ಕರ್ನಾಟಕ

3 ವರ್ಷದ ಹಸುಳೆ ಮೇಲೆ ಅತ್ಯಾಚಾರ : ‘ಕಾಮುಕರ ಸ್ವರ್ಗ’ವಾಗುತ್ತಿರುವ ಬೆಂಗಳೂರು

Pinterest LinkedIn Tumblr

Rape-on-girl_in_banbg

ಬೆಂಗಳೂರು, ಮೇ 22- ಮಾಹಿತಿ ತಂತ್ರಜ್ಞಾನದ ಮೂಲಕ ಜಗತ್ತಿನ ಗಮನ ಸೆಳೆದಿದ್ದ ಮಹಾನಗರ ಕಾಮುಕರ  ಸ್ವರ್ಗವಾಗುತ್ತಿದೆಯೇ..? ಹೌದೆನ್ನುತ್ತಿವೆ ಇತ್ತೀಚಿನ ಕೆಲವು ಅಮಾನುಷ ಘಟನೆಗಳು. ಒಂದೆಡೆ ಹಾಡಹಗಲೆ ಸರಗಳ್ಳತನ, ಕೊಲೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿವೆ.

ಪೊಲೀಸ್ ಇಲಾಖೆ ಎಷ್ಟೇ ಕ್ರಮ ಕೈಗೊಂಡರೂ ಈ ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಲು ಸಾಧ್ಯವಾಗುತ್ತಿಲ್ಲ. ಈ ಪ್ರಕರಣಕ್ಕೆ ಮತ್ತೊಂದು ಸೇರ್ಪಡೆಯೆಂದರೆ ಮೂರು ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ ನಡೆದಿರುವ ಕಳೆದ ಭಾನುವಾರ ರಾತ್ರಿ ಕಾಡುಗೋಡಿ ಸಮೀಪದ ದಿಣ್ಣೂರಿನಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಹಸುಳೆಯ ಮೇಲೆ ವಿಕೃತ ಕಾಮಿಯೊಬ್ಬ ಅತ್ಯಾಚಾರವೆಸಗಿದ್ದಾನೆ. ತಾನು ಮಾಡಿರುವ ಈ ಪಾಪಕೃತ್ಯ ಎಲ್ಲಿ ಬಲಯಾಗಿಬಿಡುತ್ತದೆಯೋ ಎಂಬ ಭಯಕ್ಕೆ ಆ ಮಗುವನ್ನು ಕಸದ ತೊಟ್ಟಿಗೆ ಎಸೆದು ಪರಾರಿಯಾಗಿದ್ದಾನೆ.  ಅತ್ಯಾಚಾರಕ್ಕೊಳಗಾದ ಮಗು ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಇನ್ನೂ ಎರಡು ದಿನಗಳ ಕಾಲ ತುರ್ತು ಚಿಕಿತ್ಸಾ ಘಟಕದಲ್ಲೇ ಇರಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಆಗ್ನೇಯ ಪೊಲೀಸ್ ಠಾಣೆ ಡಿಸಿಪಿ ರೋಹಿಣಿ ಕಟೋಚ್ ಸಪಟ್ ಆರೋಪಿಯನ್ನು ಪತ್ತೆ ಮಾಡಲು ತನಿಖಾ ತಂಡ ರಚನೆ ಮಾಡಿದ್ದಾರೆ. ಶೀಘ್ರದಲ್ಲೇ ಈ ಆರೋಪಿಯನ್ನು ಬಂಧಿಸುವುದಾಗಿಯೂ ಅವರು ಹೇಳಿದ್ದಾರೆ. ಘಟನೆ ವಿವರ: ಕಾಡುಗೋಡಿಯ ದಿಣ್ಣೂರಿನಲ್ಲಿ ಕಳೆದ ಭಾನುವಾರ ರಾತ್ರಿ ಮೂರು ವರ್ಷದ ಮಗುವೊಂದು ಮನೆ ಮುಂದೆ ಆಟವಾಡುತ್ತಿತ್ತು.  ಸಂಜೆ 7 ಗಂಟೆ ಸಮಯದಲ್ಲಿ ಮಗು ಆಟವಾಡುತ್ತಿದ್ದನ್ನು ಗಮನಿಸಿದ ತಾಯಿ ಅಡುಗೆ ಮಾಡಲು ಮನೆಯೊಳಗೆ ಹೋದರು. ಈ ಸಮಯವನ್ನೇ ಕಾಯುತ್ತಿದ್ದ ವಿಕೃತ ಕಾಮಿಯೊಬ್ಬ ಮಗುವಿಗೆ ಚಾಕೊಲೆಟ್ ಕೊಡುವ ನೆಪದಲ್ಲಿ ಕರೆದೊಯ್ದಿದ್ದಾನೆ. ಮನೆ ಮುಂದೆ ಆಟವಾಡುತ್ತಿದ್ದ ಮಗು ಇಲ್ಲದಿರುವುದನ್ನು ಕಂಡು ಗಾಬರಿಯಾದ ತಾಯಿ ತಕ್ಷಣವೇ ಅಕ್ಕಪಕ್ಕದ ಮನೆ ಹುಡುಕಿದರೂ ಪ್ರಯೋಜನವಾಗಿಲ್ಲ. ಕೂಡಲೇ ತನ್ನ ಪತಿಗೆ ವಿಷಯ ಮುಟ್ಟಿಸಿದರು.
ಅದೇ ದಿನ ನಗರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ರಾತ್ರಿ 10 ಗಂಟೆವರೆಗೂ ಮಗುವನ್ನು ಎಲ್ಲೆಡೆ ಹುಡುಕಿದರೂ ಸಿಗಲಿಲ್ಲ.  ಪಕ್ಕದ ಮನೆಯವರನ್ನು ಕೇಳಿದಾಗ ನೆರೆಮನೆಯ ಸಂದೀಪನ ಬಳಿ ಮಗು ಆಟವಾಡುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ. ತಕ್ಷಣವೇ ಆತನ ಬಳಿ ಕೇಳಿದಾಗ ಮಗುವನ್ನು ಬೇರೊಬ್ಬರು ಕರೆದುಕೊಂಡು ಹೋದರು ಎಂದು ಹೇಳಿದ್ದಾನೆ. ಹೀಗೆ ಸೋಮವಾರ ಮುಂಜಾನೆ 5 ಗಂಟೆವರೆಗೂ ಪೋಷಕರು ಮತ್ತು ಅಕ್ಕಪಕ್ಕದವರು ಮಗುವನ್ನು ಮನೆ ಮನೆ, ಗಲ್ಲಿ ಗಲ್ಲಿಯಲ್ಲಿ ಹುಡುಕಿದರು. ಕೊನೆಗೆ ಪಕ್ಕದ ಬೀದಿಯ ಕಸದ ತೊಟ್ಟಿಯಲ್ಲಿ ಮಗುವಿನ ಆರ್ತನಾದ ಕೇಳಿಬರುತ್ತಿತ್ತು. ಕೂಡಲೇ ಅಲ್ಲಿ ಹೋಗಿ ನೋಡಿದಾಗ ಮಗು ಬೆತ್ತಲೆಯಾಗಿ ಕಸದ ತೊಟ್ಟಿಯಲ್ಲಿ ಬಿದ್ದು ಒದ್ದಾಡುತ್ತಿತ್ತು. ತಕ್ಷಣವೇ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
ಮೇಲ್ನೋಟಕ್ಕೆ ಅತ್ಯಾಚಾರ ನಡೆದಿರುವುದು ಸಾಬೀತಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಲು ಬಲೆ ಬೀಸಿದ್ದಾರೆ.

Write A Comment