ಕರ್ನಾಟಕ

ಕೇರಳದಲ್ಲಿ ಮಿಂಚುತ್ತಿರುವ ಕನ್ನಡದ ಸಿಂಗಂ!

Pinterest LinkedIn Tumblr

ಸಿನಗಮ

ಬೆಂಗಳೂರು: ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಲು ವ್ಯವಸ್ಥೆಯ ವಿರುದ್ಧವೇ ತಿರುಗಿ ಬೀಳುವ ಖಡಕ್‌ ಪೊಲೀಸ್‌ ಅಧಿಕಾರಿಯ ಚಿತ್ರಕಥೆ ಹೊಂದಿದ ಬಾಲಿವುಡ್‌ ಸಿನಿಮಾ “ಸಿಂಗಂ’ ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಸದ್ದು ಮಾಡಿತ್ತು. ಇದಾದ ನಂತರ ದೇಶದ ವಿವಿಧೆಡೆ ನಿಜ ಜೀವನದ ಖಡಕ್‌ ಪೊಲೀಸರು ಬೆಳಕಿಗೆ ಬಂದರು. ಅವರಿಗೆ ಸಿಂಗಂ ಎಂಬುದು ಅನ್ವರ್ಥನಾಮವಾಗಿ ಬಳಕೆಯಾಗುತ್ತಿದೆ.

ಇದೀಗ ಇಂತಹ ಸಾಧನೆ ತೋರುವ ಸರದಿ ಕನ್ನಡಿಗ ಸಿಂಗಂನದ್ದು. ಕುತೂಹಲದ ವಿಷಯವೆಂದರೆ, ಈತ ಕರ್ನಾಟಕದ ಸಿಂಗಂ ಅಲ್ಲ, ಬದಲಾಗಿ “ಕೇರಳ ಸಿಂಗಂ’. ಹೌದು, ಕನ್ನಡಿಗರೊಬ್ಬರು ಕೇರಳದಲ್ಲಿ ಮನೆಮಾತಾಗಿದ್ದು, ಕೇರಳಿಗರಿಂದ ಕೇರಳ ಸಿಂಗಂ ಎಂಬ ಅಭಿದಾನ ಪಡೆದುಕೊಂಡಿದ್ದಾರೆ. ಅವರು- ಜಿ.ಎಚ್‌.ಯತೀಶ್‌ಚಂದ್ರ. ಕಾರ್ಯಕ್ಷೇತ್ರ ಮತ್ತು ಹುದ್ದೆ- ಕೇರಳದ ಎರ್ನಾಕುಲಂ ಗ್ರಾಮೀಣ ಜಿಲ್ಲಾ ವರಿಷ್ಠಾಧಿಕಾರಿ. ಅಪರಾಧಗಳನ್ನು ಮಟ್ಟಹಾಕಲು ತೆಗೆದುಕೊಂಡ ತೀರ್ಮಾನಗಳು ಹಾಗೂ ಜನಸ್ನೇಹಿ ಕ್ರಮಗಳಿಂದ ಯತೀಶ್‌ಚಂದ್ರ ಅವರಿಗೆ ಕಮ್ಯುನಿಸ್ಟ್‌ ರಾಜ್ಯದ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ತಾಣಗಳು ಕೊಟ್ಟ ಬಿರುದು “ಕೇರಳ ಸಿಂಗಂ.’

ಕೇವಲ ಒಂದು ತಿಂಗಳ ಹಿಂದಿನ ಮಾತು- ಕೇರಳ ವಿಧಾನಸಭೆಯಲ್ಲಿ ನಡೆದ ಗದ್ದಲದಿಂದಾಗಿ ಪ್ರತಿಭಟನೆಗಳ ಕಾವು ಜೋರಾಗಿತ್ತು. ಈ ಸಂದರ್ಭದಲ್ಲಿ ಎರ್ನಾಕುಲಂ ವ್ಯಾಪ್ತಿಗೆ ಬರುವ ವಿಮಾನ ನಿಲ್ದಾಣದ ಬಳಿ ವಿದೇಶಿ ಪ್ರವಾಸಿಗರನ್ನು ಪ್ರತಿಭಟನಾಕಾರರು ತಡೆದು ನಿಲ್ಲಿಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಸ್ವಲ್ಪ ಯಾಮಾರಿದರೂ ದೇಶಕ್ಕೇ ಕಪ್ಪುಚುಕ್ಕೆ ಅಂಟುತ್ತಿತ್ತು. ಆದರೆ ಸುದ್ದಿ ಮುಟ್ಟುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಎಸ್ಪಿ ಯತೀಶ್‌ಚಂದ್ರ, ಸಾಮಾನ್ಯ ಪೊಲೀಸ್‌ ಕಾನ್‌ಸ್ಟೆàಬಲ್‌ನಂತೆ ಲಾಠಿ ಹಿಡಿದು ಗುಂಪು ಚದುರಿಸಿ ಕೆಲವೇ ನಿಮಿಷಗಳಲ್ಲಿ ಪ್ರವಾಸಿಗರಿಗೆ ದಾರಿಮಾಡಿಕೊಟ್ಟರು.

