ಕರ್ನಾಟಕ

ಕೆಎಸ್‌ಆರ್‌ಟಿಸಿ-ಲಾರಿ ನಡುವೆಭೀಕರ ಅಪಘಾತ : ನಾಲ್ವರ ದುರ್ಮರಣ

Pinterest LinkedIn Tumblr

yalahanka3-Acc

ಬೆಂಗಳೂರು,ಮೇ 8: ಕೆಎಸ್‌ಆರ್‌ಟಿಸಿ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ರಾಜಾನುಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರ ಹೆಸರು, ವಿಳಾಸ ಸದ್ಯಕ್ಕೆ ತಿಳಿದುಬಂದಿಲ್ಲ. ಬೆಂಗಳೂರಿನಿಂದ ಹಿಂದೂಪುರಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಯಲಹಂಕದ ಮಾರಸಂದ್ರ ಮಾರ್ಗದಲ್ಲಿ ಬರುತ್ತಿತ್ತು. ಅತ್ತ ದೊಡ್ಡಬಳ್ಳಾಪುರದಿಂದ ಸಿಮೆಂಟ್ ತುಂಬಿಕೊಂಡು ಸುಂದರಂ ಮೋಟಾರ‌ಸ್ ಗೆ ಸೇರಿದ ಅಶೋಕ ಲೇ ಲ್ಯಾಂಡ್ ಲಾರಿ ಅತ್ತಿಬೆಲೆ ಕಡೆಗೆ ಹೋಗುತ್ತಿತ್ತು. ಇಂದು ಬೆಳಗ್ಗೆ 11.30ರಲ್ಲಿ ಈ ಎರಡೂ ವಾಹನಗಳು ಮಾರಸಂದ್ರ ಬಳಿ ಬರುತ್ತಿದ್ದಂತೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಲಾರಿಯಲ್ಲಿದ್ದ ಮೂವರು ಹಾಗೂ ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತಪಟ್ಟವರನ್ನು ಲಾರಿ ಚಾಲಕ, ಕ್ಲೀನರ್ ಹಾಗೂ ಲಾರಿಯಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಮತ್ತು ಬಸ್ಸಿನ ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕ ಎಂದು ಹೇಳಲಾಗಿದೆ. ಬಸ್‌ನಲ್ಲಿ ಒಟ್ಟು 40 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಅಪಘಾತದಿಂದಾಗಿ ಬಸ್ ಚಾಲಕ ಸೇರಿ 20 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರೆಲ್ಲರನ್ನು ಯಲಹಂಕ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ ಮತ್ತು ದೊಡ್ಡಬಳ್ಳಾಪುರ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಉಳಿದ ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ರಾಜಾನುಕುಂಟೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಬ್ಬಂದಿಗಳ ನೆರವಿನಿಂದ ವಾಹನದಲ್ಲಿ ಸಿಲುಕಿಕೊಂಡಿದ್ದ ನಾಲ್ವರ ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ.

ಈ ಭೀಕರ ಅಪಘಾತದಿಂದಾಗಿ ಬಸ್ಸು ಹಾಗೂ ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅಪಘಾತದಿಂದಾಗಿ ಮಾರಸಂದ್ರದಿಂದ ರಾಜಾನುಕುಂಟೆವರೆಗೆ ಸುಮಾರು 3 ಕಿ.ಮೀನಷ್ಟು ಸಂಚಾರ ಸ್ಥಗಿತಗೊಂಡಿದ್ದರಿಂದ ವಾಹನಗಳು ನಿಂತದ್ದ ಸ್ಥಳದಲ್ಲೇ ನಿಂತಿದ್ದರು.

ಈ ರಸ್ತೆ ಕಿರಿದಾಗಿರುವುದರಿಂದ ಆಗಿಂದಾಗ್ಗೆ ಅಪಘಾತಗಳು ಸಂಭವಿಸಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಾನುಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು.

Write A Comment