ಕರ್ನಾಟಕ

ಹಗರಣ ಮುಕ್ತ ಸರ್ಕಾರ ಎನ್ನುವ ಸಿಎಂ ಗೆ ಕುಮಾರ ಸವಾಲ್

Pinterest LinkedIn Tumblr

HDK-vs-Siddu

ಬೆಂಗಳೂರು, ಮೇ 14-ಸ್ವಚ್ಛ , ಪಾರದರ್ಶಕ, ಹಗರಣ ಮುಕ್ತ ಸರ್ಕಾರ ನೀಡುತ್ತಿದ್ದೇವೆ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ  ವ್ಯವಸ್ಥಿತವಾಗಿ ನಡೆಯುತ್ತಿರುವ ಒಂದಂಕಿ ಲಾಟರಿ ಹಾಗೂ ಮಟ್ಕಾ ದಂಧೆ ಕುರಿತ ತನಿಖೆಯನ್ನು ಸಿಬಿಐಗೆ ವಹಿಸಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಪ್ರೆಸ್‌ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ವ್ಯವಸ್ಥಿತವಾಗಿ ನಡೆಯುತ್ತಿರುವ

ಒಂದಂಕಿ ಲಾಟರಿ ಹಾಗೂ ಮಟ್ಕಾ ದಂಧೆಯನ್ನು ಸಿಬಿಐಗೆ ವಹಿಸಿದರೆ ನಾನು ಎಲ್ಲಾ ದಾಖಲೆಗಳನ್ನು ಕೊಡಲು ಸಿದ್ಧನಿದ್ದೇನೆ ಎಂದು ತಿಳಿಸಿದರು. ಈ ದಂಧೆಯ ಹಿಂದೆ ರಾಜನ್ ಮತ್ತು ರೀತು ಎಂಬ ಹೆಸರು ಕೇಳಿ ಬಂದಿದೆ. ಅವ್ಯಾಹತವಾಗಿ ದಂಧೆ ನಡೆಯುತ್ತಿದೆ. ಆದರೆ ಇತ್ತೀಚೆಗೆ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿಗಳು ಲಾಟರಿ ಜಾಗೃತದಳ ರದ್ದುಪಡಿಸುವುದಾಗಿ ಹೇಳಿಕೆ ನೀಡಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.

ಇದರ ಹಿಂದೆ ಏನು ಉದ್ದೇಶವಿದೆ. ಈ ದಂಧೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲವೇ? ಎಂದ ಅವರು, ಈ ದಂಧೆಯನ್ನು ಕೋಟ್ಯಂತರ ರೂ. ಹಗರಣ ಮುಕ್ತ  ಸರ್ಕಾರ ಎಂದು ಘೋಷಿಸಿಕೊಳ್ಳುವವರು ತಾಕತ್ತಿದ್ದರೆ, ಸಿಬಿಐಗೆ ವಹಿಸಲಿ ಎಂದು ಹೇಳಿದರು.
ಮುಖ್ಯಮಂತ್ರಿಗಳ ತವರು ಜಿಲ್ಲೆಯಾದ ಮೈಸೂರಿನಲ್ಲೇ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ಸಾಗಿದೆ. ಇದರ ನಿಯಂತ್ರಣಕ್ಕೆ ಏನು ಕ್ರಮಕೈಗೊಂಡಿದ್ದೀರಿ? ಎಂದ ಅವರು, ಚೆಕ್‌ಪೋಸ್ಟ್‌ಗಳಲ್ಲಿ ಲಾರಿಗಳನ್ನು ತಡೆಹಿಡಿದಾಗ ಅದನ್ನು ಬಿಟ್ಟುಕೊಡಲು ಶಾಸಕರಿಂದಲೇ ಸೂಚನೆ ರವಾನೆಯಾಗುತ್ತದೆ.  ಇದು ಭ್ರಷ್ಟಾಚಾರ ಮುಕ್ತ ಹೇಗಾದೀತು ಎಂದು ಹರಿಹಾಯ್ದರು. ಜನಪರ ಸರ್ಕಾರ ಎಂದು ಬೊಬ್ಬೆ ಹೊಡೆಯುತ್ತಿರುವವರು ಜನರ ಸಮಸ್ಯೆಗಳ ನಿವಾರಣೆಗೆ ಹೆಚ್ಚು ಒತ್ತು ಕೊಡುತ್ತಿಲ್ಲ. ವಿರೋಧ ಪಕ್ಷಗಳನ್ನು ಟೀಕಿಸುವುದಕ್ಕಾಗಿಯೇ ಸಮಯ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದ ಅವರು, ಅಹಿಂದಾ ಪರವಾಗಿದ್ದೇನೆ. ಇದರಲ್ಲಿ ಯಾವುದೇ ಮುಜುಗರವಿಲ್ಲ ಎಂದು ಹೇಳಿಕೊಂಡಿದ್ದ ಮುಖ್ಯಮಂತ್ರಿಗಳು ಅಹಿಂದಾ ವರ್ಗದ ಅಭಿವೃದ್ಧಿಗೆ ಎಷ್ಟು ಹಣ ನೀಡಿದ್ದೀರಿ. ಕೇವಲ ಪ್ರಚಾರಕ್ಕೆ ಹೇಳಿಕೊಳ್ಳುತ್ತಿದ್ದೀರಾ ಎಂದು ವ್ಯಂಗ್ಯವಾಡಿದರು.

