ಕರ್ನಾಟಕ

ಎರಡು ವರ್ಷದ ಹರ್ಷಾಚರಣೆಯ ಅಂಗವಾಗಿ ದಾವಣಗೆರೆಯಲ್ಲಿ ಕಾಂಗ್ರೆಸ್‌ ಸರ್ವೋದಯ ಸಮಾವೇಶ

Pinterest LinkedIn Tumblr

cm-sarvo

ದಾವಣಗೆರೆ, ಏ.16: ಸರ್ವೋದಯ ಸಮಾವೇಶದ ಅಂಗವಾಗಿ ರಾಜ್ಯ ಕಾಂಗ್ರೆಸ್‌ನಲ್ಲಿಂದು ಹಬ್ಬದ ಸಂಭ್ರಮ ಮನೆ ಮಾಡಿತ್ತು. ಕಳೆದ ಒಂಬ್ಬತ್ತು ವರ್ಷಗಳ ನಂತರ 2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನಲ್ಲಿ ಈಗ ಬರದ ನಂತರದ ಅತಿವೃಷ್ಠಿಯ ಆನಂದದ ವಾತಾವರಣ ನಿರ್ಮಾಣವಾಗಿದೆ.

2013ರ ಮೇ 13ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎರಡು ವರ್ಷದ ಹರ್ಷಾಚರಣೆಯ ಅಂಗವಾಗಿ ಇಂದು ದಾವಣಗೆರೆಯಲ್ಲಿ ಸರ್ವೋದಯ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಭಾಗ್ಯ ಸರಣಿಯ ಕಾರ್ಯಕ್ರಮಗಳ ಮೂಲಕ ಸರ್ವಜನಾಂಗದ ಸರ್ವೋದಯಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂಬ ಅರ್ಥದಲ್ಲಿ ಸಮಾವೇಶಕ್ಕೆ ಸರ್ವೋದಯ ಸಮಾವೇಶ ಎಂದು ನಾಮಕರಣ ಮಾಡಲಾಗಿತ್ತು. ಸಮಾವೇಶದಲ್ಲಿ ಸಂಭ್ರಮ ಮನೆ ಮಾಡಿತ್ತು. ವೇದಿಕೆಯಲ್ಲಿದ್ದ ಗಣ್ಯ ನಾಯಕರು, ವೇದಿಕೆಯ ಮುಂದಿದ್ದ ಕಾರ್ಯಕರ್ತರಾದಿಯಾಗಿ ಎಲ್ಲರಲ್ಲೂ ಹಬ್ಬದ ವಾತವರಣವಿತ್ತು. ಚುನಾವಣೆ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ನ ಎಲ್ಲಾ ನಾಯಕರು ಒಂದೇ ವೇದಿಕೆಯ ಮೇಲೆ ಕುಳಿತು ಒಗ್ಗಟ್ಟಿನ ಮಂತ್ರ ಜಪಿಸಿದರು.

ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಕೇಂದ್ರ ನಾಯಕರಾದ ಆಸ್ಕರ್ ಫರ್ನಾಂಡಿಸ್, ಬಿ.ಕೆ.ಹರಿ ಪ್ರಸಾದ್, ಮಾಜಿ ಕೇಂದ್ರ ಸಚಿವರಾದ ಕೆ.ಎಚ್.ಮುನಿಯಪ್ಪ, ಸಚಿವರಾದ ಡಿ.ಕೆ.ಶಿವಕುಮಾರ್, ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವರಾದ ಎಚ್.ವಿಶ್ವನಾಥ್, ಸಚಿವ ಸ್ಥಾನದ ಆಕಾಂಕ್ಷಿ ಕೆ.ಬಿ.ಕೋಳಿವಾಡ, ರಮೇಶ್ ಕುಮಾರ್, ಮೋಟಮ್ಮ, ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಎಲ್ಲಾ ಶಾಸಕರು, ಸಚಿವರು, ಸಂಸದರು, ಮಾಜಿ ಸಚಿವರು, ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಗ್ರಾಮ ಪಂಚಾಯತ್ ಚುನಾವಣೆಗೆ ಒಗ್ಗಟ್ಟು ಪ್ರದರ್ಶಿಸಿದರು.

ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕಾತಿ, ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆ, ಸರ್ಕಾರಿ ಅಧಿಕಾರಿಗಳ ವರ್ಗಾವಣೆ, ಸೇರಿದಂತೆ ನಾನಾ ವಿಷಯಗಳಲ್ಲಿ ಪಕ್ಷದ ಒಳಗೆ ಕುದಿಯುತ್ತಿದ್ದ ಅಸಮಾದಾನ ದಾವಣಗೆರೆಯಲ್ಲಿ ನಿನ್ನೆ ಸುರಿದ ಮಳೆಗೆ ಕೊಚ್ಚಿ ಹೋಗಿದೆಯೇನೋ ಎಂಬಂತೆ ತಂಪಾಗಿತ್ತು. ಗ್ರಾಮ ಪಂಚಾಯತ್ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸರ್ಕಾರದ ಬದಲಿಗೆ ಕಾಂಗ್ರೆಸ್ ಪಕ್ಷದಿಂದಲೇ ಸಮಾವೇಶ ಏರ್ಪಡಿಸಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಬೆಳಗ್ಗೆಯಿಂದಲೇ ವೇದಿಕೆಯ ಬಳಿ ಧಾವಿಸಿ ಕಾರ್ಯಕ್ರಮದ ಉಸ್ತುವಾರಿಯನ್ನು ಪರಿಶೀಲಿಸಿದರು. ಮಾಜಿ ಸಚಿವ ಬಿ.ಎಲ್.ಶಂಕರ್, ಎಚ್.ಎಂ.ರೇವಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಬೋಸ್‌ರಾಜ್, ನಿಗಮ ಮಂಡಳಿಧ್ಯಕ್ಷರಾದ ರಾಮಚಂದ್ರಪ್ಪ, ಹುಸೇನ್ ಮತ್ತಿತರರು ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯಲು ಟೊಂಕ ಕಟ್ಟಿ ಕೆಲಸ ಮಾಡಿದರು.

ಸಚಿವರಾದ ಎಚ್.ಸಿ. ಮಹದೇವಪ್ಪ, ಆಂಜನೇಯ, ಉಮಾಶ್ರೀ, ಎಚ್.ಕೆ.ಪಾಟೀಲ್, ದಾವಣಗೆರೆ ಜಿಲ್ಲೆಯ ಶಾಸಕರಾದ ಎಸ್.ಎಸ್.ಮಲ್ಲಿಕಾರ್ಜುನ್ ಕಾರ್ಯಕ್ರಮದ ಯಶಸ್ವಿಗೆ ಮುತುವರ್ಜಿ ವಹಿಸಿದ್ದರು. ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ನಾಯಕ ದಿಗ್ವಿಜಯ್ ಸಿಂಗ್ ತಮ್ಮ ಮಗಳ ಮದುವೆ ಸಿದ್ದತೆಯಲ್ಲಿ ತೊಡಗಿದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಒಟ್ಟಿನಲ್ಲಿ ಕಾಂಗ್ರೆಸ್‌ನಲ್ಲಿ ಇಂದು ಒಗ್ಗಟ್ಟಿನ ಮಂತ್ರದ ಜಪ ನಡೆಯಿತು.

Write A Comment