ಇದಾಗಿ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತೂರಿಬಂದ ಹೆಸರೇ “ಕೇರಳ ಸಿಂಗಂ’.
ಕೇವಲ ಲಾಠಿ ಬೀಸಿದ ಕಾರಣಕ್ಕೆ ಯತೀಶ್‌ಚಂದ್ರ “ಸಿಂಗಂ’ ಆಗಲಿಲ್ಲ. ಅತ್ಯಲ್ಪ ಅವಧಿಯಲ್ಲಿ ಅವರು ಕೈಗೊಂಡ ಕ್ರಮಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಪೊಲೀಸರು ಮತ್ತು ಠಾಣೆಗಳ ಬಗೆಗಿನ ಜನರ ದೃಷ್ಟಿಕೋನದಲ್ಲಿ ಪರಿವರ್ತನೆ ಕಂಡುಬರುತ್ತಿದೆ. ಎಸ್ಪಿ ಆದ ನಂತರವಲ್ಲ; ಇದಕ್ಕೂ ಮುನ್ನ ಯತೀಶ್‌ಚಂದ್ರ ಸಬ್‌ ಇನ್‌ಸ್ಪೆಕ್ಟರ್‌ ಆಗಿದ್ದಾಗ ನೌರಾತ್‌ನಲ್ಲಿ ತೀವ್ರವಾದಿ ಸಂಘಟನೆಗಳ ಮೇಲೆ ದಾಳಿ ನಡೆಸಿದ್ದರು. ಈ ಪ್ರಕರಣದ ಬಗ್ಗೆ ಈಗ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿದೆ. ಇದಾದ ನಂತರ ವರಕಡ ಎಂಬಲ್ಲಿ ಕೋಟ್ಯಂತರ ರೂ. ಹವಾಲಾ ಹಣ ಜಪ್ತಿ ಮಾಡಿದ್ದರು. ಇದರಿಂದ ಆ ಭಾಗದಲ್ಲಿ ಹವಾಲಾ ಹಣಕ್ಕೆ ಕೊಂಚ ಕಡಿವಾಣವೂ ಬಿದ್ದಿತು.

ತಮ್ಮ ಕಾರ್ಯವೈಖರಿ ಬಗ್ಗೆ ಯತೀಶ್‌ಚಂದ್ರ ಹೇಳುವುದಿಷ್ಟು- “ನಾನು ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ ಅಷ್ಟೇ. ನಾವು ನಮ್ಮ ಕೊಠಡಿಯಲ್ಲಿದ್ದಾಗ ಮಾತ್ರ ಎಸ್ಪಿ. ಫೀಲ್ಡ್‌ಗೆ ಇಳಿದಾಗ ನಾನೂ ಒಬ್ಬ ಸಾಮಾನ್ಯ ಕಾನ್‌ಸ್ಟೆàಬಲ್‌.’

