ನಾಗೌರ್(ರಾಜಸ್ಥಾನ್), ಮೇ 16: ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಮೇಲ್ಜಾತಿ ಸಮುದಾಯದವರು ಮೂವರು ದಲಿತರ ಮೇಲೆ ಟ್ರಾಕ್ಟರ್ ಹರಿಸಿ ಹತ್ಯೆ ಮಾಡಿ, 7 ಜನರನ್ನು ಗಂಭೀರವಾಗಿ ಗಾಯಗೊಳಿಸಿರುವ ಹೇಯ ಘಟನೆಯೊಂದು ರಾಜಸ್ಥಾನದ ನಾಗೌರ್ ಜಿಲ್ಲೆಯ ದಂಗಾವಾಸ್ ಎಂಬ ಗ್ರಾಮದಲ್ಲಿ ನಡೆದಿದೆ.
ಕಳೆದ ಕೆಲವು ವರ್ಷಗಳಿಂದ ಈ ಹಳ್ಳಿಯಲ್ಲಿ ದಲಿತರು ಮತ್ತು ಜಾಟರ ನಡುವೆ ಜಮೀನು ವಿವಾದವೊಂದು ಆರಂಭವಾಗಿದ್ದು, ಇದೀಗ ನ್ಯಾಯಾಲಯದಲ್ಲಿದೆ. ಆದರೆ ಗ್ರಾಮ ಪಂಚಾಯ್ತಿಯವರು ಈ ವಿಷಯವನ್ನು ಪಂಚಾಯ್ತಿಗೆ ಸೇರಿಸಿದರು. ಪಂಚಾಯ್ತಿ ವೇಳೆ ಗಲಾಟೆ ಆರಂಭವಾಯ್ತು.ಅವರಲ್ಲಿ ಒಬ್ಬ ಜಾಟ್ ವ್ಯಕ್ತಿ ಸಾವನಪ್ಪಿದ. ಇದರಿಂದ ಕೆರಳಿದ ಜಾಟರು ಹಲ್ಲೆಗೆ ಮುಂದಾದರು.
ಹೆದರಿದ ದಲಿತರು ಅಲ್ಲಿಂದ ಓಡಲಾರಂಭಿಸಿದರು. ಜಾಟ್ ಸಮುದಾಯದವರು ಟ್ರಾಕ್ಟರ್ಗಳಲ್ಲಿ ಅವರನ್ನು ಬೆನ್ನಟ್ಟಿಕೊಂಡು ಹೋದರು. ಓಡುತ್ತಿದ್ದ ದಲಿತರ ಮೇಲೆ ಟ್ರಾಕ್ಟರ್ ನುಗ್ಗಿಸಿದ್ದರಿಂದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರು. ಇತರ 7 ಜನ ಗಾಯಗೊಂಡರು.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಜಾಟರು ಆಸ್ಪತ್ರೆ ಸುತ್ತುವರೆದು ಗಾಯಾಳುಗಳಿಗೆ ಚಿಕಿತ್ಸೆ ನೀಡದಂತೆ ತಡೆಯೊಡ್ಡಿದರು. ನಂತರ ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುಗಳನ್ನು ಅಜ್ಮೇರ್ ಆಸ್ಪತ್ರೆಗೆ ಸಾಗಿಸಿದರು. ಘಟನೆಯ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಆದರೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.