ಕರ್ನಾಟಕ

ಗಣ್ಯ-ಅತಿಗಣ್ಯರ ಅಧಿಕೃತ ವಾಹನಗಳ ಕೆಂಪು ದೀಪ ಬಳಕೆಗೆ ಬ್ರೇಕ್

Pinterest LinkedIn Tumblr

Red-Light-Car

ಬೆಂಗಳೂರು, ಮೇ 22-ಗಣ್ಯ-ಅತಿಗಣ್ಯ ವ್ಯಕ್ತಿಗಳ ಅಧಿಕೃತ ವಾಹನಗಳ ಮೇಲೆ ಕೆಂಪುದೀಪ ಬಳಸುವುದನ್ನು ಸುಪ್ರೀಂಕೋರ್ಟ್ ನಿರ್ದೇಶನದನ್ವಯ ಮಿತಿಗೊಳಿಸಲಾಗಿದ್ದು, ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಸೇರಿದಂತೆ ಯಾವುದೇ ಅಧಿಕಾರಿಗಳು ತಮ್ಮ ವಾಹನದ ಮೇಲೆ ಕೆಂಪು, ಹಳದಿ, ನೀಲಿ ಬಣ್ಣ ಸೇರಿದಂತೆ

ಯಾವುದೇ ರೀತಿಯ ದೀಪ ಬಳಸುವಂತಿಲ್ಲ ಎಂದು ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ ಡಾ.ರಾಮೇಗೌಡ ತಿಳಿಸಿದ್ದಾರೆ.  ಈ ಸಂಜೆಯೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ಈಗ ರಾಜ್ಯಪಾಲರು, ಮುಖ್ಯಮಂತ್ರಿಗಳು, ಮಂತ್ರಿ ಮಂಡಲದ ಸಚಿವರು, ವಿಧಾನಪರಿಷತ್‌ನ ಸಭಾಪತಿ, ವಿಧಾನಸಭಾಧ್ಯಕ್ಷರು, ಹೈಕೋರ್ಟ್ ಮುಖ್ಯ ನ್ಯಾಯಾಧೀಶರು,   ನ್ಯಾಯಾಧೀಶರುಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ಸಂಬಂಧ ರಾಜ್ಯ ಸಾರಿಗೆ ಇಲಾಖೆ 2013ರ ಜೂನ್ 5ರಲ್ಲೇ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಗಣ್ಯ ವ್ಯಕ್ತಿಗಳಿಗೆ ಪೊಲೀಸರು ಒದಗಿಸುವ ಎಸ್ಕಾರ್ಟ್ಸ್ ಸೇವೆ ಸಂದರ್ಭದಲ್ಲಿ ಕೇಂದ್ರ ಮೋಟಾರು ವಾಹನ ಕಾಯ್ದೆ ನಿಯಮಗಳನ್ವಯ ನೀಲಿ ಬಣ್ಣದ ದೀಪ ಅಳವಡಿಸಿಕೊಳ್ಳಬಹುದು. ಇದನ್ನು ಹೊರತುಪಡಿಸಿದರೆ ಇನ್ನಾವುದೇ ಅಧಿಕಾರಿ ಯಾವುದೇ ಬಣ್ಣದ ದೀಪವನ್ನು ವಾಹನಗಳ ಮೇಲೆ ಬಳಸುವಂತಿಲ್ಲ. ಒಂದು ವೇಳೆ ಬಳಸಿದರೂ ಅದು ತಪ್ಪಾಗುತ್ತದೆ ಎಂದರು.  ತುರ್ತು ಸಂದರ್ಭದಲ್ಲಿ ತೆರಳಬೇಕಾಗಿರುವುದರಿಂದ ಪೊಲೀಸ್ ವಾಹನಗಳಿಗೆ ದೀಪ ಅಳವಡಿಸಿಕೊಳ್ಳಬೇಕೆಂಬ ಬೇಡಿಕೆ ಇದೆ. ಇದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ತೀರ್ಮಾನವಾಗಿಲ್ಲ. ತೀರ್ಮಾನವಾದ ಬಳಿಕ ಯಾವ ಯಾವ ವಾಹನಗಳಿಗೆ ದೀಪ ಬಳಸುವ ಅವಕಾಶ ಸಿಗುತ್ತದೆ ಎಂಬುದು ಗೊತ್ತಾಗಲಿದೆ. ಆನಂತರ ನಿಯಮ ಉಲ್ಲಂಘಿಸಿ ಬಳಸುವ ವಾಹನಗಳ ಮೇಲೆ ಕಾನೂನು ರೀತಿ ಶಿಕ್ಷಿಸಲು ಅವಕಾಶವಾಗುತ್ತದೆ.