ಫೇಸ್‌ಬುಕ್‌ನಲ್ಲಿ ಕಾರ್ಯಾಚರಣೆ: ಎರ್ನಾಕುಲಂನ ಸಾರ್ವಜನಿಕ ಸ್ಥಳಗಳಲ್ಲಿ ಹುಡುಗಿಯರನ್ನು ಚುಡಾಯಿಸುವುದು ಹಾಗೂ ಕಾಲೇಜುಗಳಲ್ಲಿ ಡ್ರಗ್ಸ್‌ ಪೂರೈಕೆ ಇತರೆಡೆ ಹೋಲಿಸಿದರೆ ತುಸು ಹೆಚ್ಚಿದೆ. ಇದಕ್ಕೆ ಕಡಿವಾಣ ಹಾಕಲು ಯತೀಶ್‌ಚಂದ್ರ ಕಂಡುಕೊಂಡ ದಾರಿ ಫೇಸ್‌ಬುಕ್‌. ಠಾಣೆವರೆಗೆ ಬಂದು ದೂರು ಅಥವಾ ಮಾಹಿತಿ ಕೊಡಲು ಯಾರಾದರೂ ಹಿಂದೇಟು ಹಾಕುತ್ತಾರೆ. ಹಾಗಾಗಿ, ಸಾಮಾಜಿಕ ಜಾಲತಾಣದ ಮೂಲಕ ತಾವಿದ್ದಲ್ಲಿಂದಲೇ ದೂರು ಸಲ್ಲಿಸಲು ಅವಕಾಶ ಕಲ್ಪಿಸಿದ್ದಾರೆ. ಆಗ ತಕ್ಷಣ ನಿಯಂತ್ರಣ ಕೊಠಡಿ ಸಿಬ್ಬಂದಿ ದೂರು ಸ್ವೀಕರಿಸಿ ಸಂಬಂಧಪಟ್ಟವರಿಗೆ ರವಾನಿಸುತ್ತಾರೆ. ಅಲ್ಲಿಂದ ಕೆಲವೇ ಕ್ಷಣಗಳಲ್ಲಿ ಪರಿಶೀಲಿಸಿ ಅಷ್ಟೇ ವೇಗದಲ್ಲಿ ದೂರುದಾರರಿಗೆ ಫ‌ಲಿತಾಂಶ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಆದರೆ, ದೂರುದಾರ ಅಥವಾ ಮಾಹಿತಿದಾರರ ಹೆಸರು ಗೌಪ್ಯವಾಗಿಡಲಾಗುತ್ತದೆ. ನಿತ್ಯ ನೂರಾರು ದೂರುಗಳು ಈ ಮೂಲದಿಂದಲೇ ಬರುತ್ತವೆ. ಹಾಗಾಗಿ, ಜನ ಠಾಣೆಗಳಿಗೆ ಅಲೆದಾಡುವುದೂ ಕಡಿಮೆಯಾಗಿದೆ ಎನ್ನುತ್ತಾರೆ ಯತೀಶ್‌ಚಂದ್ರ.

ಇನ್ನು ಎರ್ನಾಕುಲಂ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಂಡುಬರುವ ಅಪರಾಧಗಳೆಂದರೆ ಗಾಂಜಾ, ಲಿಕ್ಕರ್‌ ಮತ್ತಿತರ ವಸ್ತುಗಳ ಕಳ್ಳಸಾಗಣೆ. ರಾತ್ರೋರಾತ್ರಿ ಸಾರ್ವಜನಿಕರಿಂದ ತುಂಬಾ ದೂರುಗಳು ಬರುತ್ತಿದ್ದವು. ಆದರೆ, ಸ್ಥಳಕ್ಕೆ ಸಕಾಲಕ್ಕೆ ತಲುಪುವುದೇ ಸಮಸ್ಯೆಯಾಗಿತ್ತು. ಇದಕ್ಕಾಗಿ ಎಸ್ಪಿ ಯತೀಶ್‌ಚಂದ್ರ ನೂತನ ಪರಿಹಾರ ಕಂಡುಕೊಂಡಿದ್ದಾರೆ. ಠಾಣೆಯಲ್ಲಿರುವ ಗುಜರಿಯಲ್ಲಿದ್ದ 14 ವಾಹನಗಳನ್ನು ದುರಸ್ತಿ ಮಾಡಿ, “ಸ್ಪೈಡರ್‌’ ಎಂಬ ಹೆಸರಿನಲ್ಲಿ ಕಾರ್ಯಾಚರಣೆಗೆ ಬಿಟ್ಟಿದ್ದಾರೆ. ಅವುಗಳು 24×7 ಕಾರ್ಯನಿರ್ವಹಿಸುತ್ತಿದ್ದು, ಈ ವಾಹನಗಳಿಗೆ ರೊಟೇಷನ್‌ ಪದ್ಧತಿಯಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ವೀಲಿಂಗ್‌ ಮತ್ತಿತರ ನಿಯಮ ಉಲ್ಲಂಘನೆಗೆ ವಸೂಲಿ ಮಾಡುವ ದಂಡದ ಅಲ್ಪ ಮೊತ್ತವನ್ನೇ ಈ ವಾಹನಗಳ ಡೀಸೆಲ್‌ಗೆ ವಿನಿಯೋಗಿಸಲಾಗುತ್ತಿದೆ. ತಿಂಗಳಿಗೆ 400ಕ್ಕೂ ಹೆಚ್ಚು ಕರೆಗಳು “ಸ್ಪೈಡರ್‌’ಗೆ ಬರುತ್ತಿವೆ. ಇದೊಂದು ವಿನೂತನ ಪ್ರಯೋಗ. ಜನರಿಂದ ಉತ್ತಮ ಸ್ಪಂದನೆಯೂ ದೊರೆಯುತ್ತಿದೆ ಎಂದು ಹೇಳುತ್ತಾರೆ ಅವರು.

