ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ತಾನು ಪ್ರೀತಿಸಿದ ಹುಡುಗಿಯೊಂದಿಗೆ ಬುಧವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಚಿತ್ರ ನಿರ್ಮಾಪಕ ಕೆಸಿಎನ್ ಮೋಹನ್ ಅವರ ಪುತ್ರಿ ಸ್ವಾತಿಯೊಂದಿಗೆ ನಿಖಿಲ್ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದು ಲವ್ ಕಮ್ ಅರೇಂಜ್ಡ್ ಮದುವೆ. ನಿಖಿಲ್ ಗೌಡ ಹಾಗೂ ಸ್ವಾತಿ ಇಬ್ಬರೂ ಕಾಲೇಜ್ಮೇಟ್ಸ್. ಕಾಲೇಜ್ ದಿನಗಳಲ್ಲೇ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಕೆಲವು ದಿನಗಳ ಹಿಂದಷ್ಟೇ ಇಬ್ಬರೂ ತಮ್ಮತಮ್ಮ ಕುಟುಂಬಕ್ಕೆ ಪ್ರೀತಿಯ ವಿಷಯ ತಿಳಿಸಿದ್ದರು. ಇದೀಗ ಎರಡು ಕುಟುಂಬಗಳ ಒಪ್ಪಿಗೆ ಪಡೆದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ನಿನ್ನೆ ಸಂಜೆ ಕೆಸಿಎನ್ ಮೋಹನ್ ಅವರ ಮನೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು. ಮಾಜಿ ಪ್ರಧಾನಿಯ ಕುಟುಂಬ ಸದಸ್ಯರು ಭಾಗಿಯಾಗಿದ್ದರು.
ಕೆಸಿಎನ್ ಮೋಹನ್ ಅವರು ಇತ್ತೀಚಿಗೆ ಡಾ.ರಾಜಕುಮಾರ್ ಅಭಿನಯದ ಕಸ್ತೂರಿ ನಿವಾಸ ಚಿತ್ರವನ್ನು ಕಲರ್ ಮಾಡುವ ಮೂಲಕ ಸುದ್ದಿ ಮಾಡಿದ್ದರು. ಇನ್ನು ನಿಖಿಲ್ಗೌಡ ಅವರು ಸಹ ಪುರಿ ಜಗನ್ನಾಥ ನಿರ್ದೇಶನದ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ನಿಖಿಲ್ ಗೌಡ ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ಆಗಿ ಮಿಂಚಿದ ಬಳಿಕ, ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.