ಕರ್ನಾಟಕ

ಜಯಾ ಅಕ್ರಮ ಆಸ್ತಿ ಪ್ರಕರಣ: ಸುಪ್ರೀಂ ಮೇಲ್ಮನವಿಗೆ ರಾಜ್ಯ ಸರ್ಕಾರ ಒಲವು

Pinterest LinkedIn Tumblr

jayalalithaa

ಗುರುವಾರ ರಾಜ್ಯ ಸಚಿವ ಸಂಪುಟ ಸಭೆ, ಕಾನೂನು ತಜ್ಞರ ಜತೆ ಸರ್ಕಾರದ ಚರ್ಚೆ

ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಕ್ಲೀನ್‌ಚಿಟ್ ಪಡೆದಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಡಿಎಂಕೆ ಮುಖ್ಯಸ್ಥೆ ಜಯಲಲಿತಾ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್ಯಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಹೈಕೋರ್ಟ್‌ನ ವಿಶೇಷ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕುಮಾರಸ್ವಾಮಿಯವರು ನೀಡಿರುವ ತೀರ್ಪಿನಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಸರ್ಕಾರಿ ವಿಶೇಷ ಅಭಿಯೋಜಕ ಬಿ.ವಿ.ಆಚಾರ್ಯ ಅವರ ಹೇಳಿಕೆಯ ಆಧಾರದ ಮೇಲೆ ರಾಜ್ಯಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸಚಿವರೊಂದಿಗೆ ಚರ್ಚಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಹೈಕೋರ್ಟ್ ನೀಡಿರುವ ಆದೇಶದ ಪ್ರತಿಯನ್ನು ಕಾನೂನು ಇಲಾಖೆಗೆ ಕಳುಹಿಸಿಕೊಡಲಾಗಿದ್ದು, ಕಾನೂನು ಹಾಗೂ ಸಂವಿಧಾನ ತಜ್ಞರು ನೀಡುವ ವರದಿ ಆಧಾರದ ಮೇಲೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ. ಕಾನೂನು ಇಲಾಖೆ, ಅಡ್ವೊಕೇಟ್ ಜನರಲ್ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರ ಅಭಿಪ್ರಾಯದ ಆಧಾರದ ಮೇಲೆ  ಸರ್ಕಾರದ ಮುಂದಿನ ನಡೆ ತೀರ್ಮಾನವಾಗಲಿದೆ.

ಈಗಾಗಲೇ ಸರ್ಕಾರಿ ವಿಶೇಷ ಅಭಿಯೋಜಕ ಬಿ.ವಿ.ಆಚಾರ್ಯ ಅವರು ಮೇಲ್ಮನವಿ ಅರ್ಜಿ ಸಲ್ಲಿಸಲು ಅರ್ಹ ಎಂದು ಹೇಳಿದ್ದು, ಹೈಕೋರ್ಟ್ ಏಕಸದಸ್ಯ ನೀಡಿರುವ ತೀರ್ಪಿನಲ್ಲಿ ಕೆಲವು ಲೋಪದೋಷಗಳಿದ್ದು, ಮೇಲ್ಮನವಿ ಸಲ್ಲಿಸಲು ಈ ಪ್ರಕರಣ ಸೂಕ್ತವಾಗಿದೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹೀಗಾಗಿ ಮೇ 21 ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಅಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಜಯಾ ವಿರುದ್ಧ ರಾಜ್ಯಪಾಲರಿಗೆ ಮನವಿ

ಇದೇ ವೇಳೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಲುಕಿರುವ ಜಯಲಲಿತಾ ಅವರಿಗೆ ಮತ್ತೆ ಸಿಎಂ ಹುದ್ದೆ ನೀಡಬಾರದು ಎಂದು ಸಾಮಾಜಿಕ ಹೋರಾಟಗಾರರೊಬ್ಬರು ತಮಿಳುನಾಡು ರಾಜ್ಯಪಾಲ ಕೆ.ರೋಸಯ್ಯ ಅವರಲ್ಲಿ ಮನವಿ ಮಾಡಿದ್ದಾರೆ. ಟ್ರಾಫಿಕ್ ರಾಮಸ್ವಾಮಿ ಎಂಬ ಸಾಮಾಜಿಕ ಹೋರಾಟಗಾರರೊಬ್ಬರು ತಮಿಳುನಾಡು ರಾಜ್ಯಪಾಲ ರೋಸಯ್ಯ ಅವರಿಗೆ ಪತ್ರ ರವಾನೆ ಮಾಡಿದ್ದು, ಜಯಲಲಿತಾ ಅವರ ಪರ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ತಾಂತ್ರಿಕ ಲೋಪದೋಷಗಳಿದ್ದು, ಈ ಹಂತದಲ್ಲಿ ಅವರಿಗೆ ಸಿಎಂ ಹುದ್ದೆ ನೀಡುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಈ ಬಗ್ಗೆ ರಾಷ್ಟ್ರಪತಿಗಳ ಗಮನವನ್ನು ಕೂಡ ಸೆಳೆಯಲು ಮುಂದಾಗಿರುವ ಅವರು, ಪ್ರಣಬ್ ಮುಖರ್ಜಿ ಅವರಿಗೂ ಪತ್ರ ರವಾನೆ ಮಾಡಲು ಮುಂದಾಗಿದ್ದಾರೆ.

Write A Comment