ಕರ್ನಾಟಕ

ಅಲೋಕ್ ಕುಮಾರ್ ಅಮಾನತು : ನಿಟ್ಟುಸಿರು ಬಿಟ್ಟ ರೌಡಿಗಳು

Pinterest LinkedIn Tumblr

Alok-Kumar-Suspended

ಬೆಂಗಳೂರು ರೌಡಿಗಳು ಅವರು ಹೆಸರು ಕೇಳಿದರೆ ಸಾಕು ನಿಂತಲ್ಲೇ ನಡುಗಿ ಬೆವರುತ್ತಿದ್ದರು. ಇನ್ನು ಎದುರಿಗೆ ಅವರು ಬಂದು ನಿಂತರಂತೂ ಅವರ ಪಾಡು ನಾಯಿ ಪಾಡೇ ಸರಿ. ಆ ರೀತಿ ಅಪರಾಧ ಲೋಕಕ್ಕೆ ಸಿಂಹಸ್ವಪ್ನವಾಗಿದ್ದವರು ಐಪಿಎಸ್ ಅಧಿಕಾರಿ ಅಲೋಕ್‌ಕುಮಾರ್.

ಮೂಲತಃ ಉತ್ತರ ಭಾರತದ ಇವರು ಭಾರತೀಯ ಪೊಲೀಸ್ ಸೇವೆಗೆ ನೇಮಕವಾದ ನಂತರ ಅಧಿಕಾರ ವಹಿಸಿಕೊಂಡಿದ್ದೇ ಬೆಂಗಳೂರಿನಲ್ಲಿ. ಅಲ್ಲಿಂದಾಚೆಗೆ ಅವರು ಇಡೀ ಬೆಂಗಳೂರಿನಾದ್ಯಂತ ಸಂಚಲನ ಮೂಡಿಸಿದ್ದು ತಮ್ಮ ದಿಟ್ಟ ನಿಲುವಿನ ಕಾರ್ಯಾಚರಣೆಗಳ ಮೂಲಕ ಎಂಬುದನ್ನು ಯಾರು ಮರೆಯಲಾರರು. ಸೂಪರ್‌ಕಾಪ್ ಎಂದೇ ಬಿಂಬಿತವಾಗಿದ್ದ ಅಲೋಕ್‌ಕುಮಾರ್ ಅವರು ಬೆಂಗಳೂರಿನ ರೌಡಿಗಳು ನಿದ್ರೆಯಲ್ಲೂ ಬೆಚ್ಚಿ ಬೀಳುವಂತೆ ಕ್ರಮ ಕೈಗೊಂಡಿದ್ದವರು. ನಿನ್ನೆ , ಮೊನ್ನೆಯ ತನಕವೂ ಬೆಂಗಳೂರಿನ ರೌಡಿಗಳ ಪರೇಡ್ ನಡೆಸಿ ‘ಬಾಲ ಬಿಚ್ಚಿದರೆ ಅದನ್ನು ತುಂಡು ಮಾಡುವುದು ಹೇಗೆ ಎಂಬುದು ಗೊತ್ತಿದೆ’ ಎಂದು ಇಡೀ ಅಪರಾಧ ಲೋಕಕ್ಕೆ ಎಚ್ಚರಿಕೆ ನೀಡಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಾ ಬಂದಿದ್ದರು.

ಈ ರೀತಿ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಾ ಹೆಸರುವಾಸಿಯಾಗಿರುವ ಅಲೋಕ್‌ಕುಮಾರ್ ಅವರನ್ನು ಕಂಡರೆ ಅವರದೇ ಇಲಾಖೆಯಲ್ಲಿ ಹಲವರಿಗೆ ಇಷ್ಟವಾಗುತ್ತಿರಲಿಲ್ಲ. ಅವರ ವಿರುದ್ಧ ಸದಾ ಕಾಲ ಪಿತೂರಿ ನಡೆಯುತ್ತಲೇ ಇತ್ತು ಎಂಬುದಕ್ಕೆ ಸಾಕ್ಷಿಯಾಗಿ ಅವರೇ ನಿನ್ನೆ ಮಾಧ್ಯಮಗಳೆದುರು ಈ ನೋವನ್ನು ತೋಡಿಕೊಂಡಿದ್ದಾರೆ. ಈ ರೀತಿಯ ಜುಗಲ್‌ಬಂದಿಗೆ ಪೊಲೀಸ್ ಇಲಾಖೆಯಲ್ಲೇನೂ ಕೊರತೆ ಇಲ್ಲ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಒಬ್ಬರನ್ನು ಮತ್ತೊಬ್ಬರು ಸಹಿಸುವುದಿಲ್ಲ. ಒಳ್ಳೆಯ ಕಾರ್ಯ ಮಾಡುವವರನ್ನು ಹೇಗಾದರೂ ಸರಿ ಮುಗಿಸಲೇಬೇಕು ಎಂಬ ಸ್ಕೆಚ್ ಸದಾ ಸಿದ್ಧವಾಗಿಯೇ ಇರುತ್ತದೆ. ಇದು ಈಗಿನ ಸಮಸ್ಯೆಯಲ್ಲ. ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಒಂದು ದೊಡ್ಡ ತಲೆನೋವು.

