ಕರ್ನಾಟಕ

ಯದುವೀರ್ ಪಟ್ಟಾಭಿಷೇಕ: ಧಾರ್ಮಿಕ ಕಾರ್ಯಗಳಿಗೆ ಚಾಲನೆ

Pinterest LinkedIn Tumblr

Mysore-Palace

ಮೈಸೂರು: ಯದುವೀರ್ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು ಅರಮನೆ ನವವಧುವಿನಂತೆ ಶೃಂಗಾರಗೊಂಡಿದೆ. ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಿವೆ.

ಇಂದು ಮುಂಜಾನೆ 5 ಗಂಟೆಗೆ ಪಟ್ಟಾಭಿಷಕ್ತರಾಗಲಿರುವ ಯದುವಂಶದ ರಾಜಕುವರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮಂಗಳ ಸ್ನಾನ ನೆರವೇರಿಸುವ ಮೂಲಕ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಮಂಗಳಸ್ನಾನದ ನಂತರ ಯದುವೀರ ಅವರು ಅರಮನೆಯ ಲಾಂಛನಗಳೊಂದಿಗೆ ಮೆರವಣಿಗೆಯಲ್ಲಿ ಬಂದು ಅರಮನೆಯ ಆವರಣದಲ್ಲಿರುವ ಶ್ರೀಲಕ್ಷ್ಮೀ ವೇಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆನಂತರ ಅರಮನೆ ಪ್ರವೇಶಿಸಿದರು. ಅರಮನೆ ಒಳಭಾಗದಲ್ಲಿ ಗಣಪತಿ ಪೂಜೆ, ಪುಣ್ಯಾಹದೊಂದಿಗೆ ಇತರೆ ಪೂಜಾ ವಿಧಿವಿಧಾನ ಮಾಡಿಸಿ ವಿವಿಧ ಹೋಮಗಳನ್ನು ನೆರವೇರಿಸಲಾಯಿತು. ಧಾರ್ಮಿಕ ವಿಧಿ, ವಿಧಾನಗಳ ನಂತರ ಯದುವೀರ ಅವರಿಗೆ ಕಂಕಣವನ್ನು ಕಟ್ಟಲಾಯಿತು. ಇದೇ ವೇಳೆ ಪರಕಾಲ ಮಠದ ಶ್ರೀಗಳಿಗೆ ಪಾದಪೂಜೆ ನೆರವೇರಿತು. ಯದುವೀರ ಅವರ ಪಟ್ಟಾಭಿಷೇಕ ಮಹೋತ್ಸವವು ನಾಳೆ ಬೆಳಗ್ಗೆ 9.30ರಿಂದ 10.30ರವರೆಗೆ ಸಲ್ಲುವ ಶುಭ ಕರ್ಕಾಟಕ ಲಗ್ನದಲ್ಲಿ ನಡೆಯಲಿದೆ.

Mysore-Palace123

Mysore-Palace12

Mysore-Palace1

ಈ ಸಮಾರಂಭಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಪರಕಾಲ ಮಠ, ಶೃಂಗೇರಿ ಮಠ ಸೇರಿದಂತೆ ಹಲವು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಯದುವೀರರನ್ನು ವರಿಸಲಿರುವ ತ್ರಿಷಾಳ ಕುಟುಂಬವರ್ಗ, ರಾಜಸ್ಥಾನದ ರಾಜಮನೆತನದವರು, ಅರಸು ಕುಟುಂಬಗಳವರು, ದೇಶ-ವಿದೇಶಗಳ ರಾಜ ಮನೆತನದವರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಯದುವೀರರೊಂದಿಗೆ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಕೆಲವು ಸಹಪಾಠಿಗಳು ಪಟ್ಟಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಪಟ್ಟಾಭಿಷೇಕ ಮಹೋತ್ಸವದ ನಂತರ ಮಧ್ಯಾಹ್ನ ಯದುವೀರ ಅವರು ಅರಮನೆಯಲ್ಲಿರುವ ಗಣಪತಿ ದೇವಸ್ಥಾನ, ಆವರಣದಲ್ಲಿರುವ ಭುವನೇಶ್ವರಿ, ಗಾಯತ್ರಿ, ಶ್ರೀ ಲಕ್ಷ್ಮಿವೇಂಕಟರಮಣ, ತ್ರಿನೇಶ್ವರ, ವರಾಹ ಸೇರಿದಂತೆ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ ಸಲ್ಲಿಸುವರು.

ಸಂಜೆ 6.30ಕ್ಕೆ ದರ್ಬಾರ್ ಸಭಾಂಗಣದಲ್ಲಿ ಆರತಕ್ಷತೆ ಏರ್ಪಡಿಸಲಾಗಿದ್ದು ಮೈಸೂರಿಗರು ಸೇರಿದಂತೆ ಇತರರಿಗೆ ಮುಕ್ತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಇಂದು ಮತ್ತು ನಾಳೆಯ ಮಧ್ಯಾಹ್ನದ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಯಾವುದೇ ಪ್ರವೇಶ ಕಲ್ಪಿಸಿಲ್ಲ. ಕೇವಲ ಆಹ್ವಾನಿತರಿಗೆ ಮಾತ್ರ ಅವಕಾಶವಿದೆ. 40 ವರ್ಷಗಳ ನಂತರ ನಡೆಯುತ್ತಿರುವ ಈ ಪಟ್ಟಾಭಿಷೇಕ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ನಗರದ ಜನರು ಕಾತುರದಿಂದ ಕಾಯುತ್ತಿದ್ದರು.

ಕಣ್ಣೀರಿಟ್ಟ ರಾಣಿ ಪ್ರಮೋದಾದೇವಿ:
ಧಾರ್ಮಿಕ ಪೂಜಾ ಕಾರ್ಯದ ವೇಳೆ ಸಂಪ್ರದಾಯದಂತೆ ರಾಜಮಾತಾ ಪ್ರಮೋದಾ ದೇವಿ ಒಡೆಯರ್ ಅವರಿಗೆ ಯುವರಾಜ ಯದುವೀರ ಪಾದಪೂಜೆ ನೆರವೇರಿಸಿದರು. ಈ ವೇಳೆ ಶ್ರೀಕಂಠದತ್ತ ಒಡೆಯರ್ ಅವರನ್ನು ನೆನೆದು ರಾಣಿ ಪ್ರಮೋದಾ ದೇವಿಯವರು ಕಣ್ಣೀರಿಟ್ಟಿದ್ದು ಅಲ್ಲಿ ನೆರೆದಿರುವವರ ಮನ ಮಿಡಿಯಿತು.

Write A Comment