ಕರ್ನಾಟಕ

ಮೂರು ನದಿಗಳು ಸಂಗಮವಾಗುವ ಸ್ಥಳ, ಜಗದ ಜನರ ಕಣ್ಣಿಗೆ ಬೀಳದೆ ನಿರ್ಮಲವಾಗಿದೆ!

Pinterest LinkedIn Tumblr

triveni_sangama1

ಇಲ್ಲಿ ಪರಿಚಯ ಮಾಡಿಕೊಳ್ಳುವ ಪರಿಸರದ ಜಾಗದ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿದರೂ ಮಾಹಿತಿ ದೊರೆಯಲ್ಲಾ , ವಿಕಿಪಿಡಿಯಾ ದಲ್ಲೂ ಮಾಹಿತಿ ಇಲ್ಲ, ಗೂಗಲ್ ಸರ್ಚ್ ಈ ಜಾಗದ ಬಗ್ಗೆ ತಲೆ ಒಗೆಯುತ್ತದೆ. ಅಚ್ಚರಿ ಆಯ್ತಾ ಬನ್ನಿ ಆ ಜಾಗಕ್ಕೆ ಹೋಗೋಣ. ಕೆ.ಆರ್.ಎಸ. ಹಿನ್ನೀರಿನ ತಡಿಯಲ್ಲಿ ಹಲವಾರು ವಿಸ್ಮಯ ಕಾರಿ ಜಾಗಗಳು ಅಡಗಿಕೊಂಡಿವೆ. ಹಿನ್ನೀರಿನ ಚಾಚು ಮಂಡ್ಯ ಜಿಲ್ಲೆ ಹಾಗು ಮೈಸೂರು ಜಿಲ್ಲೆಗೆ ಸೇರಿದ ಪಾಂಡವಪುರ , ಕೆ ಆರ್.ಪೇಟೆ ,[ಮಂಡ್ಯ ಜಿಲ್ಲೆ ] ಕೆ.ಆರ್.ನಗರ , ಹುಣಸೂರು [ ಮೈಸೂರು ಜಿಲ್ಲೆ ] ಈ ಭಾಗದಲ್ಲಿ ಹರಡಿ ಕೊಂಡಿದೆ. ಈ ಭಾಗಗಳಲ್ಲಿನ ಹಲವಾರು ವಿಸ್ಮಯಗಳು ಹೊರ ಜಗತ್ತಿಗೆ ತಿಳಿದಿಲ್ಲ. ಅದಕ್ಕೆ ಹೆಚ್ಚಿನ ಪ್ರಚಾರವೂ ಇಲ್ಲ ಹಾಗಾಗಿ ಜನರ ಕಣ್ಣಿಗೆ ಮರೆಯಾಗಿ ಉಳಿದಿವೆ.ಅಂತಹ ಒಂದು ಜಾಗ ಈ ಸಂಗಮೇಶ್ವರ ಪುರ ಅಥವಾ ಸಂಗಾ ಪುರ ಎನ್ನುವ ಸ್ಥಳ.

​ಈ ಪ್ರದೇಶದಲ್ಲಿ ಮೂರು ನದಿಗಳು ಸಂಗಮವಾಗಿ ಸುಂದರ ಪರಿಸರ ನಿರ್ಮಿಸಿವೆ.ಕೊಡಗು ಜಿಲ್ಲೆ ತಲಕಾವೇರಿ ಯಿಂದ ಹರಿದು ಬರುವ ಕಾವೇರಿ, ಕೊಡಗಿನ ಬ್ರಹ್ಮ ಗಿರಿ ಬೆಟ್ಟದಲ್ಲಿ ಹುಟ್ಟಿ ಇರುಪ್ಪು ಮೂಲಕ ಹರಿದು ಬರುವ ಲಕ್ಷ್ಮಣ ತೀರ್ಥ ಹಾಗು ಚಿಕ್ಕ ಮಗಳೂರು ಜಿಲ್ಲೆ ಮೂಡಿಗೆರೆಯ ಸಮೀಪದ “ಜಾವಳಿ” ಯಿಂದ ಹರಿದು ಬರುವ ಹೇಮಾವತಿ ನದಿಗಳು ಇಲ್ಲಿ ಪ್ರೀತಿಯಿಂದ ಸಂಗಮಿಸಿ ಸಂಭ್ರಮಿಸುತ್ತವೆ .ಮೂರು ನದಿಗಳು ಇಲ್ಲಿ ಹಲವಾರು ಸಣ್ಣ ಸಣ್ಣ ಭೂಶಿರ,ಹಾಗು ದ್ವೀಪಗಳನ್ನು ನಿರ್ಮಿಸಿವೆ.