ಹಾಗಾಗಿಯೇ ಹಲವು ದಕ್ಷರು, ಪ್ರಾಮಾಣಿಕರು, ಚಾಣಾಕ್ಷರು ಇಂತಹ ಬಲೆಗೆ ಬಿದ್ದು ಅಧಿಕಾರ ವಂಚಿತರಾಗಿರುವುದು ಸುಳ್ಳಲ್ಲ. ಇನ್ನು ಕೆಲವರು ಅಪರಾಧ ಲೋಕದ ಬೆನ್ನಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಾ ಬಂದವರು ಇದ್ದಾರೆ. ಇವರಲ್ಲೂ ದಕ್ಷರು, ಪ್ರಾಮಾಣಿಕರು ಇದ್ದಾರೆ.
ಇದೀಗ ಅಕ್ರಮ ಲಾಟರಿ ದಂಧೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್‌ಕುಮಾರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಮಾನತುಪಡಿಸಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಕ್ರಮ. ಆದರೂ ಈ ದಂಧೆಯಲ್ಲಿ ಇವರ ಹೆಸರು ಕೇಳಿ ಬರುತ್ತಿದ್ದಂತೆ ಇಡೀ ಇಲಾಖೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಅವರದೇ ಅಭಿಮಾನಿಗಳ ಪಡೆಗಂತೂ ಭಾರೀ ಮುಜುಗರ ಉಂಟಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಅಪರಾಧ ಲೋಕ ಖುಷಿಯಿಂದ ಬೀಗುತ್ತಿದೆ.

ಇಪ್ಪತ್ತೊಂದು ವರ್ಷಗಳ ಆಡಳಿತಾವಧಿಯಲ್ಲಿ ಅಲೋಕ್‌ಕುಮಾರ್ ಯಾವುದೇ ಕಪ್ಪು ಚುಕ್ಕೆಯನ್ನು ಅಂಟಿಸಿಕೊಂಡವರಲ್ಲ. ಇಲಾಖೆಗೆ ಅವರು ತಮ್ಮ ಸಮರ್ಥ ಆಡಳಿತವನ್ನು ಧಾರೆ ಎರೆದಿದ್ದಾರೆ. ಆದರೂ ರಾಜ್ಯದಲ್ಲಿ 30 ವರ್ಷಗಳ ಇತಿಹಾಸದಲ್ಲಿ ಯಾವುದೇ ಐಜಿಪಿ ಹುದ್ದೆಯ ಅಧಿಕಾರಿ ಈ ರೀತಿಯ ಪ್ರಕರಣಕ್ಕೆ ಸಿಕ್ಕಿ ಹಾಕಿಕೊಂಡು ಅಮಾನತುಗೊಂಡ ನಿದರ್ಶನಗಳು ಇರಲಿಲ್ಲ.  ಒಟ್ಟಾರೆ ಇಂತಹ ಆಘಾತಕಾರಿ ಸುದ್ದಿಗಳು ಜನರ ನಂಬಿಕೆಗಳನ್ನೇ ಹುಸಿಗೊಳಿಸುತ್ತಾ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ಬೆಳವಣಿಗೆಗಳನ್ನು ತಡೆಯಲು ಸಾಧ್ಯವಾಗದೇ ಹೋಗುತ್ತಿರುವುದು ನಿಜಕ್ಕೂ ದುರಂತ.

Write A Comment