ಇನ್ನು ಹೊರರಾಜ್ಯಗಳಿಂದ ಎರ್ನಾಕುಲಂಗೆ ಬರುವವರ ಸಂಖ್ಯೆ ಸಾಕಷ್ಟಿದೆ. ಅವರೆಲ್ಲರೂ ಬಾಂಗ್ಲಾ ವಲಸಿಗರು ಎಂದು ಹೇಳಲಾಗದು. ಈ ವಲಸಿಗರಿಗೆ ಸಮಸ್ಯೆಗಳು ಶುರುವಾದಾಗ ಅಪಾರಧಿ ಕೃತ್ಯಗಳತ್ತ ಮುಖಮಾಡುತ್ತಾರೆ. ಆದ್ದರಿಂದ ಅವರ ಸಮಸ್ಯೆಗಳನ್ನು ಅರಿಯಲು ಸ್ಥಳೀಯ ಎಂಬಿಎ ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ಅಧ್ಯಯನ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವರೊಂದಿಗೆ ಸ್ಥಳೀಯ ಕಾನ್‌ಸ್ಟೆàಬಲ್‌ ಒಬ್ಬರನ್ನು ಬಿಡಲಾಗುವುದು.

ಅಲ್ಲಿನ ಒಬ್ಬ ಮುಖಂಡನೊಂದಿಗೆ ಸ್ನೇಹ ಬೆಳೆಸಿ, ಸಮಸ್ಯೆಗಳನ್ನು ಅರಿತು ಪರಿಹರಿಸಲು ಯತ್ನಿಸಲಾಗುವುದು. ಇದರಿಂದ ಮುಂದಿನ ದಿನಗಳಲ್ಲಿ ಆ ವ್ಯಕ್ತಿಯೇ ನಮಗೆ ಮಾಹಿತಿದಾರ ಆಗುತ್ತಾನೆ. ಜತೆಗೆ ಅಪರಾಧಗಳೂ ಕಡಿಮೆಯಾಗುತ್ತವೆ ಎಂಬ ಲೆಕ್ಕಾಚಾರ ಯತೀಶ್‌ಚಂದ್ರ ಅವರದ್ದು.

ಇಂಜಿನಿಯರಿಂಗ್‌ ಓದಿ ಪೊಲೀಸ್‌ ಆದರು!

“ಕೇರಳ ಸಿಂಗಂ’ ಯತೀಶ್‌ಚಂದ್ರ ಅವರ ಮೂಲ ದಾವಣಗೆರೆ. ಕಲಿತದ್ದು ತರಳಬಾಳು ಅನುಭವ ಮಂಟಪದಲ್ಲಿ. ನಂತರ ಬಿಐಇಟಿಯಲ್ಲಿ ಇಂಜಿನಿಯರಿಂಗ್‌ ಮುಗಿಸಿದರು. ಅಲ್ಲಿಂದ ಮೋಟರೋಲಾ, ಸಿಟಿಎಸ್‌, ಎಚ್‌ಪಿ ಕಂಪನಿಗಳಲ್ಲಿ ಸುಮಾರು ನಾಲ್ಕೂವರೆ ವರ್ಷ ಸಾಫ್ಟ್ವೇರ್‌ ಕ್ಷೇತ್ರದಲ್ಲಿ ಕೆಲಸ ಮಾಡಿದರು. ನಂತರ 2011ರಲ್ಲಿ ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ 211ನೇ ರ್‍ಯಾಂಕ್‌ ಗಳಿಸಿ, ಅಲ್ಲಿಂದ ಕಣ್ಣೂರಿನಲ್ಲಿ ತರಬೇತಿ ಪಡೆದು, ಈಗ ಕೇರಳದ ಎರ್ನಾಕುಲಂನಲ್ಲಿ ಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆ ರೇಷ್ಮೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈಗ ನಿವೃತ್ತಿಯಾಗಿದ್ದಾರೆ. ಯತೀಶ್‌ಚಂದ್ರ ಅವರ ಪತ್ನಿ ಶಿರಸಿ ಹತ್ತಿರದ ಸಿದ್ದಾಪುರದವರು. ಐಎಎಸ್‌ ಆಗಬೇಕೆಂಬ ಇಚ್ಛೆ ಹೊಂದಿದ್ದರು. ಆದರೆ, ಐಪಿಎಸ್‌ಗೆ ಆಯ್ಕೆಯಾದರು. ನಿರಾಶರಾಗದೆ ಕೇರಳಕ್ಕೆ ಹೋಗಿ ತಮ್ಮ ಕೆಲಸದಿಂದಾಗಿ ಜನಪ್ರಿಯರಾದರು.
-ಉದಯವಾಣಿ

Write A Comment