ಎಸ್ಸಿ-ಎಸ್ಟಿ ಅನುದಾನ ಬಳಕೆ ಕಾಯ್ದೆ ಜಾರಿಗೊಳಿಸಿ ಸಮಾಜ ಕಲ್ಯಾಣ ಇಲಾಖೆಯ 15,800 ಕೋಟಿ ರೂ.ಗಳಲ್ಲಿ ಇದುವರೆಗೆ ಎಷ್ಟು ಖರ್ಚಾಗಿದೆ ಎಂದ ಅವರು, ಎರಡು ವರ್ಷ ಪೂರೈಸುತ್ತಿರುವ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಎಷ್ಟು ಪ್ರಯೋಜನವಾಗಿದೆ ಎಂಬುದು ತಿಳಿದುಬಂದಿಲ್ಲ.  ಬೋರ್‌ವೆಲ್ ಕೊರೆಯುವ ಗುತ್ತಿಗೆದಾರರಿಗೆ 700 ಕೋಟಿ ರೂ. ಇನ್ನೂ ಬಾಕಿ ಇದೆ. ಸಾಲ ಮನ್ನಾ ಮಾಡುವುದಾಗಿ ಹೇಳಿಕೊಳ್ಳಲಾಗುತ್ತಿದೆ. ಆದರೆ ಇದನ್ನು ಇವರ ಖಜಾನೆಯಿಂದ ಕೊಟ್ಟಿಲ್ಲ. ನಿಗಮ, ಮಂಡಳಿಗಳಿಂದ ಹೊಂದಾಣಿಕೆ ಮಾಡಿಕೊಂಡ ಹಣದಿಂದ ನೀಡಿದ್ದೀರಿ ಎಂದರು.  ಕಳೆದ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ 5 ವರ್ಷ ಪೂರೈಸುವಷ್ಟರಲ್ಲಿ ಸಾಕಷ್ಟು ಸಾಲ ಮಾಡಿದೆ ಎಂದು ಹೇಳಿಕೊಳ್ಳುತ್ತಾ ಬಂದಿದ್ದೀರಿ. ಆದರೆ ನಿಮ್ಮ ಸರ್ಕಾರ ಎರಡು ಪೂರ್ಣಗೊಳಿಸುವಷ್ಟರಲ್ಲೇ ಅದಕ್ಕಿಂತ ದುಪ್ಪಟ್ಟು ಹಣ ಸಾಲ ಮಾಡಿದೆ. ನಿಮ್ಮ ಸರ್ಕಾರದ ಕೆಲಸಗಳಿಂದ ಜನತೆಗೆ ತೃಪ್ತಿ ತಂದಿಲ್ಲ ಎಂದು ಕಿಡಿಕಾರಿದರು.

ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೇ ಇಲ್ಲ ಎಂದು ಜಲಸಂಪನ್ಮೂಲ ಸಚಿವರು ಹೇಳುತ್ತಿದ್ದಾರೆ. ಈ ಬಗ್ಗೆ ವಿರೋಧ ಪಕ್ಷಗಳ ಟೀಕೆಯನ್ನು ಸವಾಲಾಗಿ ಸ್ವೀಕರಿಸುವುದಾಗಿ ಹೇಳಿದ್ದಾರೆ. ನೀವೇ ವೇದಿಕೆ ಸಿದ್ದಪಡಿಸಿ. ನಮ್ಮ ಸವಾಲಿಗೆ ಉತ್ತರಿಸಿ ಎಂದು ಹೇಳಿದರು.  ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಟಾಸ್ಕ್‌ಫೋರ್ಸ್ ರಚನೆ ಮಾಡಲು 2 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದಿರಿ, ಎರಡು ವರ್ಷದಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ. ಈ ಅಂಕಿಅಂಶವನ್ನು ಬಹಿರಂಗಪಡಿಸಲು ಸಿದ್ಧವೇ ಎಂದು ಪ್ರಶ್ನಿಸಿದರು.
ಕಬ್ಬು ಬೆಳೆಗಾರರಿಗೆ 2,800 ಕೋಟಿ ರೂ. ಇನ್ನೂ ಬಾಕಿ ನೀಡಬೇಕಿದೆ. ಸರ್ಕಾರ ಒಂದು ಟನ್ ಕಬ್ಬಿಗೆ 2,500 ರೂ. ನಿಗದಿಪಡಿಸಿದ್ದರೂ, ಕಾರ್ಖಾನೆ ಮಾಲೀಕರು 1,500 ರೂ.ಗಿಂತ ಹೆಚ್ಚಿಗೆ ನಯಾ ಪೈಸೆ ಕೊಟ್ಟಿಲ್ಲ. ಈ ಬಗ್ಗೆ ಸರ್ಕಾರ ಏನು ಕ್ರಮಕೈಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಮಾರ್ಚ್ ತಿಂಗಳಲ್ಲಿ ದಾಳಿಂಬೆ ಬೆಳೆಗಾರರು ನಾವು ಸಂಕಷ್ಟಕ್ಕೆ ಸಿಲುಕಿದ್ದು ದಯಾ ಮರಣಕ್ಕೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಈ ವಿಷಯ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿಲ್ಲವೇ? ಹಸಿವು ಮುಕ್ತ ರಾಜ್ಯ ಎಂದು ಹೇಳಿಕೊಳ್ಳುತ್ತಿರುವವರು ರೈತರ ಈ ಗೋಳಿಗೆ ಸ್ಪಂದಿಸುತ್ತಿಲ್ಲವೇಕೆ? ಮುಖ್ಯಮಂತ್ರಿಗಳು ಸುಳ್ಳನ್ನೇ ಸತ್ಯ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.

ನಿಷ್ಠಾವಂತ ಅಧಿಕಾರಿಗಳಿಗೆ ಇಲ್ಲಿ ಮಾನ್ಯತೆ ಇಲ್ಲ. ಆದರೂ ಸರ್ಕಾರ ನಮ್ಮದು ಸ್ವಚ್ಛ ಸರ್ಕಾರ ಎಂದು ಹೇಳಿಕೊಳ್ಳುತ್ತಿದೆ. ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ನೆನಪಿರಲಿ ನಿಮ್ಮನ್ನು ಬೆಳೆಸಿದ ಪಕ್ಷ ಜೆಡಿಎಸ್, ನೀವು ಹತ್ತಿದ ಏಣಿಯನ್ನೇ ಒದೆಯಬೇಡಿ. ನಮ್ಮ ಪಕ್ಷಕ್ಕೆ ಒಂದು ಸರ್ಕಾರವನ್ನು ಕೆಡವಿಹಾಕುವ ಶಕ್ತಿ ಇದೆ ಎಂದು  ವಿಶ್ವಾಸದಿಂದ ನುಡಿದರು. ನಿಮಗೆ ನಮ್ಮ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಇನ್ನೂ 530 ಎಕರೆ ಭೂಮಿಯ ದಾಖಲಾತಿ ನೀಡಿಲ್ಲ. ದನಿ ಇಲ್ಲದವರ ದನಿ ಈ ಸರ್ಕಾರ ಎಂದು ಹೇಳುತ್ತಾರೆ. ಆದರೆ ಒಂದೆಡೆ ಅಮಾಯಕರ ಮನೆ ಒಡೆದು ಹಾಕಿದ್ದಾರೆ. ಇಲ್ಲಿ ಅಂತಹ ದನಿ ಇಲ್ಲದವರ ಬಗೆಗಿನ ಕಾಳಜಿ ಎಲ್ಲಿ ಕಾಣುತ್ತಿದೆ ಎಂದು ಕೇಳಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಣೈ, ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಉಪಸ್ಥಿತರಿದ್ದರು.

-ಈ ಸಂಜೆ

Write A Comment