ಕೊಳ್ಳೇಗಾಲ, ಮೇ 12: ತಮಿಳುನಾಡಿನಿಂದ ಕಬ್ಬು ಕಟಾವಿಗೆ ಬಂದಿದ್ದ ಮೂರು ಕುಟುಂಬಗಳ ನಡುವೆ ಮಧ್ಯರಾತ್ರಿ ನಡೆದ ಮಾರಾಮಾರಿಯಲ್ಲಿ ಒಂದೇ ಕುಟುಂಬದ ಐವರನ್ನು ಬರ್ಬರವಾಗಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಗ್ರಾಮಾಂತರ ಪೊಲೀಸ್ಠಾಣೆ ವ್ಯಾಪ್ತಿಯ ಹರಳೆ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ನತದೃಷ್ಟರನ್ನು 8 ವರ್ಷದ ಬಾಲಕಿ ರೋಜಾ, ಶಿವಮ್ಮ(33), ರಾಜೇಂದ್ರ (43), ಕಾಶಿ(40) ಹಾಗೂ ರಾಜಮ್ಮ(40) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ನಿವಾಸಿಗಳು.
ಚಾಮರಾಜನಗರ, ಕೊಳ್ಳೇಗಾಲ ಸುತ್ತಮುತ್ತ ಜಮೀನನಲ್ಲಿ ಕಬ್ಬು ಕಟಾವಿಗಾಗಿ ಕಳೆದ ಎರಡು-ಮೂರು ವರ್ಷಗಳಿಂದ ತಮಿಳುನಾಡಿನಿಂದ ಕೂಲಿಕಾರ್ಮಿಕರು ಬಂದು ಕೆಲಸ ಮುಗಿಯುವವರೆಗೂ ಜಮೀನಿನಲ್ಲೇ ಶೆಡ್ಡು ಹಾಕಿಕೊಂಡು ವಾಸಮಾಡುತ್ತಾ ಪೂರ್ಣ ಕಟಾವು ಮುಗಿದ ನಂತರ ತಮ್ಮ ಗ್ರಾಮಗಳಿಗೆ ಮರಳುತ್ತಾರೆ.
ಅದರಂತೆ 15 ದಿನಗಳ ಹಿಂದಷ್ಟೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಿಂದ ಮೂರು ಕುಟುಂಬಕ್ಕೆ ಸೇರಿದ ಒಟ್ಟು 20 ಮಂದಿ ಕೊಳ್ಳೇಗಾಲದ ಹರಳೆ ಗ್ರಾಮಕ್ಕೆ ಬಂದು ಇಲ್ಲಿನ ಮಹದೇವಮ್ಮ ಎಂಬುವವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದರು. ಇವರ ಜಮೀನಿನಲ್ಲೇ ಶೆಡ್ ನಿರ್ಮಿಸಿಕೊಂಡು ಈ 20 ಮಂದಿ ವಾಸಿಸುತ್ತಿದ್ದರು. ರಾತ್ರಿ ಎಂದಿನಂತೆ ಊಟ ಮುಗಿಸಿದ್ದಾರೆ.
ಮಧ್ಯರಾತ್ರಿ ಒಂದು ಕುಟುಂಬದ ವಿರುದ್ಧ ವೈಯಕ್ತಿಕ ವಿಚಾರವಾಗಿ ಎರಡು ಕುಟುಂಬಗಳು ವಿನಾಕಾರಣ ಜಗಳ ತೆಗೆದು ಮಾತಿಗೆ ಮಾತು ಬೆಳೆದಿದೆ. ಇದು ವಿಕೋಪಕ್ಕೆ ತಿರುಗಿದಾಗ ಕುಡಿದ ಮತ್ತಿನಲ್ಲಿದ್ದ ಹಲವರು ಒಂದೇ ಕುಟುಂಬದ ಐದು ಜನರ ಮೇಲೆ ದೊಣ್ಣೆ ಹಾಗೂ ಮಚ್ಚುಗಳಿಂದ ಮನ ಬಂದಂತೆ ಹಲ್ಲೆ ಮಾಡಿದ್ದಾರೆ.ಹಲ್ಲೆಯಿಂದ ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಒಬ್ಬೊಬ್ಬರಂತೆ 5 ಮಂದಿ ಕುಸಿದು ಮೃತಪಡುತ್ತಿದ್ದಂತೆ ಅಲ್ಲಿದ್ದವರೆಲ್ಲ ಪರಾರಿಯಾಗಿದ್ದಾರೆ.
ಇಂದು ಮುಂಜಾನೆ ಜಮೀನು ಮಾಲಿಕರಾದ ಮಹದೇವಮ್ಮ ಜಮೀನಿಗೆ ಬಂದಾಗ ಕೂಲಿ ಕಾರ್ಮಿಕರಿದ್ದ ಶೆಡ್ಡಿನಲ್ಲಿ ರಕ್ತ ಚೆಲ್ಲಾಡಿದನ್ನು ಗಮನಿಸಿ ಸಮೀಪ ಹೋಗಿ ನೋಡಿದಾಗ ಐದು ಮಂದಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಗಾಬರಿಯಾಗಿ ಸ್ಥಳೀಯರನ್ನು ಕರೆತಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕಾಗಮಿಸಿದ ಗ್ರಾಮಾಂತರ ಠಾಣೆ ಪಿಎಸ್ಐ ಮೋಹಿತ್ ಸಹದೇವ್, ಸಿಪಿಐ ಅರಮನಾರಾಯಣ್, ಡಿವೈಎಸ್ಪಿ ವೆಂಕಟರಮಣಪ್ಪ, ಎಸ್ಪಿ ರಂಗಸ್ವಾಮಿನಾಯಕ್ ಪರಿಶೀಲನೆ ನಡೆಸಿ ಐದು ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಐದು ಮಂದಿಯನ್ನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿರುವ ಉಳಿದ ಕೂಲಿ ಕಾರ್ಮಿಕರಿಗಾಗಿ ಶೋಧನಾಕಾರ್ಯ ಮುಂದುವರೆದಿದೆ.