ಈ ಪ್ರದೇಶಕ್ಕೆ ಐತಿಹಾಸಿಕ ಪೌರಾಣಿಕ ಮಹತ್ವ ಸಾರುವ ವಿಚಾರಗಳು ಇಲ್ಲದಿದ್ದರೂ ಕುಟುಂಬ ಸಮೇತ ಎಲ್ಲರೂ ಹಾಯಾಗಿ ಯಾವುದೇ ಅಡೆತಡೆ ಇಲ್ಲದೆ ವಿಹರಿಸಿ ಬರಬಹುದು. ಈ ಪ್ರದೇಶಕ್ಕೆ ಬರುವವರು ಯಾವುದೇ ಕಾರಣಕ್ಕೂ ಮರೆಯದೆ ತಿಂಡಿ ಊಟಗಳನ್ನು ಜೊತೆಯಲ್ಲಿ ತನ್ನಿರಿ . ದಯಮಾಡಿ ಸುಮಾರು ಎರಡು ಹೊತ್ತಿನ ಆಹಾರ ತರುವುದು ಒಳ್ಳೆಯದು .ಈ ಪ್ರದೇಶದಲ್ಲಿ ಚೆಲುವನ್ನು ನೋಡುತ್ತಾ ದಿನ ಕಳೆಯುವುದು ತಿಳಿಯುವುದಿಲ್ಲ. ಭೂಶಿರದ ತಟದಲ್ಲಿ ಕುಳಿತು ಗುಂಪಾಗಿ ಊಟ ಮಾಡುತ್ತಿದರೆ ಆ ಅನುಭವವೇ ಬೇರೆ. ಇಲ್ಲಿಯೂ ಸಹ ಹಲವಾರು ಬಗೆಯ ಪಕ್ಷಿಗಳನ್ನು ಪಕ್ಷಿವೀಕ್ಷಕರು ಗಮನಿಸಬಹುದು, ನೀರಿನಲ್ಲಿ ಯಾವುದೇ ಹೆದರಿಕೆ ಇಲ್ಲದೆ ಸುರಕ್ಷಿತ ಜಾಗದಲ್ಲಿ ಈಜಬಹುದು,[ ಆದರೆ ಗಮನಿಸಿ ಹೆಚ್ಚು ದೂರ ಹೋದಲ್ಲಿ ಸುಳಿಗೆ ಸಿಲುಕುವ ಅಪಾಯವಿದೆ ] ಸನಿಹದಲ್ಲೇ ಇರುವ ಸಂಗಮೇಶ್ವರ ,ಪಾರ್ವತಿ ದೇವಾಲಯದಲ್ಲಿ ದೇವರ ಆಶೀರ್ವಾದ ಪಡೆಯಬಹುದು.

ಎಲ್ಲಕಿಂತ ಹೆಚ್ಹಾಗಿ ಯಾವುದೇ ಗಲೀಜಿಲ್ಲದ , ನಿರ್ಮಲವಾದ ಈ ಪ್ರದೇಶದಲ್ಲಿ ಕುಟುಂಬದವರು ಮನರಂಜನೆಯ ಆಟ ಆಡಿ ಸಂತೋಷ ಹೊಂದ ಬಹುದುಇಲ್ಲಿ ಹೇರಳವಾಗಿ ಸಿಗುವ ಹಲವಾರು ಜಾತಿಯ ಮೀನುಗಳು ಮೈಸೂರು, ಬೆಂಗಳೂರು, ಪೂನ, ಮುಂತಾದೆಡೆಗೆ ಸಾಗಿಸಲ್ಪಡುತ್ತವೆ. ಪಕ್ಷಿ ವೀಕ್ಷಕರಾದರೆ  ಹಲವಾರು ಪ್ರಬೇದಗಳ ಪಕ್ಷಿಗಳನ್ನು  ಕಾಣಬಹುದು,  ಚಳಿಗಾಲದಲ್ಲಿ   ಈ ಪ್ರದೇಶದಲ್ಲಿ  ಅತೀ ಹೆಚ್ಚು ಪಕ್ಷಿಗಳು ಕಂಡುಬರುತ್ತವೆ . ನೂರಾರು ಸಂಖ್ಯೆಯಲ್ಲಿ  ರಿವರ್ ಟರ್ನ್ [ ಬಾನಾಡಿ ]  ಹಕ್ಕಿಗಳನ್ನು ಕಾಣಬಹುದು ಇಲ್ಲಿ.  ಛಾಯ ಚಿತ್ರ ತೆಗೆಯುವ ಹವ್ಯಾಸ ಇದ್ದಲ್ಲಿ ಕ್ಯಾಮರಾಗಳಿಗೆ ಹಬ್ಬ ಅಂತೂ ಗ್ಯಾರಂಟಿ .ಒಮ್ಮೆ ನೀವೂ ಸಹ ನಿಮ್ಮ ಕುಟುಂಬ ದೊಡನೆ ಇಲ್ಲಿಗೆ ಮರೆಯದೆ ಹೋಗಿಬನ್ನಿ [ ಆದರೆ ಅಲ್ಲಿನ ನಿರ್ಮಲತೆ ಕಾಪಾಡಲು ಸಹಕರಿಸಿ ] ಇಲ್ಲಿಗೆ  ವರ್ಷದ ಯಾವುದೇ  ಕಾಲದಲ್ಲಿ ಹೋದರು ನಿಮಗೆ ಒಳ್ಳೆಯ ಅನುಭವ ಸಿಗೋದು ಖಚಿತ .​