ಕೆಲವು ಪೊಲೀಸ್ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ನೀಲಿ, ಹಳದಿ ದೀಪಗಳನ್ನು ಬಳಸುತ್ತಿದ್ದರೂ ಅದಕ್ಕೆ ಕಾನೂನು ರೀತಿಯ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು. ಕೇಂದ್ರ ಮೋಟಾರು ವಾಹನ ಕಾಯ್ದೆ-1989ರಡಿ ಹೊರಡಿಸಿದ ಎಲ್ಲ್ಲ ಅಧಿಸೂಚನೆಗಳನ್ನು ಹಿಂದಕ್ಕೆ ಪಡೆದಿರುವುದರಿಂದ ಅಧಿಕಾರಿಗಳಿಗಿದ್ದ ತಮ್ಮ ವಾಹನಗಳ ಮೇಲೆ ಕೆಂಪು ದೀಪ ಬಳಸುವ ಸೌಲಭ್ಯ ರದ್ದಾಗಿದೆ. 2008ರ  ಜ.23 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ರಾಜ್ಯಪಾಲರು,  ಮುಖ್ಯಮಂತ್ರಿ ಜೊತೆಗೆ ಅಧಿಕಾರಿಗಳು ಕೂಡ ಕೆಂಪು ದೀಪವನ್ನು ತಮ್ಮ ಕಾರಿನ ಮೇಲೆ ಬಳಸಬಹುದಿತ್ತು.  ಸಚಿವರ ಸಮಾನ ಸ್ಥಾನಮಾನ ಹೊಂದಿರುವ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು ಅಥವಾ ಮುಖ್ಯಸ್ಥರು ಹಾಗೂ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಸ್ಥಾನಮಾನ ಹೊಂದಿರುವ ನ್ಯಾಯಮಂಡಳಿ, ಆಯೋಗಗಳ ಅಧ್ಯಕ್ಷರು ಹಾಗೂ ಸದಸ್ಯರು ತಮ್ಮ ಅಧಿಕೃತ ವಾಹನಗಳ ಮೇಲೆ  ಕೆಂಪು ದೀಪ ಅಳವಡಿಸಿಕೊಳ್ಳುವಂತಿಲ್ಲ. ಇದೇ ರೀತಿ ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ಯಾವುದೇ ಸರ್ಕಾರಿ ಅಧಿಕಾರಿಗಳು ಹಾಗೂ ಇತರೆ ಗಣ್ಯರು ತಮ್ಮ ಅಧಿಕೃತ ವಾಹನಗಳ ಮೇಲೆ ಕೆಂಪು ದೀಪ ಅಳವಡಿಸಿಕೊಳ್ಳುವಂತಿಲ್ಲ ಎಂದು ಸಾರಿಗೆ ಇಲಾಖೆ ಹೊರಡಿಸಿರುವ ಸರ್ಕಾರಿ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಈ ಹಿಂದೆ 32 ವಿವಿಧ ವರ್ಗದ ಗಣ್ಯರು ಹಾಗೂ ಅಧಿಕಾರಿಗಳು ಕೆಂಪು ದೀಪವನ್ನು ಬಳಸಬಹುದಾಗಿತ್ತು. ಅದನ್ನು ಈಗ ಕೇವಲ 5 ವರ್ಗಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ಹಿಂದೆ ವಿಧಾನ ಪರಿಷತ್ ಸಭಾಪತಿ, ವಿಧಾನ ಸಭಾಧ್ಯಕ್ಷರು, ಹೈಕೋರ್ಟ್ ಮುಖ್ಯ ನ್ಯಾಯಾಧೀಶರು, ರಾಜ್ಯ ಲೋಕಾಯುಕ್ತರು, ಹೈಕೋರ್ಟ್ ನ್ಯಾಯಾಧೀಶರು, ರಾಜ್ಯದ ಸಂಪುಟ ದರ್ಜೆ ಸಚಿವರು, ವಿಧಾನಸಭೆ, ವಿಧಾನಪರಿಷತ್‌ನ ನಾಯಕರು, ಉಪಲೋಕಾಯುಕ್ತರು ಕೂಡ ಕೆಂಪು ದೀಪವನ್ನು ಬಳಸಬಹುದಾಗಿತ್ತು.  ಉಪಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು , ರಾಜ್ಯ ಪೊಲೀಸ್ ಮಹಾನಿರ್ದೇಶಕರು, ರಾಜ್ಯ ಪ್ರಾದೇಶಿಕ ಆಯುಕ್ತರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಡಿಐಜಿಗಳು, ಮಹಾನಗರ ಪಾಲಿಕೆ ಮೇಯರ್‌ಗಳು, ಸಾರಿಗೆ ಇಲಾಖೆ ಆಯುಕ್ತರು, ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ನ್ಯಾಯಾಧೀಶರು ಕೂಡ ತಮ್ಮ ಕಾರಿನ ಮೇಲೆ ಕೆಂಪು ದೀಪ ಬಳಸುವ ಅವಕಾಶವಿತ್ತು.ಜಿಲ್ಲಾ  ಪೊಲೀಸ್ ಅಧೀಕ್ಷಕರು, ಉಪ ಆಯುಕ್ತರು, ಉಪವಿಭಾಗಾಧಿಕಾರಿಗಳು, ಉಪವಿಭಾಗದ ಮ್ಯಾಜಿಸ್ಟ್ರೇಟ್, ಡಿವೈಎಸ್ಪಿ, ಕಸ್ಟಮ್ಸ್‌ನ ಮುಖ್ಯ ಆಯುಕ್ತರು, ಕೇಂದ್ರ ಅಬಕಾರಿ ಆಯುಕ್ತರು, ಕಸ್ಟಮ್ಸ್ ಆಯುಕ್ತರು, ರಾಜ್ಯ ಚುನಾವಣಾ ಆಯೋಗದ ಆಯುಕ್ತರು, ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಕೂಡ ಕೆಂಪು ದೀಪದ ಸೌಲಭ್ಯ ಪಡೆಯಬಹುದಿತ್ತು.

Write A Comment