜಾಸತ್ತಾತ್ಮಕ ಆಯ್ಕೆಯ ಪ್ರತಿನಿಧಿಗಳಿಗೆ ಅಧಿಕಾರವಿರುತ್ತದೆ. ಅದನ್ನು ಗೌರವಿಸಬೇಕು ಎಂದು ಹೇಳಿದೆ. ಅವರವರ ಕೆಲಸಗಳನ್ನು ಕಾನೂನು ಇತಿಮಿತಿಯಲ್ಲಿ ಸಾಂವಿಧಾನಿಕ ಚೌಕಟ್ಟಿನಲ್ಲಿ ನಿರ್ವಹಿಸಬೇಕು. ದೆಹಲಿ ಸರ್ಕಾರ ಜನರಿಂದ ಆಯ್ಕೆಯಾಗಿದೆ. ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ದೆಹಲಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅಷ್ಟೇ ಅಲ್ಲ ದೆಹಲಿ ಚುನಾಯಿತ ಸರ್ಕಾರಕ್ಕೆ ನಮ್ಮ ಸಂಪೂರ್ಣ ಸಹಕಾರ ಸದಾ ಇರುತ್ತದೆ ಎಂದು ರಾಜ್‌ನಾಥ್‌ಸಿಂಗ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ದೆಹಲಿ ಸರ್ಕಾರದ ಅಧಿಕಾರಿಗಳ ಕರ್ತವ್ಯಗಳ ವಿಷಯದಲ್ಲಿ ಲೆಫ್ಟಿನೆಂಟ್ ಜನರಲ್ ನಾಜೀಬ್ ಜಂಗ್ ಅವರು ಹಸ್ತಕ್ಷೇಪ ಮಾಡುವುದು ಸರಿಯಲ್ಲ, ಇದು ಚುನಾಯಿತ ಸರ್ಕಾರದ ಹಕ್ಕಿನ ಅಪಹರಣ ಎನ್ನಬೇಕಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟ ಬೆನ್ನಲ್ಲೇ ಕೇಂದ್ರ ಈ ಹೇಳಿಕೆ ನೀಡಿದೆ. ಕೇಂದ್ರಾಡಳಿತ ಭೂ ಪ್ರದೇಶವಾಗಿರುವ ದೆಹಲಿಯ ಲೆಫ್ಟಿನೆಂಟ್ ಜನರಲ್ ಅವರು ಚುನಾಯಿತ ಸರ್ಕಾರದ ಸಚಿವ ಸಂಪುಟದ ವಿಷಯಗಳಲ್ಲಿ ಮಧ್ಯ ಪ್ರವೇಶ ಮಾಡಬಾರದು, ಹಾಗೆ ಮಾಡಿದರೆ ಅದು ಹಕ್ಕು ಕಸಿದಂತಾಗುತ್ತದೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಲೆಫ್ಟಿನೆಂಟ್ ಜನರಲ್ ಅವರು ಜನಾದೇಶವನ್ನು ಗೌರವಿಸಬೇಕು. ಸಂವಿಧಾನದ ಮುಖ್ಯ ಉದ್ದೇಶವೇ ಅದು ಎಂದು ಕೋರ್ಟ್ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಈ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ರಚನಾತ್ಮಕವಾದ ಪೂರ್ಣ ಸಹಕಾರ ನೀಡಲಿದೆ ಮತ್ತು ಸಾಂವಿಧಾನಿಕ ಅಂಶಗಳನ್ನು ಗೌರವಿಸಿ ಕಾರ್ಯ ನಿರ್ವಹಿಸಲಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

Write A Comment