ಅಲ್ಲಿಗೆ ಹೋಗಲು ನಿಮ್ಮದೇ ಸ್ವಂತವಾಹನ ವಿದ್ದರೆ ಸೂಕ್ತ , ಬೆಂಗಳೂರಿನಿಂದ ,ಅಂದಾಜು 178 ಕಿ.ಮಿ.ದೂರದಲ್ಲಿರುವ ಈ ಪ್ರದೇಶ ವನ್ನು ಮಂಡ್ಯ , ಶ್ರೀ ರಂಗ ಪಟ್ಟಣ ಸಿಗುವ ಮೊದಲು ಕಿರಂಗೂರು ಸಮೀಪದ ವೃತ್ತದಲ್ಲಿ ಬಲಕ್ಕೆ ತಿರುಗಿ ಪಾಂಡವಪುರ ರೈಲ್ವೆ ಸ್ಟೇಶನ್ , ಮೂಲಕ, ಕೆ.ಆರ್.ಪೇಟೆ ರಸ್ತೆಯಲ್ಲಿ ಸಾಗಿ, ಚಿನಕುರುಳಿ, ಭೂಕನ ಕೆರೆ, ಗಂಜಿಗೆರೆ, ಕಟ್ಟೆಕ್ಯಾತನ ಹಳ್ಳಿ ಸೇತುವೆ ದಾಟಿ, ಅಂಬಿಗರ ಹಳ್ಳಿ ಸಂಗಾ ಪುರ ಮೂಲಕ ಈ ತ್ರಿವೇಣಿ ಸಂಗಮದ ಜಾಗ ತಲುಪಬಹುದು.  ಮೈಸೂರಿನಿಂದ  ಕೆ. ಆರ್ .ಎಸ್. ನಾರ್ತ್ ಬ್ಯಾಂಕ್ ,  ಬಂನಗಾಡಿ, ಗಂಜಿಗೆರೆ, ಕಟ್ಟೆಕ್ಯಾತನ ಹಳ್ಳಿ ಸೇತುವೆ ದಾಟಿ, , ಅಂಬಿಗರ ಹಳ್ಳಿ ಸಂಗಾ ಪುರ ಮೂಲಕ ಈ ತ್ರಿವೇಣಿ ಸಂಗಮದ ಜಾಗ ತಲುಪಬಹುದು.

ಸಾರ್ವಜನಿಕ ಸಾರಿಗೆ ಪಡೆಯುವವರು ಗಮನಿಸಿ  ಈ ಪ್ರದೇಶ ಮಂಡ್ಯ ಜಿಲ್ಲೆಗೆ ಸೇರಿದ್ದರೂ , ಕೆ.ಆರ್.ನಗರ ದಿಂದ ಮಾತ್ರ ನಿಯಮಿತವಾಗಿ    ಸಂಗಾಪುರಕ್ಕೆ ರಾಜ್ಯ  ಸಾರಿಗೆ  ಬಸ್ಸಿನ ಸೌಲಭ್ಯ ಇದೆ. ಇಲ್ಲಿಂದ ಮೂರು ಕಿ.ಮಿ.ನಡೆದರೆ ತ್ರಿವೇಣಿ ಸಂಗಮ ತಲುಪ ಬಹುದು . ಒಮ್ಮೆ ಹೋಗಿ ಕುಟುಂಬ ಸಮೇತ  ಹೋಗಿ  ಪ್ರಶಾಂತ ವಾತಾವರಣದ  ಅನುಭವ ಪಡೆಯಲು ಈ ಜಾಗ ಕೈಬೀಸಿ ಕರೆಯುತ್ತಿದೆ  ಒಮ್ಮೆ ಹೋಗಿಬನ್ನಿ .

Write A Comment