ಬೆಂಗಳೂರು, ಮೇ 3: “ಪರೀಕ್ಷೆಯಲ್ಲಿ ನೀವು ನನ್ನನ್ನು ಫೇಲ್ ಮಾಡಿದರೆ ನಾನು ನಿಮ್ಮ ಕುಟುಂಬದ ಮೇಲೆ ಮಾಟ ಮಂತ್ರ ಮಾಡಿಸಿ ಎಲ್ಲರನ್ನು ಸಾಯಿಸುತ್ತೇನೆ.” ಬೆಚ್ಚಿ ಬಿದ್ದಿರಾ…. ಖಂಡಿತ ಇದು ತಮಾಷೆಯಲ್ಲ..!
ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಯೊಬ್ಬ ಮೌಲ್ಯಮಾಪಕರಿಗೆ ಹಾಕಿರುವ ಧಮಕಿ ಇದು. ಈ ಬಗ್ಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಯಶೋಧಾ ಬೋಪಣ್ಣ ಮಾಧ್ಯಮವೊಂದಕ್ಕೆ ಬಹಿರಂಗಪಡಿಸಿದ್ದಾರೆ. 16ರ ಹರೆಯದ ಈ ವಿದ್ಯಾರ್ಥಿ ಗಣಿತ ಶಾಸ್ತ್ರದ ಪತ್ರಿಕೆಯಲ್ಲಿ ಈ ರೀತಿ ಬೆದರಿಕೆ ಹಾಕಿದ್ದು ತನ್ನನ್ನು ಅನುತ್ತೀರ್ಣಗೊಳಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹೆದರಿಸಿದ್ದಾನೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿಯ ಈ ರೀತಿಯ ಬೆದರಿಕೆಯುಳ್ಳ ಉತ್ತರ ಪತ್ರಿಕೆಯನ್ನು ಮೌಲ್ಯಮಾಪಕರು ವಾಟ್ಸ್‌ಆಪ್ ಮೂಲಕ ತಮಗೆ ಕಳುಹಿಸಿದ್ದು , ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟ ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಸೂಕ್ತ ತನಿಖೆಗೆ ಆದೇಶಿಸಲಾಗಿದ್ದು , ವಿದ್ಯಾರ್ಥಿಯ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದರ ಮೂಲಕ ಈ ಪದ್ಧತಿಗೆ ಅಂತ್ಯ ಹಾಡಲು ಪ್ರಯತ್ನಿಸಲಾಗುವುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಈ ರೀತಿ ಉತ್ತರ ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳು ಮೌಲ್ಯಮಾಪಕರಿಗೆ ಹೆದರಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಯಶೋಧರಾ ಭೋಪಣ್ಣ ಅವರು, ಇದರಿಂದ ಮೌಲ್ಯಮಾಪಕರು ಮೌಲ್ಯಮಾಪನಕ್ಕೆ ಹಿಂಜರಿಯುವ ಪರಿಸ್ಥಿತಿ ಎದುರಾಗಿದೆ ಎಂದು ವಿಷಾದಿಸಿದ್ದಾರೆ. ಈ ನಡುವೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮೇ ಎರಡನೆ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಲಿದೆ ಎಂದ ಅವರು, ನಿಗದಿತ ದಿನಾಂಕವನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.